ಸಂಕಲನಕಾರರ ತೆಕ್ಕೆಗೆ ಡಾ.ರಾಜ್ ಕುಮಾರ್ ಕಪ್
ವರುಣನ ಅಡ್ಡಿ ಮತ್ತು ಮಂದ ಬೆಳಕಿನ ಕಣ್ಣಾಮುಚ್ಚಾಲೆ ನಡುವೆ ಭಾನುವಾರ(ಆ.8) ಕಂಠೀರವ ಮೈದಾನದಲ್ಲಿ ನಡೆದ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ 'ಡಾ.ರಾಜ್ ಕುಮಾರ್ ಕಪ್' ಸಂಕಲನಕಾರರ ಸಂಘದ ಪಾಲಾಗಿದೆ. ಅಂತಿಮ ಹಣಾಹಣಿಯಲ್ಲಿ ಕರ್ನಾಟಕ ನಿರ್ದೇಶಕರ ಸಂಘ ಕನ್ನಡ ಚಿತ್ರ ಸಂಕಲನಕಾರರ ಸಂಘಕ್ಕೆ ಶರಣಾಯಿತು.
ಇದಕ್ಕೂ ಮುನ್ನ ಕರ್ನಾಟಕ ಚಿತ್ರ ಕಲಾವಿದರ ಸಂಘ ಹಾಗೂ ಸಂಕಲನಕಾರರ ತಂಡದ ನಡುವೆ ಸೆಮಿಫೈನಲ್ ಪಂದ್ಯ ನಡೆದಿತ್ತು. ಧೃವ್ ಬೌಲಿಂಗ್ ನಲ್ಲಿ ಕಲಾವಿದರ ಸಂಘದ ನಾಯಕ ಸುದೀಪ್ 18 ರನ್ ಗಳಿಗೆ ಔಟಾಗಿ ಕೈಚೆಲ್ಲಿದರು. ಸುದೀಪ್ ತಂಡದ 142ರನ್ ಗಳ ಗುರಿಯನ್ನು ಬೆನ್ನಟ್ಟಿದ ಸಂಕಲನಕಾರರ ತಂಡ ಗುರಿ ಮುಟ್ಟಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದಲ್ಲಿ ಚಿತ್ರ ನಿರ್ದೇಶಕರ ಸಂಘದ 133ರನ್ ಗಳ ಸವಾಲಿಗೆ ತಕ್ಕ ಉತ್ತರ ನೀಡುವ ಮೂಲಕ ಸಂಕಲನಕಾರರ ಸಂಘ ಜಯಭೇರಿ ಬಾರಿಸಿತು. ಧೃವ್ ಅವರ ಉತ್ತಮ ಆಟ ಸಂಕಲನಕಾರರ ತಂಡಕ್ಕೆ ವರವಾಗಿ ಪರಿಣಮಿಸಿತು.
ಸಾರಿಗೆ ಸಚಿವ ಆರ್ ಅಶೋಕ್, ಮಾಹಿತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಚಿತ್ರತಾರೆಗಳಾದ ಕ್ರೇಜಿಸ್ಟಾರ್ ವಿ ರವಿಚಂದ್ರನ್, ಐಂದ್ರಿತಾ ರೇ, ಕೃತಿ ಕರಬಂದ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು. ಕನ್ನಡ ಚಿತ್ರರಂಗದ ನೃತ್ಯ ಕಲಾವಿದರ ಸಹಾಯಾರ್ಥ 'ಡಾ.ರಾಜ್ ಕಪ್' ಆಯೋಜಿಸಲಾಗಿತ್ತು.
ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!


Click it and Unblock the Notifications











