»   » ಕ್ರೇಜಿ ಅಂಕಲ್‌ ರಮೇಶ್‌ಭಟ್‌ಗೆ ಪತ್ರ

ಕ್ರೇಜಿ ಅಂಕಲ್‌ ರಮೇಶ್‌ಭಟ್‌ಗೆ ಪತ್ರ

Posted By:
Subscribe to Filmibeat Kannada

ಹೇಳ್ತೀನಿ ಕೇಳಿ, ನ್ಯಾಷನಲ್‌ ಕಾಲೇಜ್‌ ಇದೆಯಲ್ಲ, ಅದರ ಮುಂದೆ ಪ್ರಕಾಶ್‌ ಬಾದಾಮಿ ಹಾಲಿನ ಅಂಗಡಿ ಕಂ ಬೇಕರಿ ಇಟ್ಟುಕೊಂಡಿದ್ದರು ನಮ್ಮ ರಮೇಶ್‌ ಭಟ್‌. ಬೇಕರಿಗೆ ಬಂದವರೆಲ್ಲ ರಮೇಶ್‌ ಭಟ್‌ ಬೇಕ್‌ರೀ ಅಂತಿದ್ರು! ಚಿಕ್ಕಂದಿನಿಂದಲೂ ಅಷ್ಟೇ-ನಾಟಕ ಅಂದ್ರೆ ರಮೇಶ್‌ ಭಟ್‌ಗೆ ಜೀವ. ಅವ್ರು ಕ್ಲಾಸಿಗೆ ಆಗಾಗ ಚಕ್ಕರ್‌ ಹೊಡೀತಿದ್ರು ನಿಜ. ಆದರೆ ನಾಟಕದ ರಿಹರ್ಸಲ್‌ಗೆ ಒಂದು ಸಲವೂ ಕೂಡಾ ತಪ್ಪಿಸಿಕೊಂಡವರಲ್ಲ. ನಾಟಕದ ಗೀಳು ಹೆಚ್ಚಾಯ್ತು ನೋಡಿ, ಭಟ್ರು ಬೇಕರಿ ಬಿಟ್ರು. ಜತೆಗೆ ಚಾಕರೀನೂ ಬಿಟ್ರು! ಬೇಕರಿನ ಸಹೋದರರ ಸುಪರ್ದಿಗೆ ಬಿಟ್ರು. ಕಿರ್ಲೋಸ್ಕರ್‌ನ ಕೆಲ್ಸಾನೂ ಬಿಟ್ರು. ಅಲ್ಲಿಂದ ಸೀದಾ ರಂಗಭೂಮಿಗೆ ಬಂದ್ರು. ಅಲ್ಲಿನ ಜನ ಭಟ್ಟರ ಮಾತು ಕೇಳಿದ್ರು. ಅಭಿನಯ ನೋಡಿದ್ರು. ಆಮೇಲೆ ಏಕಕಂಠದಲ್ಲಿ ರಮೇಶ್‌ ಭಟ್‌ ‘ಬೇಕರೀ’-ರಮೇಶ್‌ಭಟ್‌ ಬೇಕೂರೀ ಅಂದರು! ಮುಂದೆ ಚಿತ್ರರಂಗದಿಂದ ಆಫರ್‌ ಬಂತಲ್ಲ-ರಮೇಶ್‌ ಭಟ್ಟರು ಅಲ್ಲಿಗೂ ರಾಜಠೀವಿಯಲ್ಲೇ ನಡೆದು ಬಂದರು.

ಬೇಕರಿಯಿಂದ ಬೆಳ್ಳಿತೆರೆಗೆ ನಡೆದು ಬಂದ ಭಟ್ಟರು, ಅಲ್ಲಿ ನೆಲೆ ನಿಂತ ತಕ್ಷಣವೇ ‘ನೋಡೀ ಸ್ವಾಮಿ, ನಾವಿರೋದೆ ಹೀಗೆ...’ ಎಂದು ಹಾಡಿದರು. ಅವರು ಈ ಮಾತು ಹೇಳಿ ಸುಮಾರು 20ವರ್ಷಗಳೇ ಕಳೆದಿವೆ. ಭಟ್ಟರೂ ಈಗಲೂ ಬದಲಾಗಿಲ್ಲ. ಚಿತ್ರರಂಗದಲ್ಲಿ ಪಾತ್ರವಿಲ್ಲ. ಮಾಧ್ಯಮಗಳಲ್ಲಿ ಪ್ರಚಾರವೂ ಇಲ್ಲ ! ಪರಿಣಾಮ, ಅವರು ಇಷ್ಟೂ ದಿನ ಮೌನವಾಗಿದ್ರು. ಈಗ ಕಿರುತೆರೆಯಲ್ಲಿ-ಅದೂ-ಜಗಳಗಂಟಿಯರು ಸೀರಿಯಲ್‌ನಲ್ಲಿ-ಟೈಟಲ್‌ ಸಾಂಗ್‌ ಹೀರೋ ಪಾತ್ರ ಸಿಕ್ಕಿಬಿಟ್ಟಿದೆ.

ಭಟ್ಟರು ಅಲ್ಲಿ ಐದು ಪಾತ್ರ ಮಾಡ್ತಾರೆ! ಜಗಳ ಗಂಟಿಯರ ಮಧ್ಯೆಯೇ ಅವರು ಹಾಡೋದೇನು, ತಬಲಾ ಬಡಿಯೋದೇನು, ಪಿಯಾನೋ ಉದೋದೇನು, ಹಹ್ಹಹ್ಹಹ್ಹಾ... ಅಂತ ನಗೋದೇನು... ಅದೆಲ್ಲ ನೋಡ್ತಾ ಇದ್ರೆ ಬಬ್ರುವಾಹನದ ಡಾ.ರಾಜ್‌ಕುಮಾರ್‌ ನೆನಪಾಗ್ತಾರೆ. ಐದು ಪಾತ್ರಗಳಲ್ಲಿ ಭಟ್ರನ್ನ ನೋಡೋದೇ ಮಜಾ...

ಪ್ರೀತಿಯ ಭಟ್‌ ಅಂಕಲ್‌, ಹೀಗೆಲ್ಲ ನಿಮ್ಮ ಕತೆ ಹೇಳಿದವರು ಒಮ್ಮೆ ಛಕ್ಕಂತ ನಿಲ್ಲಿಸಿಯೇ ಬಿಟ್ಟರು. ನಿಮ್ಮೊಂದಿಗೆ ಒಂದಿಷ್ಟು ಹರಟೆಗೆ; ಮಾತು ಕತೆಗೆ ನಿಲ್ಲಬೇಕು ಅನಿಸಿದ್ದು ಆಗಲೇ. ಹೌದು ಸ್ವಾಮಿ, ಇದು ಆ ಕ್ಷಣದ ಸತ್ಯ...

ನಿಮಗೆ ಗೊತ್ತಾ ಭಟ್‌ ಅಂಕಲ್‌? ರಮೇಶ್‌ ಭಟ್‌ ಅಂದ್ರೆ ಸಾಕು ಜನ ಒಂದೊಂದೇ ನೆನಪನ್ನ ರೀಲಿನ ಥರಾ ಬಿಚ್ಚಿಡ್ತಾರೆ. ಅವರ ಪ್ರಕಾರ ರಮೇಶ್‌ಭಟ್‌ ಅಂದ್ರೆ- ‘ನೋಡಿ ಸ್ವಾಮಿ...’ಯ (ಅ)ಮರ ಪ್ರೇಮಿ ಕಲ್ಲೇಶ್‌ ನುಗ್ಗೇಹಳ್ಳಿ; ‘ಪ್ರೇಮ ಪ್ರಸಂಗ’ದ ಪಾಪದ ಪರಮೇಶಿ, ’ಜೀವನ ಚಕ್ರ’ದ ಪಟಾಕಿ ಸುಬ್ಬಣ್ಣ, ‘ಗಣೇಶನ ಮದುವೆ’ಯ ಬೀರ್‌ ಈಸ್ಕೊಂಡು ಐಡಿಯಾ ಹೇಳುವ ಶಾಸ್ತ್ರಿ, ’ನಿಷ್ಕರ್ಷ’ದ ಸಾಹಸಿ ಗುಂಡಣ್ಣ, ‘ಸಿಪಾಯಿ’ಯ ಕಾಮುಕ ಜಮೀನ್ದಾರ, ‘ನಮ್ಮೂರ ಮಂದಾರ ಹೂವೆ’ಯ ಸಂಗೀತದ ಮೇಷ್ಟ್ರು, ‘ಮಿಂಚಿನ ಓಟ’, ‘ಆಕ್ಸಿಡೆಂಟ್‌’ನ ಸಹಾಯಕ ಪೋಲೀಸ್‌... ದೊಡ್ಡವರು ಹೀಗೆಲ್ಲ ನೆನಪುಗಳ ಬುತ್ತಿ ಹರವಿಕೊಂಡು ಕೂತಿದ್ದಾಗಲೇ ಮಕ್ಕಳು ದೊಡ್ಡವರಾಗಿ ನಗುತ್ತಾ ಏನಂತಾರೆ ಗೊತ್ತಾ?

