ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸೆಂಚುರಿ ಸ್ಟಾರ್ ಜೋಗಯ್ಯ
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಜೋಗಯ್ಯ' ಕೂಡ ಒಂದು. ಈ ಚಿತ್ರದ ಮೂಲಕ ಸೆಂಚುರಿ ಸ್ಟಾರ್ ಎಂಬ ಕಿರೀಟ ಶಿವರಾಜ್ ಕುಮಾರ್ ಮುಡಿಗೇರಲಿದೆ. ಈ ಚಿತ್ರವನ್ನು ಶತಾಯು ಗತಾಯ ಏಪ್ರಿಲ್ 24ರಂದು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಬೇಕು ಎಂದು ನಿರ್ದೇಶಕ ಪ್ರೇಮ್ ಪಣ ತೊಟ್ಟಿದ್ದಾರೆ.
'ಜೋಗಯ್ಯ' ಚಿತ್ರ ಶಿವಣ್ಣನ ವೃತ್ತಿ ಜೀವನದಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. ಅಪ್ಪಾಜಿ ಅವರ ಹುಟ್ಟುಹಬ್ಬದಂದೇ ಚಿತ್ರ ಬಿಡುಗಡೆ ಮಾಡಬೇಕು ಎಂದು ಶಿವಣ್ಣ ಕೂಡ ಆಸೆಪಟ್ಟಿದ್ದಾರೆ. ಹಾಗಾಗಿ ಅಣ್ಣಾವ್ರ ಹುಟ್ಟುಹಬ್ಬದಂದು (ಏ.24)ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಪ್ರೇಮ್ ಘೋಷಿಸಿದ್ದಾರೆ.
ಫೆಬ್ರವರಿ 19ರಂದೇ ಬಿಡುಗಡೆಯಾಗಬೇಕಿದ್ದ 'ಜೋಗಯ್ಯ' ಆಡಿಯೋ ಮಾರ್ಚ್ 2ಕ್ಕೆ ಗ್ಯಾರಂಟಿ ಎನ್ನಲಾಗಿತ್ತು. ಆಡಿಯೋ ಬಿಡುಗಡೆ ಸಮಾರಂಭ ಪದೇ ಪದೇ ಮುಂದೂಡುತ್ತಿರುವ ಬಗ್ಗೆ ಶ್ರೀಮತಿ ಗೀತಾ ಅವರು ಪ್ರೇಮ್ ಮೇಲೆ ಬೇಸರಿಸಿಕೊಂಡಿದ್ದರು. ಕಡೆಗೆ ಈಗ ಏಪ್ರಿಲ್ 4ರಂದು ಯುಗಾದಿ ಹಬ್ಬದ ದಿನ ಜೋಗಯ್ಯ ಆಡಿಯೋ ಬಿಡುಗಡೆ ಮಾಡುತ್ತಿರುವುದಾಗಿ ಪ್ರೇಮ್ ಪ್ರಾಮಿಸ್ ಮಾಡಿದ್ದಾರೆ.
ದಾಖಲೆ ಸಂಖ್ಯೆಯ ಮೂರು ಲಕ್ಷದಷ್ಟು ಸಿಡಿಗಳನ್ನು ಮಾರುಕಟ್ಟೆಗೆ ತರುತ್ತಿರುವುದಾಗಿ ಪ್ರೇಮ್ ಹೇಳಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದ್ದೇ ಇದೆ. ರಕ್ಷಿತಾ ಪ್ರೇಮ್ ನಿರ್ಮಿಸಿರುವ ಚಿತ್ರ ಇದಾಗಿರುವ ಕಾರಣ ಪ್ರೇಮ್ ಅತ್ಯಂತ ಕಾಳಜಿ ವಹಿಸಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.


Click it and Unblock the Notifications











