»   » ಬರಗೂರರತಾಯಿ,ಶೇಷಾದ್ರಿ ತುತ್ತೂರಿಗೆ ರಾಷ್ಟ್ರಪ್ರಶಸ್ತಿ

ಬರಗೂರರತಾಯಿ,ಶೇಷಾದ್ರಿ ತುತ್ತೂರಿಗೆ ರಾಷ್ಟ್ರಪ್ರಶಸ್ತಿ

Subscribe to Filmibeat Kannada


53ನೇ ಚಲನಚಿತ್ರ ಪ್ರಶಸ್ತಿ ಪ್ರಕಟಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ವಿಮರ್ಶಕ ಶ್ಯಾಮಲಿ ಬ್ಯಾನರ್ಜಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಪ್ರಶಸ್ತಿ ಪ್ರಕಟಣೆ ಒಂದು ವರ್ಷ ತಡವಾಗಿದೆ.ನವದೆಹಲಿ, ಆಗಸ್ಟ್ 08 : 2005ನೇ ಸಾಲಿನ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಂದು ವರ್ಷ ತಡವಾಗಿ ಮಂಗಳವಾರ ಪ್ರಕಟಿಸಲಾಯಿತು.

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ತಾಯಿ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಹೊರಹೊಮ್ಮಿದೆ. ಇದೇ ಚಿತ್ರಕ್ಕಾಗಿ ಬರಗೂರು ಅವರು ರಚಿಸಿದ ಬರುತೇವೆ ನಾವು ಬರುತೇವೆ ಹಾಡು ಅತ್ಯುತ್ತಮ ಹಾಡು ಪ್ರಶಸ್ತಿಗೆ ಪಾತ್ರವಾಗಿದೆ.

ನಿರ್ದೇಶಕ ಪಿ. ಶೇಷಾದ್ರಿ ಅವರು ಈ ಬಾರಿಯು ಕೂಡ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅವರ ನಿರ್ದೇಶನದ ತುತ್ತೂರಿ ಚಿತ್ರ ಅತ್ಯುತ್ತಮ ಪರಿಸರ ಸಂರಕ್ಷಣಾ ಪ್ರಶಸ್ತಿ ಗಳಿಸಿದೆ.

ತುತ್ತೂರಿ ಚಿತ್ರವನ್ನು ನಟಿ ಜಯಮಾಲಾ ನಿರ್ಮಿಸಿದ್ದರೆ, ತಾಯಿ ಚಿತ್ರವನ್ನು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮಿಳಾ ಜೋಷಾಯ್ ನಿರ್ಮಿಸಿದ್ದಾರೆ.

ಸ್ವರ್ಣ ಕಮಲ :ಬುದ್ಧದೇಬ್ ದಾಸಗುಪ್ತಾ ಅವರ ನಿರ್ದೇಶನದ ಬಂಗಾಳಿ ಚಿತ್ರ ಕಾಲಪುರುಷ ಸ್ವರ್ಣಕಮಲವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ವಿಧು ವಿನೋದ ಚೋಪ್ರಾ ನಿರ್ಮಾಣದ ಪ್ರೋದೀಪ್ ಸರ್ಕಾರ್ ನಿರ್ದೇಶನದ ಪರಿಣೀತಾ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಗಳಿಸಿದೆ.

ಅಮಿತಾಭ್ ಅತ್ಯುತ್ತಮ ನಟ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲಾಕ್ ಚಿತ್ರದಲ್ಲಿ ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಹುಡುಗಿಗೆ ಸಂವಹನವನ್ನು ಕಲಿಸಿದ ಶಿಕ್ಷಕನಾಗಿ ನೀಡಿದ ಅವಿಸ್ಮರಣೀಯ ಅಭಿನಯಕ್ಕಾಗಿ ಅಮಿತಾಭ್ ಬಚ್ಚನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಸಾಥ್ ಹಿಂದೂಸ್ತಾನಿ ಮತ್ತು ಅಗ್ನಿಪಥ್ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದರು. ಬ್ಲಾಕ್ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ.

ಪರಿಜಾನಿಯಾ ಚಿತ್ರದಲ್ಲಿ ಕೋಮು ಗಲಭೆಯಲ್ಲಿ ಘಾಸಿಗೊಂಡ ತಾಯಿಯ ಪಾತ್ರವನ್ನು ಮನೋಜ್ಞವಾಗಿ ಬಿಂಬಿಸಿದ್ದಕ್ಕೆ ಸಾರಿಕಾ, ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಈ ಚಿತ್ರದ ನಿರ್ದೇಶಕ ರಾಹುಲ್ ಧೋಲಾಕಿಯಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಮನೋರಂಜನಾತ್ಮಕ ಚಿತ್ರ ಪ್ರಶಸ್ತಿಗೆ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ರಂಗದೇ ಬಸಂತಿ ಚಿತ್ರ ಆಯ್ಕೆಯಾಗಿದೆ. ರಾಷ್ಟ್ರೀಯ ಭಾವೈಕ್ಯತೆಗಾಗಿ ನೀಡುವ ನರ್ಗಿಸ್ ದತ್ ಪ್ರಶಸ್ತಿ ಮಲಯಾಳಂನ ದೈವನಮತಿಲ್ ಚಿತ್ರದ ಪಾಲಾಗಿದೆ. ಜಯರಾಜ್ ಈ ಚಿತ್ರದ ನಿರ್ದೇಶಕರು.

53ನೇ ಚಲನಚಿತ್ರ ಪ್ರಶಸ್ತಿ ಪ್ರಕಟಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ವಿಮರ್ಶಕ ಶ್ಯಾಮಲಿ ಬ್ಯಾನರ್ಜಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಪ್ರಶಸ್ತಿ ಪ್ರಕಟಣೆ ಒಂದು ವರ್ಷ ತಡವಾಗಿದೆ.

(ಏಜನ್ಸೀಸ್ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada