»   » ಬೆಳ್ಳಿ ರಂಗದ ಬಂಗಾರ ಶಿವರಾಮಣ್ಣ'.ಪುಸ್ತಕ ಅನಾವರಣ

ಬೆಳ್ಳಿ ರಂಗದ ಬಂಗಾರ ಶಿವರಾಮಣ್ಣ'.ಪುಸ್ತಕ ಅನಾವರಣ

Subscribe to Filmibeat Kannada

ಸುಮಾರು ನಲವತ್ತು ವರ್ಷಗಳಿಂದ ಚಿತ್ರರಂಗಕ್ಕೆ ಮಣ್ಣು ಹೊತ್ತಿರುವ ಹಿರಿಯ ಕಲಾವಿದ, ನಿರ್ಮಾಪಕ ಶಿವರಾಂ ಕುರಿತು ಪುಸ್ತಕ ಇದೇ ಶನಿವಾರ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಸಂಜೆ 5.30ಕ್ಕೆ ಬಿಡುಗಡೆಯಾಗಲಿದೆ. ಅದರ ಹೆಸರು 'ಬೆಳ್ಳಿ ರಂಗದ ಬಂಗಾರ ಶಿವರಾಮಣ್ಣ'.

ಇದರಲ್ಲಿ ಇವರು ನಡೆದು ಬಂದ ದಾರಿಯ ವಿವಿಧ ಲೇಖನಗಳು ಇರುತ್ತವೆ, ನಾಟಕ, ಚಲನಚಿತ್ರ, ವ್ಯಕ್ತಿತ್ವ ವಿಕಸನದಂಥ ಬರಹಗಳನ್ನು ಇದು ಒಳಗೊಂಡಿದೆ. ಪುಸ್ತಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಲಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾರಿಗೆ ಸಚಿವ ಆರ್. ಅಶೋಕ್ ವಹಿಸಲಿದ್ದಾರೆ. ಸಚಿವರಾದ ರಾಮಚಂದ್ರೇಗೌಡ ಅವರಿಂದ ಶಿವರಾಂಗೆ ಸನ್ಮಾನ ನಡೆಯಲಿದೆ.

ಜಿ. ವೆಂಕಟಸುಬ್ಬಯ್ಯ, ವಿಷ್ಣುವರ್ಧನ್, ಜಯಮಾಲ, ಚಿಂದೋಡಿ ಲೀಲಾ, ಎಸ್.ರಾಮನಾಥನ್, ಏಸಾಸುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುಂದರ ಪ್ರಕಾಶಕನ ಗೌರಿ ಸುಂದರ್ ಈ ಪುಸ್ತಕವನ್ನು ಹೊರತರಲಿದ್ದಾರೆ. ಕೊನೆಗೂ ಶಿವರಾಮಣ್ಣ ಅವರ ಸಾಧನೆ ಮತ್ತು ಬದುಕು ಅಕ್ಷರ ರೂಪದಲ್ಲಿ ತರುವ ಸಾಹಸವನ್ನು ಗೌರಿಸುಂದರ್ ಮಾಡಿದ್ದಾರೆ.ಇದು ಸುಂದರ ಪ್ರಕಾಶನದಿಂದ ಹೊರಬರುತ್ತಿರುವ ನೂರನೇ ಕೃತಿ ಎಂಬುದು ವಿಶೇಷ. ಈಗಾಗಲೇ ಎಪ್ಪತ್ತು ವಸಂತಗಳನ್ನು ಮುಟ್ಟಿರುವ ಶಿವರಾಂ ಚಿತ್ರರಂಗಕ್ಕೆ ಶಿವರಾಮಣ್ಣ ಎಂದೇ ಪರಿಚಯ. ಡಾ.ರಾಜ್ ರಿಂದ ಹಿಡಿದು ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್, ಪ್ರಭಾಕರ್, ಶಂಕರನಾಗ್, ದೇವರಾಜ್, ಇತ್ತೀಚಿನ ಸುದೀಪ್, ಪುನೀತ್, ದರ್ಶನ್, ಉಪೇಂದ್ರ ಇತ್ಯಾದಿ ನಟರ ಚಿತ್ರಗಳಲೆಲ್ಲಾ ಅಭಿನಯಿಸಿದ್ದಾರೆ.

ಆಡು ಮುಟ್ಟಿದ ಸೊಪ್ಪಿಲ್ಲ ಎನ್ನುವಂತೆ ಎಂಥ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಮುಗಿಸಿ ನಿರ್ದೇಶಕರನ್ನು ದಂಗು ಬಡಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ ಇವರಿಗೊಂದು ಪಾತ್ರ ಇದ್ದೇ ಇರುತ್ತಿತ್ತು. ಶರಪಂಜರ, ನಾಗರಹಾವು ಚಿತ್ರಗಳಲ್ಲಿ ಇವರ ಅಭಿನಯವನ್ನು ನೋಡಿಯೇ ಸವಿಯಬೇಕು. ಶ್ರಾವಣ ಬಂತು ಚಿತ್ರವೂ ಇವರಿಗೆ ಹೆಸರು ತಂದು ಕೊಟ್ಟಿತ್ತು. ಅಂದಿನಿಂದ ಇಂದಿನವರೆಗೆ ತಮ್ಮದೇ ವಿಶಿಷ್ಠ ಛಾಪನ್ನು ಮೂಡಿಸಿದ್ದಾರೆ. ಎಲ್ಲರೊಳಗೆ ಬೆರತಿದ್ದಾರೆ. ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಇವರ ಕುರಿತ ಪುಸ್ತಕ ಹೊರ ಬರುತ್ತಿದೆ.

(ದಟ್ಸ್ ಕನ್ನಡಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada