ಬಳ್ಳಾರಿಯಲ್ಲಿ ಕಾಂಗ್ರೆಸ್ ಕುರುಕ್ಷೇತ್ರ;ಡಿಂಗ್ರಿ ರೌಂಡ್ಸ್!!
ಬಳ್ಳಾರಿ ಚಿತ್ರಮಂದಿರಗಳು ಸೋಮವಾರ ಖಾಲಿ ಖಾಲಿ ಹೊಡೆಯುತ್ತಿದ್ದವು. ಆದರೆ ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರು ಕುರುಕ್ಷೇತ್ರ ನಾಟಕ ಆಡುತ್ತಿದ್ದಾರೆ ಎಂದು ತಿಳಿದು ಅಲ್ಲಿಗೆ ಡಿಂಗ್ರಿ ದೌಡಾಯಿಸಿದ. ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಜಮಾಯಿಸಿದ್ದು ನೋಡಿ ತಲೆ ಸುತ್ತು ಬಂದಂತಾಯ್ತು. ಸಾವರಿಸಿಕೊಂಡ ಡಿಂಗ್ರಿ ಹೇಗೋ ಒಂದು ಮೂಲೆಯಲ್ಲಿ ಜಾಗ ಗಿಟ್ಟಿಸಿ ಕಾಂಗ್ರೆಸ್ ನಾಯಕರ ಡೈಲಾಗ್ ಗಳನ್ನು ಕಿವಿಗೊಟ್ಟು ಕೇಳತೊಡಗಿದ.
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ನಾಯಕರು ಮೈಕು ಕೈಗೆತ್ತಿಕೊಂಡು ಆವೇಶದಿಂದ ಮಾತನಾಡುತ್ತಿದ್ದರೆ ಡಿಂಗ್ರಿ ರೋಮಾಂಚನಗೊಳ್ಳುತ್ತಿದ್ದ. ಮೊನ್ನೆಯಷ್ಟೆ ಬಿಡುಗಡೆಯಾದ 'ಚೆಲುವೆಯೇ ನಿನ್ನೇ ನೋಡಲು' ಹಾಗೂ 'ಮತ್ತೆ ಮುಂಗಾರು' ಚಿತ್ರದ ವಿಮರ್ಶೆಗಳನ್ನು ಓದಿದ್ದ ಡಿಂಗ್ರಿಗೆ ಯಾವುದಾದರೂ ಒಂದು ಚಿತ್ರವನ್ನು ನೋಡಬೇಕು ಎಂದು ಪ್ಲಾನ್ ಹಾಕಿದ್ದ.
ಆದರೆ ಅಷ್ಟರಲ್ಲಾಗಲೆ ಅವನ ಎಲ್ಲಾ ಪ್ಲಾನ್ ಉಲ್ಟಾಪಲ್ಟಾ ಆಗಿತ್ತು. ದೇಶಪಾಂಡೆ ಅವರ ಮಾತ ಕೇಳುತ್ತಿದ್ದಂತೆ ಡಿಂಗ್ರಿ ಅಲ್ಲಿಂದ ಕಾಲು ಕೀಳಬೇಕೆಂದುಕೊಂಡ. ಅಲ್ಲೆ ಇದ್ದ ಯಾರೋ ಒಬ್ಬರು ನಮ್ಮ ಡಿಕೆಶಿ ಮಾತಾಡ್ತಾನೆ ನೋಡ್ಲಾ ನೆಕ್ಸ್ಟು ಎಂದದನ್ನು ಕೇಳಿಸಿಕೊಂಡು ಕಾಯತೊಡಗಿದ.
| ಇಬ್ರಾಹಿಂ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಡಿಂಗ್ರಿ ಮೂತ್ರ ವಿಸರ್ಜನೆ ಮಾಡುವುದನ್ನೂ ಮರೆತು ಬಿಟ್ಟ. | |
ತಲೆಚಿಟ್ಟುಹಿಡಿದಂತಾದ ಡಿಂಗ್ರಿ ಎದ್ದು ಮೂತ್ರ ವಿಸರ್ಜನೆಗೆಂದು ಹೋದ. ಆದರೆ ಎಲ್ಲೂ ಜಾಗ ಸಿಗದೆ ಮೈಮೇಲೆ ಇರುವೆ ಬಿಟ್ಟವನಂತೆ ಹಿಂತುರಿಗಿದ. ಅಷ್ಟರಲ್ಲಾಗಲೆ ಸಿನಿಮಾ ಇಂಟರ್ ವಲ್ ಆಗಿತ್ತು. ಬಂದು ಮತ್ತೆ ಕುಳಿತುಕೊಂಡಾಗ ಮೈಕು ಸಿಎಂ ಇಬ್ರಾಹಿಂ ಕೈಯಲ್ಲಿತ್ತು. ಇಬ್ರಾಹಿಂ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಡಿಂಗ್ರಿ ಮೂತ್ರ ವಿಸರ್ಜನೆ ಮಾಡುವುದನ್ನೂ ಮರೆತು ಬಿಟ್ಟ.
ಇಬ್ರಾಹಿಂ ಸಾಹೇಬರು ಮಾತನಾಡುತ್ತಿದ್ದರೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಂದ ಹಿಡಿದು ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ಹೀಗೆ ಎಲ್ಲರೂ ಒಬ್ಬರೇ ಆಗಿ ಕಾಣಿಸತೊಡಗಿದರು. ಯಡಿಯೂರಪ್ಪ ಅವರನ್ನು ಅರ್ಧನಾರೀಶ್ವರನಿಗೆ ಹೋಲಿಸಿದಾಗಲಂತೂ ಜನ ಸಿಳ್ಳೆಹೊಡೆದು ಸಂಭ್ರಮಿಸುತ್ತಿದ್ದರು. ಹರಿಕಥೆಯಲ್ಲಿ ಬರುವ ಉಪಕತೆಗಳ ರೀತಿ ಇಬ್ರಾಹಿಂ ಸಾಹೇಬರ ಡೈಲಾಗ್ ಗಳನ್ನು ಉದುರಿಸುತ್ತಿದ್ದರೆ ಡಿಂಗ್ರಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಕ್ಕು ಸುಸ್ತಾದ. ಕಡೆಗೆ ಪ್ಯಾಂಟ್ ನೋಡಿಕೊಂಡರೆ ಡಿಂಗ್ರಿಗೆ ಅರಿವಿಲ್ಲದಂತೆ ಪ್ಯಾಂಟೆಲ್ಲಾ ಒದ್ದೆಯಾಗಿತ್ತು!


Click it and Unblock the Notifications











