»   » ‘ಲವ್‌’ಗೆ ‘ಹಂಸ’ಗೀತೆ ‘ಅನು’ರಾಗ

‘ಲವ್‌’ಗೆ ‘ಹಂಸ’ಗೀತೆ ‘ಅನು’ರಾಗ

Subscribe to Filmibeat Kannada

*ವಿಶಾಖ ಎನ್‌.

ಪ್ರಶ್ನೆ : ಸಂಗೀತಕ್ಕೆ ಭಾಷೆಯಿಲ್ಲ , ಆದರೆ ಭಾಷೆಗೊಂದು ಸಂಗೀತ ಇದೆಯಲ್ಲ ?

ಉತ್ತರಗಳು-

ಅನು ಮಲ್ಲಿಕ್‌ : ನಾನು ಚಿಕ್ಕವನಾಗಿದ್ದಾಗ ಇಳಯರಾಜ ಸಂಗೀತ ಕೇಳಿ ಖುಷಿ ಪಡುತ್ತಿದ್ದೆ. ಇಳಯರಾಜ ಸಂಗೀತ ಕೊಟ್ಟ ತಮಿಳು ಹಾಡುಗಳ ಸಾಹಿತ್ಯ ನನಗೆ ಅರ್ಥವಾಗದಿದ್ದರೂ, ಆ ಸಂಗೀತ ನನ್ನನ್ನು ತಟ್ಟುತ್ತಿತ್ತು, ಕಾಡುತ್ತಿತ್ತು. ಎ.ಆರ್‌.ರೆಹಮಾನ್‌ಗೆ ಹಿಂದಿ ಭಾಷೆಯ ಸತ್ವದ ಪೂರ್ಣ ಪರಿಚಯವಿಲ್ಲ. ಹಾಗಿದ್ದೂ ಆತ ಹಿಂದಿ ಚಿತ್ರಗಳಲ್ಲೂ ಯಶಸ್ವಿ ಸಂಗೀತ ಹೊಮ್ಮಿಸಲಿಲ್ಲವೇ?

ಹಂಸಲೇಖ : ಲತಾ ಮಂಗೇಷ್ಕರ್‌ ‘ಬೆಳ್ಳನೆ ಬೆಳಕಾಯಿತು’ ಅಂತ ಕನ್ನಡದಲ್ಲಿ ಹಾಡಿದರು. ಮೊಹಮ್ಮದ್‌ ರಫಿ ‘ನೀನೆಲ್ಲಿ ನಡೆವೆ ದೂರ’ ಅಂತ ಉರ್ದು ಆ್ಯಕ್ಸೆಂಟಿನಲ್ಲಿ ಕನ್ನಡ ಹಾಡಿದರು. ಕಿಶೋರ್‌ ಹಾಡಿದರು. ಸೋನು ನಿಗಮ್‌ ಹಾಡುತ್ತಿದ್ದಾರೆ. ಇವರೆಲ್ಲ ಕನ್ನಡ ಗೊತ್ತಿಲ್ಲದವರೇ ಆದರೂ, ಇಂಥವರು ಹಾಡುವ ಹಾಡುಗಳಿಗೆ ಹೊಸ ಲಯ ಸಿಗುತ್ತದೆ. ಹೊಸತನ ಹುಟ್ಟುವುದೇ ಹೀಗೆ. ಅನು ಮಲ್ಲಿಕ್‌ ತಮ್ಮದೇ ಆದ ಆ್ಯಕ್ಸೆಂಟಿನಲ್ಲಿ ಮಟ್ಟು ಹಾಕಲಿ. ಹಾಡುಗಳನ್ನು ನಾನು ಬರೆದುಕೊಡಬೇಕಾಗಿದೆ.

ರಾಜೇಂದ್ರ ಸಿಂಗ್‌ ಬಾಬು : ನಾನು ‘ಕೃಷ್ಣ ನೀ ಬೇಗನೆ ಬಾರೋ’ ಚಿತ್ರದಲ್ಲಿ ಕನ್ನಡಕ್ಕೆ ಬಪ್ಪಿ ಲಹರಿ ಅವರ ಸಂಗೀತವನ್ನು ಕರೆತಂದಿದ್ದೆ. ಅದು ಸೂಪರ್‌ ಹಿಟ್‌ ಆಯ್ತು. ಲಕ್ಷ್ಮಿಕಾಂತ್‌ ಪ್ಯಾರೆಲಾಲ್‌ ಕೂಡ ಕನ್ನಡ ಚಿತ್ರಗಳಿಗೆ ಸಂಗೀತ ಕೊಟ್ಟಿದ್ದಾರೆ. ನಮ್ಮ ಹಾಡುಗಳನ್ನು ಸರಿಯಾಗಿ ಅರ್ಥೈಸಿ ವಿವರಿಸಿದರೆ, ಅಚ್ಚುಕಟ್ಟಾಗಿ ತರ್ಜುಮೆ ಮಾಡಿ ಹೇಳಿದರೆ, ಅನು ಮಲಿಕ್‌ ಕೂಡ ಹಸನಾದ ಸಂಗೀತ ಕೊಟ್ಟೇ ಕೊಡುತ್ತಾರೆ.

ಅನು ಮಲ್ಲಿಕ್‌ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಹಾಡುಗಳಿಗೆ ಮಟ್ಟು ಹಾಕಲು ಒಪ್ಪಿಕೊಳ್ಳುವ ಮೂಲಕ ದಕ್ಷಿಣ ಭಾರತದ ಚಿತ್ರಗಳಿಗೆ ಎಂಟ್ರಿ ಕೊಡುತ್ತಿರುವ ಹಿನ್ನೆಲೆಯಲ್ಲಿ ಹುಟ್ಟಿದ ಅರ್ಥಪೂರ್ಣ ಪ್ರಶ್ನೆಗೆ ಸಿಕ್ಕ ಉತ್ತರಗಳೂ ಸಾಕಷ್ಟು ತಣಿಸುವಂತಿದ್ದವು. ತಮ್ಮ ಮಗ ದುಶ್ಯಂತ್‌ನನ್ನು ನಾಯಕನಾಗಿ ಪರಿಚಯಿಸುತ್ತಿರುವ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಅವರ ‘ಲವ್‌’ ಚಿತ್ರಕ್ಕೆ ಅನು ಮಲ್ಲಿಕ್‌ ಸಂಗೀತವಿರುತ್ತದೆ.

ಮಟ್ಟುಗಾರ ಅನು ಮಲ್ಲಿಕ್‌ಗೆ ಸ್ವಾಗತ ಕೋರುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಮೊನಚಿಗಿಂತ ಅನು ಮಲ್ಲಿಕ್‌ ಬಾಣ ಬಿಟ್ಟಂತೆ ಕೊಟ್ಟ ಉತ್ತರಗಳು ಚುರುಕು ಹಾಗೂ ಚುಟುಕಾಗಿದ್ದವು. ಬೆಂಗಳೂರಿನ ಹವೆಯನ್ನು ಬಾಯಿತುಂಬಾ ಹೊಗಳಿದ ಅನು ಮಲ್ಲಿಕ್‌ಗೆ ಕನ್ನಡ ಭಾಷೆಯ ಪರಿಚಯವೂ ಉಂಟು. ಯಾಕೆಂದರೆ, ಅವರ ಹೆಂಡತಿ ಕಾರವಾರದ ಅಂಜಲಿ ಭಟ್‌. ಬಾಲಿವುಡ್‌ನಲ್ಲಿ ಬಿಡುವಿಲ್ಲದ ಕೆಲಸ ಹಚ್ಚಿಕೊಂಡಿದ್ದರೂ ಕನ್ನಡ ಚಿತ್ರ ಒಪ್ಪಿಕೊಳ್ಳೋಕೆ ಇದೂ ಒಂದು ಕಾರಣ ಅಂತ ಅನು ತಮ್ಮ ಪ್ರೀತಿಯ ಅಂಜುವನ್ನು ನೆನೆಯುತ್ತ ನಗುನಗುತ್ತಾ ಹೇಳಿದರು.

ಏರ್‌ಪೋರ್ಟಿನಿಂದ ಕಾರಿನಲ್ಲಿ ಬರುತ್ತಲೇ ‘ಲವ್‌’ನ ಚಿತ್ರಕಥೆಯನ್ನು ಸಿಂಗ್‌ ಬಾಬು ವಿವರಿಸಿದ್ದನ್ನು ಹೇಳಿಕೊಂಡ ಅನು, ಸಿನಿಮಾದ ಕಥೆಯನ್ನು ಮನದುಂಬಿ ಮೆಚ್ಚಿಕೊಂಡರು. ಅದರಲ್ಲಿನ ಭರ್ಜರಿ ಭಾವನಾತ್ಮಕ ಸೆಳಕನ್ನು ಕೊಂಡಾಡಿದರು. ಚಿತ್ರಕಥೆಗೆ ಪೂರಕವಾಗಿ ಸಂಗೀತ ಕೂಡ ಭಾವನಾತ್ಮಕವಾಗಿರುತ್ತದೆ. ಮೆಲೊಡಿಗೇ ಆದ್ಯತೆ ಎಂದ ಅನು, ಕಾರಲ್ಲೇ ಒಂದು ಟ್ಯೂನನ್ನೂ ಹೊಸೆದ ವಿಷಯವನ್ನು ಹಂಚಿಕೊಂಡರು. ಆದರೆ, ಆ ಟ್ಯೂನನ್ನು ಮಾತ್ರ ಕೇಳಿಸಲಿಲ್ಲ.

ಆಡಿಯೋ ಕ್ಯಾಸೆಟ್ಟುಗಳ ಪೈರೆಸಿ, ಎಫ್‌. ಎಂ.ರೇಡಿಯೋ ಸವಾಲು, ಮೊಬೈಲುಗಳಲ್ಲಿ ಹಾಡು ಕೇಳಿಸುವುದು- ಈ ಎಲ್ಲಾ ಹೊಸ ಏಟುಗಳಿಗೆ ಉತ್ತರ ಕಂಡುಕೊಳ್ಳುವ ತಾಕಲಾಟದಲ್ಲಿ ಇಡೀ ಉದ್ದಿಮೆ ಇರುವುದನ್ನು ಬಿಚ್ಚಿಟ್ಟ ಅನು, ಜನರಿಗೆ ಅಸಲಿ ಯಾವುದು ನಕಲಿ ಯಾವುದು ಅಂತ ನಿರ್ಧರಿಸುವ ಮನಸ್ಸಿರುತ್ತದೆ. ಅದು ಕೆಲಸ ಮಾಡಬೇಕಷ್ಟೆ ಅಂದರು.

ಮಾತು ಮಂಥನದ ನಡುವೆ ಪತ್ರಕರ್ತರೊಬ್ಬರು ಅನು ಒಳಗಿನ ಗಾಯಕನನ್ನು ಕೆಣಕಿದರು. ಒಲ್ಲದ ರಾಗಕ್ಕೆ ಕಂಠ ಕೊಡದ ತಾವು ಎಷ್ಟೋ ಬಾರಿ ನಿರ್ಮಾಪಕರ ಒತ್ತಾಯದ ಮೇರೆಗೆ ಹಾಡಿರುವುದನ್ನು ಅನು ಮೆಲುಕು ಹಾಕುತ್ತಿರುವಾಗಲೇ, ಕೆಣಕುವಿಕೆ ಜೋರಾಯಿತು. ಹಾಡಿಗೆ ಡಿಮ್ಯಾಂಡು ಬಂತು. ಮೇಜು ಕುಟ್ಟುತ್ತಲೇ ಅನು ಕಂಠದಲ್ಲಿ ‘ಇಕ್‌ ಗರಂ ಚಾಯ್‌ ಕಿ ಪ್ಯಾಲಿ ಹೋ...’ ಹಾಡು ಹೊಮ್ಮಿತು. ಲೇಟಾಗಿ ಬಂದಿದ್ದ ಹಂಸಲೇಖ ಕೂಡ ಅದಕ್ಕೆ ತಾಳ ಹಾಕುತ್ತ ಎಲ್ಲರೊಳಗೊಂದಾದರು.

ಚಿಕ್ಕಂದಿನಿಂದ ತಮ್ಮ ಮೆಚ್ಚಿನ ಸಂಗೀತ ನಿರ್ದೇಶಕರಾದ ಅನು ಮಲ್ಲಿಕ್‌ ತಮ್ಮ ಚಿತ್ರಕ್ಕೂ ಅದ್ಭುತ ಸಂಗೀತ ಕೊಡುತ್ತಾರೆಂಬ ಭರವಸೆ ನನಗಿದೆ ಎಂದು ದುಶ್ಯಂತ್‌ ಸಿಂಗ್‌ ಅನು ಮಲ್ಲಿಕ್‌ ಅವರನ್ನು ತಬ್ಬಿಕೊಂಡರು. ‘ಲವ್‌’ ನಾಯಕಿ ರಕ್ಷಿತಾ ಆದಿತ್ಯನ ಜೊತೆ ಪೋಸ್‌ ಕೊಟ್ಟರು. ಅವರಮ್ಮ ಮಮತಾ ರಾವ್‌, ಸಿಂಗ್‌ ಬಾಬು ಜೊತೆ ಪಟ್ಟಾಂಗ ಹೊಡೆದರು. ಬೊಕೆ ಹಿಡಿದು ಬಂದ ವಿ.ಮನೋಹರ್‌ ಪರಿಚಯ ಮಾಡಿಕೊಂಡ ಅನು ಮಲ್ಲಿಕ್‌ ಹೊಸ ಛಾಲೆಂಜಿಗೆ ತಮ್ಮ ಮನಸ್ಸು ಸ್ಪಂದಿಸುತ್ತಿದ್ದು, ಆಗಲೇ ಮನದಲ್ಲಿ ಮಟ್ಟುಗಳು ಸುಳಿದಾಡುತ್ತಿವೆ ಅಂತ ಸಂಗೀತ ಸಲ್ಲಾಪದಲ್ಲಿ ಸೇರಿಕೊಂಡರು.

ಬಾಲಿವುಡ್‌ಗೆ ಅನು ಮಲ್ಲಿಕ್‌ರ ಈ ವಲಸೆಯ ವರಸೆ ಶಾಕ್‌ ಕೊಟ್ಟಿದೆಯಂತೆ. ನಿಮ್ಮ ಕೈಲಿ ಎಷ್ಟು ಬಾಲಿವುಡ್‌ ಚಿತ್ರಗಳಿವೆ ಎಂಬ ಪ್ರಶ್ನೆಗೆ ಅನು ನೆನಪು ಮಾಡಿಕೊಳ್ಳುತ್ತಾ ಕೊಟ್ಟ ಪಟ್ಟಿ ಪುಟ್ಟದಾಗೇನೂ ಇರಲಿಲ್ಲ- ಎಲ್‌ಓಸಿ ಕಾರ್ಗಿಲ್‌, ಸಾಯ, ಇಶ್ಕ್‌ ವಿಶ್ಕ್‌, ಗುರಿಂದರ್‌ ಛೆಡ್ಡಾ ಅವರ ಬ್ರೆೃಡ್‌ ಅಂಡ್‌ ಪ್ರಿಜುಡೀಸ್‌, ಮುಂಬಯ್‌ ಸೆ ಆಯ ಮೇರಾ ದೋಸ್ತ್‌, ಈಡಿಯಟ್‌, ಅನಿಲ್‌ ಶರ್ಮ- ವಿಪುಲ್‌ ಸಾ ಮತ್ತು ಮಕರಂದ್‌ ದೇಶಪಾಂಡೆ ಅವರ ತಲಾ ಒಂದೊಂದು ಚಿತ್ರ.

ಸದ್ಯಕ್ಕೆ ಅನು ಮಟ್ಟು ಹಾಕಿರುವ ‘ಮೇ ಪ್ರೇಂಕಿ ದೀವಾನಿ ಹೂಂ’ ಚಿತ್ರದ ಕೆಸೆಟ್ಟುಗಳ ಬಿಕರಿ ಭರ್ಜರಿಯಾಗಿದೆ. ಕನ್ನಡದ ಹಾಡುಗಳು ಸಂಚಲನೆ ಹುಟ್ಟಿಸಿದರೆ, ದಕ್ಷಿಣ ಭಾರತದ ಇನ್ನಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವುದು ಅನು ಮಲ್ಲಿಕ್‌ ಇರಾದೆ. ಅದಕ್ಕವರು ಹಂಸಲೇಖಾ ಥರದವರ ಸಹಾಯ ಬೇಕು ಅಂತಲೂ ಮುಕ್ತವಾಗಿ ಕೇಳಿಕೊಂಡರು.

ತಮ್ಮ ಮಗನನ್ನು ವಿಭಿನ್ನ ರೀತಿಯಲ್ಲಿ ಲಾಂಚ್‌ ಮಾಡುವ ಸಾಹಸಕ್ಕೆ ಕೈಹಾಕಿರುವ ಸಿಂಗ್‌ ಬಾಬು ಪ್ರಕಾರ, ತಮ್ಮ ಜೀವಮಾನದ ದಿ ಬೆಸ್ಟ್‌ ಚಿತ್ರ ಇದಾಗಿರುತ್ತದೆ. ಜಗತ್ತಿನಲ್ಲೇ ಇಂಥ ಅಪ್ಪ ಇಲ್ಲ ಅಂತ ದುಶ್ಯಂತ್‌ ಮುಗ್ಧತೆಯಿಂದ ಹೇಳಿದ್ದಕ್ಕೂ ಅರ್ಥವಿತ್ತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada