»   » ಮಂದಾಕಿನಿಯೇ ನೀ ನೂರು ವಿಶೇಷಗಳ ಗಣಿಯೇ?

ಮಂದಾಕಿನಿಯೇ ನೀ ನೂರು ವಿಶೇಷಗಳ ಗಣಿಯೇ?

Subscribe to Filmibeat Kannada


ಮಂದಾಕಿನಿಯೇ ನೀ ಸಿಡಿಲಿನ ಕಿಡಿಯೇ..ಹಾಡು ಕ್ಲಿಕ್ ಆಯಿತು. ಎಲ್ಲರ ಬಾಯಲ್ಲೂ ನಲಿದಾಡಿತು! ಅದೇ ರೀತಿ ಮಂದಾಕಿನಿ ಹೆಸರಿನ ಈ ಹೊಸ ಚಿತ್ರವೂ ಕ್ಲಿಕ್ ಆಗುತ್ತದೆಯೇ? ಕಾಲ ಈ ಪ್ರಶ್ನೆಗೆ ಉತ್ತರ ಕೊಡುತ್ತದೆ. ಆದರೆ ಎಲ್ಲವೂ ಈ ಚಿತ್ರದಲ್ಲಿ ತುಂಬಾನೇ ಡಿಫರೆಂಟಾಗಿದೆ.. ನಾವು ಗೆದ್ದೇ ಗೆಲ್ಲುತ್ತೇವೆ ಅನ್ನುತ್ತಾರೆ ಚಿತ್ರದ ನಿರ್ದೇಶಕ ರಮೇಶ್ ಸುರ್ವೇ. ಇವರು ಸಂಪಾದಕ, ಪ್ರಕಾಶಕರಾಗಿದ್ದವರು, ಈಗ ನಿರ್ದೇಶಕರು.9ನೇ ತಿಂಗಳಿನ 9ನೇ ತಾರೀಖು 9ಗಂಟೆ 9ನಿಮಿಷ 9ಸೆಕೆಂಡಿಗೆ ಚಿತ್ರ ಸೆಟ್ಟೇರಲಿದೆ. ನಮ್ಮ ಚಿತ್ರದ ವಿಶೇಷತೆಗಳು ಮುಹೂರ್ತದ ದಿನದಿಂದಲೇ ಶುರುವಾಗಿವೆ ಎನ್ನುತ್ತಾರೆ ನಿರ್ದೇಶಕರು.(ಹೋಗಲಿ ಬಿಡಿ. 9..9..9.. ತೋಳ ಹಳ್ಳಕ್ಕೆ ಬಿತ್ತು ಅನ್ನುವಂತಾಗದಿದ್ದರೇ ಸಾಕು!)

ಕರಿಯಾ ಐ ಲವ್ ಯೂಎಂದ ದುನಿಯಾ ಹುಡುಗಿ ರಶ್ಮೀ, ಈ ಚಿತ್ರದ ನಾಯಕಿ. ಚೇತನ್, ಅಶ್ವಿನ್, ಸುರೇಶ್ ರೈ ಮತ್ತು ಸಂಗಮೇಶ್ ಉಪಾಸೆ ಚಿತ್ರದ ನಾಯಕರು. ಅವರಲ್ಲಿ ಯಾರು ಮಂದಾಕಿನಿ ಬದುಕಲ್ಲಿ ಪ್ರವೇಶಿಸುತ್ತಾರೆ ಎಂಬುದು ಚಿತ್ರದ ಕುತೂಹಲ. ಈ ಚಿತ್ರದಲ್ಲಿ ರಶ್ಮಿ, ಹಳ್ಳಿ ಹುಡುಗಿ, ಮುಗ್ದೆ. ಪಟ್ಟಣಕ್ಕೆ ಬಂದ ಅವಳು ಅನೇಕ ಕ್ಯಾಟಗರಿಯ ಜನರನ್ನು ಎದುರಾಗುತ್ತಾಳೆ. ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದು ಚಿತ್ರದ ಜೀವಾಳ.

ಕಳೆದ 27ವರ್ಷಗಳ ನನ್ನ ಕನಸು ಮಂದಾಕಿನಿಯಾಗಿ ಸಾಕಾರಗೊಳ್ಳುತ್ತಿದೆ. ತೆರೆ ಮೇಲೆ ನಾನು ಹೇಳಬೇಕಾದದ್ದನ್ನು ಹೇಳಲು ಪ್ರಯತ್ನಿಸುತ್ತೇನೆ. ಅನೇಕ ಚಿತ್ರಕತೆ ಬರೆದಿದ್ದೇನೆ. ಆದರೆ ಅವುಗಳಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ನ್ಯಾಯ ಒದಗಿಸಿಲ್ಲ. ಆ ಕೊರತೆಯನ್ನು ನೀಗಿಸಲು ನಿರ್ದೇಶನದ ಹೊಣೆ ಹೊತ್ತಿದ್ದೇನೆ ಎಂದು ಸುದ್ದಿಗಾರರಿಗೆ ರಮೇಶ್ ಸುರ್ವೇ ತಿಳಿಸಿದ್ದಾರೆ.

6ಜನ ನೃತ್ಯ ನಿರ್ದೇಶಕರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. 8ನಿಮಿಷದ ಹಾಡು ಚಿತ್ರದ ಇನ್ನೊಂದು ವಿಶೇಷ. 20ಜಿಲ್ಲೆಗಳಲ್ಲಿನ 40ತಾಲೂಕುಗಳಲ್ಲಿ ಕರ್ನಾಟಕದ ಪ್ರಕೃತಿ ಸೊಬಗ ತೆರೆದಿಡುವುದು ಚಿತ್ರದ ಮತ್ತೊಂದು ವಿಶೇಷ. ಕಲ್ಯಾಣ್ 7 ಹಾಡು ಬರೆದು, ಸಂಗೀತ ನೀಡಿದ್ದಾರೆ. ಹಾಡುಗಳೆಲ್ಲವೂ ಸೂಪರ್ ಎನ್ನುವುದು ಇನ್ನೊಂದು ವಿಶೇಷ . ಹೀಗೆ ವಿಶೇಷಗಳ ಪಟ್ಟಿಯನ್ನೇ ಒಪ್ಪಿಸುವುದು ಸುರ್ವೇ ಅವರ ವಿಶೇಷ.

ಶ್ರೀನಾಥ್, ಪವಿತ್ರಾ ಲೋಕೇಶ್, ದೊಡ್ಡಣ್ಣ, ಪ್ರಹ್ಲಾದ್ ಬೆಟಗೇರಿ, ಜಯಂತಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್, ಮೈಸೂರು ರಮಾನಂದ, ಬೀರಾದಾರ್, ಮಿಮಿಕ್ರಿ ರಾಜಗೋಪಾಲ್, ಶೋಭಾ ನಾಯ್ದು ತಾರಾಬಳಗದಲ್ಲಿರುವ ಪ್ರಮುಖರು. ಪಿ.ಕೆ.ಹೆಚ್.ದಾಸ್ ಕ್ಯಾಮೆರಾ ಹಿಂದೆ ಇರುತ್ತಾರೆ. ಉದ್ಯಮಿ ಬಿ.ಎನ್.ಶ್ರೀನಿವಾಸ್ ಚಿತ್ರಕ್ಕೆ ನೀರಿನಂತೆ ಹಣ ಸುರಿಯುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada