twitter
    For Quick Alerts
    ALLOW NOTIFICATIONS  
    For Daily Alerts

    ಪಾರ್ವತಿ-ಸುತರು ಬೇಜಾರಾಗಿದ್ದಾರೆ

    By Staff
    |

    *ದಟ್ಸ್‌ಕನ್ನಡ ಬ್ಯೂರೋ

    • ಸುಮ್ಮನೆ ಕೆಲವು ಪತ್ರಿಕೆಗಳು ನಮ್ಮನ್ನು ತೇಜೋವಧೆ ಮಾಡಲು ಹೊರಟಿವೆ.
    • ತೆಲುಗು ನಿರ್ಮಾಪಕರ ಕನ್ನಡ ಚಿತ್ರದಲ್ಲಿ ನನ್ನ ಮಗ ನಟಿಸುತ್ತಿರುವುದೇ ತಪ್ಪಾಗಿದೆ. ಅವನನ್ನು ತೆಲುಗು ನಿರ್ಮಾಪಕರಿಗೆ ಮಾರಿಕೊಂಡಿದ್ದೀವಿ ಅಂತ ಬರೀತಾರೆ. ಬೇರೆ ನಟರು ಪರಭಾಷೆಯ ನಿರ್ಮಾಪಕರ ಸಿನಿಮಾದಲ್ಲಿ ನಟಿಸಬಹುದು, ನಮ್ಮ ಮಕ್ಕಳು ನಟಿಸಕೂಡದು. ಇದ್ಯಾವ ನ್ಯಾಯ?
    • ರಾಜ್‌ಕುಮಾರ್‌ ಏನು ಮಾಡಿದ್ದಾರೆ ಅಂತ ಕೇಳುವುದು ಕೆಲಸವರಿಗೀಗ ಅಭ್ಯಾಸವಾಗಿಹೋಗಿದೆ. ಕನ್ನಡ ಸಿನಿಮಾ ಬಿಟ್ಟು ಅವರು ಬೇರೇನನ್ನೂ ಯೋಚಿಸಲಿಲ್ಲ. ಜನರಿಗೆ ಅವರು ಏನು ಕೊಟ್ಟಿದಾರೆ ಅಂತ ಗೊತ್ತು.
    • ನಾನು ಜೋರು ಮಾಡ್ತೀನಿ ಅಂತಾರೆ. ಐವತ್ತು ವರ್ಷದಿಂದ ನೋಡ್ತಿದೀರ, ನಾನು ಯಾವತ್ತಾದರೂ ಜೋರು ಮಾಡಿದ್ದೀನಾ?
    • ಅಯ್ಯೋ ದೇವರೇ...ನಮ್ಮವರೇ ನಮಗೆ ಮುಳ್ಳಾಗುತ್ತಿದ್ದಾರಲ್ಲ !
    ಮಂಗಳವಾರ (ಅ. 07) ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಖಿನ್ನರಾಗಿದ್ದರು. ಹೀಗೆ ಮಾತಾಡುವಾಗ ಗದ್ಗದಿತರಾಗುತ್ತಿದ್ದರು. ಆಗಾಗ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಪಕ್ಕದಲ್ಲಿ ಮಕ್ಕಳಾದ ರಾಘವೇಂದ್ರ ಮತ್ತು ಪುನೀತ್‌ ಕೂತಿದ್ದರು. ಅಮ್ಮನ ಅಳಲಿಗೆ ಕಂದಮ್ಮಗಳು ದನಿಗೂಡಿಸುತ್ತಿದ್ದವು.

    ‘ನಾನು ಚಾಮುಂಡಿ ಬೆಟ್ಟದಲ್ಲಿ ಯಾರಿಗೂ ಹೊಡೀಲಿಲ್ಲ. ನಮ್ಮ ಫ್ಯಾಮಿಲಿ ಬಗ್ಗೆ ಅಲ್ಲಿ ಒಬ್ಬ ಕೆಟ್ಟದಾಗಿ ಮಾತಾಡಿದ. ಅವನನ್ನು ನನ್ನ ಫ್ಯಾನ್‌ ಹೊಡೆದ. ಅದನ್ನು ನಾನು ತಡೆದೆ. ಅವರು ಪತ್ರಕರ್ತರು ಅಂತಾನೂ ಗೊತ್ತಿರಲಿಲ್ಲ. ಆ ವ್ಯಕ್ತಿಗೆ ನೋವಾಗಬಾರದು ಅಂತ ಅಲ್ಲೇ ಕ್ಷಮೆ ಕೇಳಿದೆ. ಹಾಗೆ ಕ್ಷಮೆ ಕೇಳಿದ್ದು ನಾನು ತಪ್ಪು ಮಾಡಿದೆ ಅಂತ ಅಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡ್ತಿದಾರೆ’ ಅಂತ ಪುನೀತ್‌ ಕೈಮುಗಿದು ವಿನಮ್ರವಾಗಿ ಸಮಜಾಯಿಷಿ ಕೊಟ್ಟರು.

    ‘ಚಿಗುರಿದ ಕನಸು’ ಥಿಯೇಟರ್‌ ಕಿರಿಕ್ಕೂ ಕೂಡ ತಮ್ಮ ಕುಟುಂಬಕ್ಕೆ ಮಸಿ ಬಳಿಯುವ ತಂತ್ರ ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು. ಚಿತ್ರಮಂದಿರದವರು ಅಕ್ಟೋಬರ್‌ 2ರಿಂದ ‘ಚಿಗುರಿದ ಕನಸು’ ಪ್ರದರ್ಶಿಸುತ್ತೇವೆ ಅಂತ ಬರೆದಿರುವ ಪತ್ರಗಳನ್ನು ತೋರಿಸಿದರು. ಥಿಯೇಟರ್‌ನವರಿಗೆ ನಾವ್ಯಾಕೆ ಒತ್ತಡ ತರುತ್ತೇವೆ? ಥಿಯೇಟರ್‌ ಮಾಲೀಕರಿಗೆ ಪತ್ರ ಬರೆದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ ನಂತರವೇ ನಾವು ಜಾಹೀರಾತುಗಳಲ್ಲಿ ಇಂತಿಂಥಾ ಥಿಯೇಟರ್‌ಗಳಲ್ಲಿ ‘ಚಿಗುರಿದ ಕನಸು’ ಬಿಡುಗಡೆಯಾಗುತ್ತೆ ಅಂತ ಜಾಹೀರಾತು ಕೊಟ್ಟಿದ್ದು. ಸುಮ್ಮನೆ ಅದೊಂದು ವಿವಾದವಾಯಿತು ಎಂದು ರಾಘವೇಂದ್ರ ಅಲವತ್ತುಕೊಂಡರು.

    ಎಂಎಲ್‌ಸಿ ಆಗಿ ಅಂತ ಬಹಳ ವರ್ಷಗಳ ಹಿಂದೆಯೇ ಒತ್ತಡ ಬಂದಿತ್ತು. ಮನೆಯವರಿಗೆ ಬೇಡದ ರಾಜಕೀಯ ನಮಗ್ಯಾಕೆ ಅಂತ ಅದನ್ನು ತಿರಸ್ಕರಿಸಿದ್ದೆ. ಸಿನಿಮಾ ಬಿಟ್ಟರೆ ಬೇರೆ ಯಾವುದರ ಬಗೆಗೂ ನಾವು ಯೋಚಿಸಲಿಲ್ಲ. ಸೇವಾ ಶುಲ್ಕ ತೆಗಿಸುವಾ ಅಂತ ಎಲ್ಲಾ ನಿರ್ಮಾಪಕರು ದನಿಯೆತ್ತಿದರು. ಅವರಲ್ಲಿ ನಾನೂ ಸೇರಿಕೊಂಡೆ. ನಾನೇನೂ ನಿರ್ಮಾಪಕರ ನೇತೃತ್ವ ವಹಿಸಲಿಲ್ಲ. ವಿಧಾನಸೌಧದ ಮೆಟ್ಟಿಲನ್ನೂ ನಿರ್ಮಾಪಕರ ಒತ್ತಾಸೆಯ ಮೇರೆಗೆ ಹತ್ತಿದೆ. ನನ್ನ ಮಕ್ಕಳಿಗೆ ಕೆಲಸ ಕೇಳೋಕೆ ವಿಧಾನಸೌಧದ ಮೊಗಸಾಲೆಗೆ ಹೋಗಲಿಲ್ಲ. ಹೀಗಿದ್ದೂ ಸುಮ್ಮನೆ ನಮ್ಮನ್ನು ದೂರುತ್ತಾರೆ. ನಮ್ಮ ತೇಜೋವಧೆಗೆ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ನಮ್ಮವರೇ ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಪಾರ್ವತಮ್ಮ ಬೇಜಾರು ಮಾಡಿಕೊಂಡರು.

    ಸಂಬಂಧಿಕರ ಹುಡುಗರ ಸಿನಿಮಾ ಓಡಬಾರದು ಅಂತ ನಾವು ಯೋಚಿಸ್ತೀವಿ ಅಂತ ಕೂಡ ಕೆಲವು ಪತ್ರಿಕೆಗಳು ಬರೆದಿವೆ. ನಾವೆಲ್ಲ ಇಪ್ಪತ್ತು ವರ್ಷ ಆಟ ಆಡಿಕೊಂಡು ಒಟ್ಟಾಗಿ ಬೆಳೆದಿದ್ದೇವೆ. ಅವರ ಸಿನಿಮಾ ಓಡಬಾರದು ಅಂತ ಬಯಸುತ್ತೀವಾ? ಎಲ್ಲರೂ ಚೆನ್ನಾಗಿರಬೇಕು ಅಂತ ಅಪ್ಪಾಜಿ ನಮಗೆ ಪಾಠ ಹೇಳಿಕೊಟ್ಟಿದ್ದಾರೆ. ರೌಡಿಸಂ ಅನ್ನೋದು ನಮಗೆ ಗೊತ್ತೇ ಇಲ್ಲ. ಯಾರ ಮೇಲೂ ಹಲ್ಲೆ ಮಾಡುವ ಹಾಗೆ ನಮ್ಮ ಅಪ್ಪ ಅಮ್ಮ ಬೆಳೆಸಿಲ್ಲ ಎಂದು ಪುನೀತ್‌ ಮತ್ತೆ ಹೇಳಿದರು.

    ಅಂತಿಮವಾಗಿ, ನಮ್ಮ ಮೇಲೆ ಇಲ್ಲ ಸಲ್ಲದ್ದನ್ನು ಬರೆಯಬೇಡಿ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂಬ ಧಾಟಿಯಲ್ಲಿ ಪಾರ್ವತಮ್ಮ ಮತ್ತು ಮಕ್ಕಳು ಅವಲತ್ತುಕೊಂಡರು. ಅವರೆಲ್ಲರ ಮುಖ ಅಕ್ಷರಶಃ ಬಾಡಿತ್ತು.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 6:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X