ಯಾರು? ರಮೇಶ್‌ ಭಟ್‌ ಅಂಕಲ್‌ ತಾನೇ? ಅವ್ರು ಕ್ರೇಜಿ ಕರ್ನಲ್‌! ಭಟ್‌ ಅಂಕಲ್ಲು ಅಂದ್ರೆ-ಕಂಡಕ್ಟರ್‌ ಕರಿಯಪ್ಪ, ಭಟ್‌ ಅಂಕಲ್ಲು ಈ ಮೊದಲು ಟೈಂ ಪಾಸ್‌ ತೆನಾಲಿಯಲ್ಲಿ ಬರ್ತಿದ್ರು. ಈಗ ಅವರು ‘ಜಗಳಗಂಟಿ’ಯರು ಸೀರಿಯಲ್‌

ನಲ್ಲಿ ನಮ್ಮನೆ ಟೀವಿಗೆ ದಿನಾ ಬರ್ತಾರೆ. ಬಂದು ಡುಮ್ಮಟಕ, ಥೈಯ ಥಕ ಕುಣೀತಾರೆ. ಅಳೋ ಥರಾ ಮುಖ ಮಾಡಿ ಹಿಹಿಹ್ಹೀ ನಗ್ತಾರೆ... ರಮೇಶ್‌ಭಟ್‌, ನೀವಿರೋದು ಹೀಗೇನೇ... ಅಲ್ವೇ ಸ್ವಾಮಿ?

ಭಟ್‌ ಅಂಕಲ್‌, ರಂಗಭೂಮಿಯಲ್ಲಿ ಒಂದು ಕಾಲಕ್ಕೆ ಹೀರೋ ಆಗಿ ಮೆರೆದವರು ನೀವು. ಬೆಳ್ಳಿತೆರೆಗೆ ಬಂದಿರಲ್ಲ, ಆಗ ಕೂಡ ನಿಮಗೆ ಹೀರೋ ಆಗುವ ಹಂಬಲವಿತ್ತು. ಅವಕಾಶವೂ ಸಿಕ್ಕಿತ್ತು. ಮೊದಲು ಅಬಚೂರಿನ ಪೋಸ್ಟಾಫೀಸು, ಆಮೇಲೆ ನೋಡಿ ಸ್ವಾಮಿ ನಾವಿರೋದೇ ಹೀಗೆ, ಅದಾದ ಮೇಲೆ ಪರಮೇಶಿಯ ಪ್ರೇಮ ಪ್ರಸಂಗದಲ್ಲಿ ಹೀರೋ ಆಗಿ ಮಿಂಚಿದ್ರಿ. ಆಮೇಲೆ ನಿಮ್ಗೆ ಹೀರೋ ಪಾತ್ರ ಸಿಗಲೇ ಇಲ್ಲ. ಎದುರು ಸಿಕ್ಕವರೆಲ್ಲ- ರಮೇಶ್‌ ಭಟ್‌ ಅವರದು ಅದ್ಭುತ ಪ್ರತಿಭೆ. ಯಾವ ಪಾತ್ರ ಕೊಟ್ರೂ ಸೈ. ಅದಕ್ಕೆ ನ್ಯಾಯ ಒದಗಿಸ್ತಾರೆ. ಅವರಿಗೆ ಕಥೆ ಬರೆದು ಗೊತ್ತು. ಚಿತ್ರಕಥೆ ಮಾಡಿ ಗೊತ್ತು. ಸಂಭಾಷಣೆ ಬರೆಯೋದು, ನಿರ್ದೇಶನ ಮಾಡೋದು, ನಿರ್ಮಾಪಕನಾಗಿ ಚಡಪಡಿಸೋದು ಎಲ್ಲಾ ಗೊತ್ತು... ಅಂತ ಹೊಗಳಿದ್ರು ಅಷ್ಟೆ. ಆದ್ರೆ ಯಾರೊಬ್ಬರೂ ನಿಮ್ಗೆ ಒಳ್ಳೆಯ ಪಾತ್ರವನ್ನು ಕೊಡಲಿಲ್ಲ ! ನೀವು ಚಿತ್ರರಂಗದಲ್ಲಿದ್ದೂ ಮಿಸ್ಸಿಂಗ್‌ ಲಿಂಕ್‌ ಆದದ್ದು ಆಗಲೇ. ಹೌದಲ್ವ ಅಂಕಲ್‌?

