For Quick Alerts
  ALLOW NOTIFICATIONS  
  For Daily Alerts

  ಭೇಷ್ :ಕಸ್ತೂರಿ ಕನ್ನಡ ವಾಹಿನಿಗೆ ಶುಭಕಾಮನೆಗಳು

  By Staff
  |

  ಮನರಂಜನೆಯ ಮನೋನ್ಮಾದದಲ್ಲಿ ಕನ್ನಡ ಜನರ ಅಮೂಲ್ಯ ಸಮಯವನ್ನು ದೋಚುತ್ತಿರುವ ಟಿವಿ ಕಾರ್ಯಕ್ರಮ ಸ್ವರೂಪಗಳಿಗೆ "ಜಾಗೃತಿ" ಒಂದು ಅಪವಾದ. ಒಂದು ಜವಾಬ್ದಾರಿ ಮಾಧ್ಯಮ ಮಾಡಲೇಬೇಕಾದ ಕೆಲಸವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿಸಿರುವ ಕಸ್ತೂರಿ ಕನ್ನಡ ಚಾನಲ್ಲಿಗೆ ಶುಭಕಾಮನೆಗಳು.-ಸಂಪಾದಕ

  ವೀಕ್ಷಕರು ಟಿವಿ ಆನ್ ಮಾಡಿದರೆ ಸಾಕು. ನೋಡುವುದಕ್ಕೆ ಕಣ್ತುಂಬ ಜಾಹಿರಾತು. ಜಾಹಿರಾತುಗಳ ಮೇಲೆ ಜಾಹಿರಾತು, ಜಾಹಿರಾತುಗಳ ಕೆಳಗೆ ಜಾಹಿರಾತು, ಜಾಹಿರಾತಿನ ಮಧ್ಯೆ ಜಾಹಿರಾತು. ಕೊನೆಗೆ ಜಾಹಿರಾತು. ಪ್ರಸನ್ನ ಭಾವ ಮೂಡಿಸುವ ಅಥವಾ ಬದುಕನ್ನು ಸಹನೀಯಗೊಳಿಸುವ ಮಾಹಿತಿಗಳಿಗೆ ನಮ್ಮ ಅನೇಕ ಟಿವಿಗಳಲ್ಲಿ ಎಲ್ಲ ಋತುಗಳಲ್ಲೂ ಬರಗಾಲ. ಸದಭಿರುಚಿ ಇಲ್ಲದ ಕಾರ್ಯಕ್ರಮಗಳೇ ಹೆಚ್ಚಾಗಿ ತುರುಕಿರುವ ನಮ್ಮ ಟಿವಿಗಳಲ್ಲಿ ಇಡೀ ಕುಟುಂಬ ಕುಳಿತು ನೋಡುವ ಕಾರ್ಯಕ್ರಮ ಸಿಗುವುದು ಅಪರೂಪ. ಜನರು ವಿಧಿಯಿಲ್ಲದೇ ಇಂತಹ ಕಾರ್ಯಕ್ರಮಗಳನ್ನು ನೋಡುವ ಸ್ಥಿತಿ.

  ಇಂದು ಬರಿಯ ಮಸಾಲೆ ಸಂಸ್ಕೃತಿಯನ್ನೇ ವೀಕ್ಷಕರು ಇಷ್ಟ ಪಡುತ್ತಾರೆಂಬುದು ಕೆಲವು ಮಾಧ್ಯಮಪಂಡಿತರ ನಂಬಿಕೆ. ಆದರೆ ವೀಕ್ಷಕರಿಗೆ ನಿಜವಾಗಿ ಏನು ಬೇಕು ಎಂದು ಯಾರೂ ಯೋಚಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ವೀಕ್ಷಕ ಕೊಟ್ಟಿದ್ದೆಲ್ಲವನ್ನು ಇಷ್ಟಪಡುತ್ತಾನೆ ಎನ್ನುವ ಕಲ್ಪನೆಯಲ್ಲಿ ದೃಶ್ಯ ಮಾಧ್ಯಮ ಮುಳುಗಿದೆ. ಹೀಗಾಗಿ ದೃಶ್ಯ ಮಾಧ್ಯಮದಲ್ಲಿ ಜನರಿಗೆ ಉಪಯುಕ್ತವಾದ ಮಾಹಿತಿ ನೀಡುವ ಪ್ರಯತ್ನ ಇಲ್ಲಿಯವರೆಗೆ ಯಾರೂ ಗಂಭೀರವಾಗಿ ಮಾಡಿಲ್ಲ. ಜನರಿಗೆ ನಿಜವಾಗಿ ಏನು ಬೇಕೋ ಅದನ್ನು ಕೊಡುವ ನಿಟ್ಟಿನಲ್ಲಿ ಈ ಮಾಧ್ಯಮ ಫೇಲ್.

  ಇದನ್ನು ಗಮನದಲ್ಲಿಟ್ಟುಕೊಂಡು, ಉಪಯುಕ್ತವಾದ ಮಾಹಿತಿಯಿರುವ, ಭಿನ್ನವಾದ ಕಾರ್ಯಕ್ರಮ ನೀಡಿದರೆ ವೀಕ್ಷಕರು ಖಂಡಿತವಾಗಿ ಇಷ್ಟಪಡುತ್ತಾರೆ, ಎನ್ನುವ ದೃಢ ನಂಬಿಕೆಯಿಂದ, ಕನ್ನಡ ಕಸ್ತೂರಿ ವಾಹಿನಿ ಮಾಹಿತಿ ಆಧರಿತ "ಜಾಗೃತಿ" ಎಂಬ ಅರ್ಧ ಗಂಟೆಯ ವಿಶಿಷ್ಟ ಕಾರ್ಯಕ್ರಮ ಪ್ರಾರಂಭಿಸಿತು. ಈ ಕಾರ್ಯಕ್ರಮ ಈಗ ನೂರ ಐವತ್ತು ಉಪಯುಕ್ತ ಕಂತುಗಳನ್ನು ಪ್ರಸಾರಮಾಡಿದ ಸಂಭ್ರಮದಲ್ಲಿದೆ.

  ಪ್ರತಿ ದಿನ ಬೆಳಿಗ್ಗೆ ಹತ್ತರಿಂದ ಹತ್ತುಮೂವತ್ತರವರೆಗೆ 2007 ಸಪ್ಟೆಂಬರ್ 26ರಿಂದ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ, ಹೆಸರೇ ಹೇಳುವಂತೆ, ಜನಸಾಮಾನ್ಯನ ತಿಳುವಳಿಕೆಯನ್ನು ಹೆಚ್ಚಿಸಿ ಜಾಗೃತಿ ಮೂಡಿಸುತ್ತ ಸಾಗಿದೆ. ಸ್ತ್ರೀ, ಆರೋಗ್ಯ, ಪರಿಸರ, ಅಭಿವೃದ್ಧಿ, ಕಾನೂನು, ವಿಜ್ಞಾನ, ಸಮಾಜದಲ್ಲಿ ಪ್ರಚಲಿತವಿರುವ ಸಮಸ್ಯೆಗಳು, ನಾಗರಿಕರೇ ಕಂಡುಕೊಂಡ ಅನುಕರಣೀಯ ಪರಿಹಾರಗಳು, ಸರಕಾರ ನಾಗರಿಕರಿಗಾಗಿ ರೂಪಿಸಿರುವ ಯೋಜನೆಗಳು ಮತ್ತು ಅದರ ಉಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ, ಮುಂತಾದ ವಿಚಾರಗಳು "ಜಾಗೃತಿ"ಯಲ್ಲಿ ಮೂಡಿಬರುತ್ತಿವೆ.

  ವೀಕ್ಷಕರಿಗೆ ಬೇಕಾದ ಮಾಹಿತಿಯ ಜೊತೆಗೆ, ಸಾಮಾನ್ಯರಿಗೆ ತಿಳಿಯದ ಬಹಳಷ್ಟು ವಿಷಯಗಳನ್ನು "ಜಾಗೃತಿ" ತಿಳಿಸುತ್ತಿದೆ. ನಮ್ಮ ಸುತ್ತಲ ಋಣಾತ್ಮಕ ಸಮಸ್ಯೆಗಳ ಬಗ್ಗೆ ಇಣುಕು ನೋಟ ಬೀರುವುದರ ಜತೆ, ಸಾಧ್ಯವಿರುವ ಧನಾತ್ಮಕ ಪರಿಹಾರಗಳ ಮೇಲೂ "ಜಾಗೃತಿ" ಬೆಳಕು ಚೆಲ್ಲುತ್ತಿದೆ. ಸಮದೃಷ್ಟಿಯ ವಿವರಣೆಯನ್ನು ಸರಳ ಕನ್ನಡದಲ್ಲಿ ಪ್ರಸ್ತುತ ಪಡಿಸುತ್ತಿದೆ. ವೀಕ್ಷಕರ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಈ ಕಾರ್ಯಕ್ರಮದಲ್ಲಿ, ಪ್ರತಿದಿನ ಒಂದೊಂದು ವಿಷಯದ ವಿವಿಧ ಆಯಾಮಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಅಲ್ಲದೆ, ಇನ್ನಷ್ಟು ವಿಶಾಲವಾದ ವಿಚಾರಗಳನ್ನು ತೆಗೆದುಕೊಂಡು ವಾರವಿಡೀ ಅದರ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಕೂಡ ಸಾಗುತ್ತಿದೆ.

  ಇಂದು "ಜಾಗೃತಿ" ಬರಿಯ ಯೋಚನೆಯಾಗಿ ಅಥವಾ ಕನಸಾಗಿ ಉಳಿದಿಲ್ಲ. ಇದರಲ್ಲಿ ಈವರೆಗೆ ಡಯಾಬಿಟಿಸ್ ನಿಂದ ಹಿಡಿದು, ಆಹಾರದ ಮೇಲೆ, ಗ್ರಾಹಕ ಜಾಗೃತಿಯ ಮೇಲೆ, ಮಾದಕ ದ್ರವ್ಯ ವ್ಯಸನದ ಮೇಲೆ, ಪವಾಡಗಳ ಹಿಂದಿನ ಮೌಢ್ಯದ ಬಗ್ಗೆ ಮತ್ತು ಇನ್ನು ಹತ್ತು ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಪರಿಣತರ ಸಂದರ್ಶನಗಳ ಜತೆಗೆ, ಸೂಕ್ತವಾದ ದೃಶ್ಯ ತುಣುಕುಗಳನ್ನು ಸೇರಿಸಿಕೊಂಡು ಸಾಕ್ಷ್ಯಚಿತ್ರದ ಮಾದರಿಯಲ್ಲಿ ಜಾಗೃತಿ ಮೂಡಿಬರುತ್ತಿದೆ.

  ಟೀವಿಯಲ್ಲಿ ಬೆಳಗಿನ ಹತ್ತರ ಸಮಯ ಮಹಿಳೆಯರಿಗೆ ಮತ್ತು ವೃದ್ಧರಿಗೆ ಮಾತ್ರ ಮೀಸಲು ಎಂಬುದು ಸಾಮಾನ್ಯ ನಂಬಿಕೆ. ಆದರೆ, ಲಿಂಗಬೇಧವಿಲ್ಲದೆ, ಪ್ರಾಯದ ಹಂಗಿಲ್ಲದೆ ಜಾಗೃತಿ ಕಾರ್ಯಕ್ರಮವನ್ನು ಎಲ್ಲರೂ ನೋಡುತ್ತಿದ್ದಾರೆಂಬುದು ಗಮನಾರ್ಹ. ಯಾವುದೇ ಸ್ಟಾರ್ ವ್ಯಾಲ್ಯೂ ಇಲ್ಲದಿದ್ದರೂ, ಯಾವುದೇ ಮಸಾಲೆ ಅಥವಾ ಉತ್ಪ್ರೇಕ್ಷೆ ಇಲ್ಲದಿದ್ದರೂ, ಒಂದು ಟೀವಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೆ "ಜಾಗೃತಿ"ಯ ನೂರಐವತ್ತು ಕಂತುಗಳ ಪ್ರಸಾರವೇ ಸಾಕ್ಷಿ.

  ಕಾಲಕಾಲಕ್ಕೆ ತಕ್ಕಂತಹ ವಿಷಯಗಳನ್ನು ಆಯ್ದುಕೊಳ್ಳುವ ಜತೆಗೆ, ವೀಕ್ಷಕರ ಸಲಹೆಗಳನ್ನೂ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯರ ಅಭಿರುಚಿಗೆ ನ್ಯಾಯ ಒದಗಿಸಲು "ಜಾಗೃತಿ" ಪ್ರಯತ್ನಿಸುತ್ತಿದೆ. ಕಸ್ತೂರಿ ವಾರ್ತೆ ವಿಭಾಗ ನಡೆಸಿಕೊಡುತ್ತಿರುವ "ಜಾಗೃತಿ", ಇನ್ನೂ ಹತ್ತು-ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಗುರಿ ಹೊಂದಿದೆ. ಜನ ಸಾಮಾನ್ಯರಿಗೆ ಮಾಹಿತಿ ಒದಗಿಸುತ್ತ ಜಾಗೃತಿ ಮೂಡಿಸುತ್ತಿರುವ "ಜಾಗೃತಿ"ಯ ಎಲ್ಲಾ ಯಶಸ್ಸು ಇದಕ್ಕೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸುತ್ತಿರುವ ವೀಕ್ಷಕವೃಂದಕ್ಕೆ ಮೀಸಲು ಎನ್ನುತ್ತದೆ ಕಸ್ತೂರಿ ಟಿವಿಯ ಕಾರ್ಯಕ್ರಮ ನಿರ್ಮಾಪಕರ ತಂಡ.

  ( ದಟ್ಸ್ ಕನ್ನಡ ಟಿವಿ ನೋಟ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X