ಹಳೇದನ್ನೆಲ್ಲ ನೆನಪು ಮಾಡಿಬಿಟ್ರೆ ನೀವು ಬೇಸರ ಮಾಡ್ಕೋತೀರಿ. ಏನ್ಮಾಡಾಣ ಹೇಳಿ? ನಿಮ್‌ ಜತೆ ಖುಷಿಯಿಂದ ಮಾತಾಡಬೇಕು ಅಂದ್ರೆ ಹಳೆಯದನ್ನೇ ಹೇಳಬೇಕು. ಅಲ್ಲ ಸ್ವಾಮಿ, ದಶಕದ ಕಾಲ ನೀವು ಶಂಕರ್‌ನಾಗ್‌ ಜತೆಗಿದ್ದವರು. ಅವರ ಮಿಂಚಿನ ಓಟದಲ್ಲಿ ಜತೆಯಾದವರು. ಸಂತೋಷ, ಸಂಕಟ, ಒಲವು, ಗೆಲುವು, ಕನಸು, ಕಲ್ಪನೆ ಎಲ್ಲವನ್ನೂ ಶಂಕರ್‌ ಜತೆ ಹಂಚಿಕೊಂಡವರು. ಸೋಲಿಗೆ ಹೆದರಬಾರದು ಎಂದು ಪದೇಪದೇ ಹೇಳಿದವರು. ಅಂಥ ನೀವೇ ಶಂಕರ್‌ನಾಗ್‌ ಮರೆಯಾದ ಮೇಲೆ ಮೌನಿಯಾಗಿಬಿಟ್ರಿ! ಪೋಷಕ ಪಾತ್ರಕ್ಕೆ ಸೀಮಿತ ಆಗಿಬಿಟ್ರಿ. ಆಗಲೇ ಒಂದಿಷ್ಟು ಮಂದಿ ಎದುರಾಗಿ- ಬರೀ ಕಾಂಜಿ ಪೀಂಜಿಪಾತ್ರಗಳನ್ನೇ ಒಪ್ಕೊತೀರಲ್ಲ, ಯಾಕೆ ಸಾರ್‌ ಅಂದರೆ-

ನಮ್ಗೆ ಆಯ್ಕೆಗೆ ಅವಕಾಶವೇ ಇಲ್ಲಪ್ಪಾ. ಭಿಕ್ಷುಕರಿಗೆ ಬೇರೆ ದಾರೀನೇ ಇಲ್ಲ ಅಂತಾರಲ್ಲ ಹಾಗಾಗಿದೆ ನಮ್ಮ ಪಾಡು ಅಂದ್ರಲ್ಲ ಯಾಕೆ? ಒಂದು ಅ್ಯಂಗಲ್‌ನಿಂದ ನೋಡಿದ್ರೆ ಥೇಟು ಶಂಕರನಾಗ್‌ ಥರ, ಇನ್ನೊಂದು ಕಡೆಯಿಂದ ನೋಡಿದ್ರೆ-ಸೊಲ್‌ಸೊಲ್ಪ ವಿಷ್ಣುವರ್ಧನ್‌ ಥರಾ ಕಾಣೋ ನೀವು-ಶಂಕರ್‌ ನೆನಪಲ್ಲೇ ಒಂದಷ್ಟು ಅಪರೂಪದ ಸಿನಿಮಾ ಮಾಡಬಹುದಿತ್ತು. ಆದ್ರೆ ಗಪ್‌ಚುಪ್‌ ಆಗಿ ಉಳಿದುಬಿಟ್ರಲ್ಲ ಯಾಕೆ?

***

ಅಂಕಲ್‌, ಚಿತ್ರರಂಗದ ಚಿಕ್ಕ ಹಿನ್ನೆಲೆಯೂ ಇಲ್ಲದಿದ್ದ ನೀವು ವಹಿಸಿದ ಪಾತ್ರ, ನೀಡಿದ ರಂಜನೆ ಲೆಕ್ಕ ಹಾಕಿದ್ರೆ ತುಂಬ ಖುಷಿಯಾಗುತ್ತೆ. ಬೆರಗು ಆಗುತ್ತೆ. ಕಿರ್ಲೋಸ್ಕರ್‌ ಫ್ಯಾಕ್ಟರೀಲಿ ಫಿಟ್ಟರ್‌ ಆಗಿ ಕಬ್ಬಿಣ ಉಜ್ಜುತ್ತಿದ್ದ ವ್ಯಕ್ತಿ-ಬೆಳ್ಳಿತೆರೆಯ ಮೇಲೆ ಚಿನ್ನದ ಥರಾ ಫಳಫಳ ಹೊಳೆದದ್ದು ನೆನಪಾದ್ರೆ ಥ್ರಿಲ್‌ ಆಗುತ್ತೆ. ದಶಕದಿಂದ ಚಿತ್ರರಂಗ ದೂರ ಇಡ್ತಲ್ಲ, ಅದೇ ಸಿಟ್ಟಿಗೆ ನೀವು ಒಂದೆರಡ್‌ ಮೂರ್ನಾಲ್ಕೈದಾರೇಳೆಂಟ್‌...ಅಂತ ನಾಟಕ ಆಡದೇ ಉಳಿದ್ರಲ್ಲ- ಅದು ನೆನಪಾದ್ರೆ ರೇಗಬೇಕು ಅನಿಸುತ್ತೆ. ಹಾಲಿವುಡ್‌ ಸಿನಿಮಾದಲ್ಲಿ ಕೋತಿ ಪಾತ್ರಕ್ಕೆ ಕಂಠದಾನ ಮಾಡಿದ್ದು ನೆನಪಾದರಂತೂ ಜಗಳ ಮಾಡ್ಬೇಕು ಅನ್ನುವಷ್ಟು ಸಿಟ್ಟು ಬರುತ್ತೆ. ಈ ಕೆಟ್ಟ ಪಾತ್ರಾನ ಯಾಕೆ ಒಪ್ಕಂಡ್ರಿ? ಹೇಳಿ ಅಂಕಲ್‌...

ಶಂಕರ್‌ನಾಗ್‌ ಅಂದ್ರೆ ಸಾಕು, ಈಗ್ಲೂ ನೀವು ಭಾವುಕರಾಗ್ತೀರಿ. ಅತ್ತೇಬಿಡ್ತೀರಿ. ಹಾಗಿದ್ರೂ ರಂಗಶಂಕರದಲ್ಲಿ ನೀವು ಜಾಸ್ತಿ ಕಾಣಸ್ತಿಲ್ವಲ್ಲ, ಯಾಕೆ? ಸೀರಿಯಲ್‌ನಲ್ಲಿ/ಸಿನಿಮಾದಲ್ಲಿ ಪಾತ್ರ ಸಿಗದೇ ಇದ್ರೆ ಕತ್ತೆ ಬಾಲ. ಪ್ರಕಾಶ್‌ ಬೇಕರಿಗೆ ಬಂದ್ರೆ ಜನರನ್ನು ಭೇಟಿ ಮಾಡಬಹುದಲ್ವ. ನೀವು ಅಲ್ಲಿಗೂ ಬರಲ್ಲ , ಯಾಕೆ? 240 ಸಿನಿಮಾಗಳಲ್ಲಿ ಅಭಿನಯಿಸಿದ್ರೂ ಕೃತಘ್ನ ಚಿತ್ರರಂಗ 20ಪ್ರಶಸ್ತೀನೂ ನೀಡಲಿಲ್ಲ ಅನ್ನೋ ಸಿಟ್ಟಾ ಅಂಕಲ್‌? ಕ್ರೇಜಿ ಕರ್ನಲ್‌ ಥರಾ ಮನೇಲೂ ಗುರ್ರ ಗುರ್ರ ಅಂತ ಸುಮ್‌ ಸುಮ್ನೆ ರೇಗ್ತೀರಂತೆ? ಮನೆಯವರು ಜಗಳಕ್ಕೆ ನಿಂತ್ರೆ- ಕ್ಷಮಿಸಿ, ಸೆನ್ಸಾರ್‌ ಕಟ್‌ಅಂದು ಪರಾರಿ ಆಗ್ತೀರಂತೆ! ಮಗನ ಕಲರ್‌ ಕಲರ್‌ ಬದುಕು ಕಂಡು ಪರಮೇಶಿ ಪ್ರೇಮ ಪ್ರಸಂಗ ಅಂತ ಜೋಕು ಮಾಡ್ತೀರಂತೆ...? ಹೌದಾ ಅಂಕಲ್‌?

ಹೇಳಿದ್ನಲ್ಲ, ಕನ್ನಡಿಗರಿಗೆ ನಿಮ್ಮ ಮೇಲೆ ದೊಡ್ಡ ಪ್ರೀತಿಯಿದೆ. ಮಮತೆಯಿದೆ. ಅಭಿಮಾನವಿದೆ. ನೀವು ಹೇಗಿದ್ದೀರಿ? ಎಲ್ಲಿದ್ದೀರಿ ಅಂತ ತಿಳಿಯೋ ಕುತೂಹಲ ಇದೆ. ಒಮ್ಮೆ ಸಿನಿಮಾ ನೋಡುವ ಬಯಕೆ ಇದೆ. ಒಂದು ಹೊಸ ಪ್ರಾಜೆಕ್ಟ್‌ ಜತೇಲಿ ನಡೆದು ಬನ್ನಿ. ನಿಮ್ಮನ್ನ ಒಪ್ಪಲಿಕ್ಕೆ, ಮೆಚ್ಚಲಿಕ್ಕೆ, ಮೆರೆಸಲಿಕ್ಕೆ ನಾವಿದೀವಿ.

ಪರಮೇಶಿಯೋ, ಕ್ರೇಜಿ ಕರ್ನಲ್ಲೋ, ತೆನಾಲಿಯೋ, ಜಗಳಗಂಟನೋ... ಯಾವ ವೇಷದಲ್ಲಾದ್ರೂ ಬಂದು ನಗಿಸುವ ಸರಿದಿ ನಿಮ್ಮದಾಗಲಿ. ನಗುವ ಹಕ್ಕು ನಮ್ಮದಾಗಲಿ. ಅಷ್ಟಾಗಿ ಬಿಟ್ರೆ ನಮಗೆ, ನಿಮಗೆ, ನಮ್ಮವರಿಗೆ, ನಿಮ್ಮವರಿಗೆ, ಉಳಿದವರಿಗೆ, ಕಡೆಗೆ ನಗಿಸುವ ದೇವರಿಗೆ ಸೈತ ಖುಷಿಖುಷಿಖುಷಿ. ಅಷ್ಟಾದರೆ ಸಾಕ್‌, ಸಾಕ್‌, ಸಾಕು. ಏನಂತೀರಿ? ಟೈಮಿದ್ರೆ ಒಂದು ಸಾಲು ಉತ್ತರ ಬರೆಯಿರಿ.

ನಮಸ್ಕಾರ.

-ಎ.ಆರ್‌.ಮಣಿಕಾಂತ್‌

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada