ದರ್ಶನ್ ಜೊತೆ ಸಿನಿಮಾ ಮಾಡಲು ನೂಕು ನುಗ್ಗಲು ; ಒಂಭತ್ತರಲ್ಲಿ ಮೊದಲು ಆಕ್ಷನ್ ಕಟ್ ಹೇಳೋದು ಯಾರು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಅಂದ್ರೆ ಅಭಿಮಾನಿಗಳ ಪಾಲಿಗೆ ಹಬ್ಬ. ಅಭಿಮಾನಿಗಳೆಲ್ಲ ತಿಂಗಳ ಮುಂಚೆಯೇ ಇದಕ್ಕಾಗಿ ರೆಡಿಯಾಗುವುದು ಮಾಮೂಲಿ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಇತರರೂ ಕೂಡಾ ದರ್ಶನ್ ಅಭಿಮಾನಿಗಳಿಗೆ ಅಚ್ಚರಿದಾಯಕ ಗಿಫ್ಟುಗಳನ್ನು ಕೊಡೋ ಪರಿಪಾಠವಿದೆ. ಈ ಸಲ ಅಂಥಾದ್ದೇ ಉಡುಗೊರೆಗಳನ್ನ ಚಿತ್ರರಂಗದವರು ದರ್ಶನ್ ಅವರ ಅಭಿಮಾನಿಗಳಿಗೆ ನೀಡಿದ್ದಾರೆ.
ಹೌದು, ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಒಂದಲ್ಲ.. ಎರಡಲ್ಲ.. ಒಂಭತ್ತು ಸಿನಿಮಾಗಳನ್ನ ಘೋಷಿಸಲಾಗಿದೆ. ಆ ಪೈಕಿ ದರ್ಶನ್ ಅವರ ಆಪ್ತ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಕೂಡ ಇದ್ದಾರೆ.

ಈಗಾಗಲೇ ಯಜಮಾನ ಹಾಗೂ ಕ್ರಾಂತಿ ಚಿತ್ರಗಳನ್ನ ದರ್ಶನ್ ಅವರ ಜೊತೆ ಮಾಡಿರುವ ಇವರಿಬ್ಬರೂ ಈಗ ಇನ್ನೊಂದು ಚಿತ್ರವನ್ನ ಮಾಡಲು ಅಣಿಯಾಗಿದ್ದಾರೆ. ಅದು, ಸಿಂಧೂರ ಲಕ್ಷ್ಮಣನ ಕಥೆ ಅನ್ನುವುದು ಒಂದು ವಿಶೇಷವಾದರೆ, ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಲಿರುವುದು ಇನ್ನೊಂದು ವಿಶೇಷ.
ಇನ್ನೂ ಸೂರಪ್ಪ ಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಿತ್ರವೊಂದನ್ನ ನಿರ್ಮಾಣ ಮಾಡ್ತಾರೆ ಅನ್ನುವ ಮಾತು ಹಿಂದಿನಿಂದ ಚಾಲ್ತಿಯಲ್ಲಿದೆ. ಆ ಮಾತು ಈಗ ಇನ್ನೊಮ್ಮೆ ದರ್ಶನ್ ಅವರ ಹುಟ್ಟುಹಬ್ಬದ ನೆಪದಲ್ಲಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ದರ್ಶನ್ ಅವರ ಜೊತೆ ಅಂಬರೀಶ ಸಿನಿಮಾ ಮಾಡಿದ್ದ ಮಹೇಶ್ ಸುಖಧರೆ ಕೂಡ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರವೊಂದನ್ನ ಘೋಷಿಸಿದ್ದಾರೆ. ಮಿಕ್ಕಂತೆ ಕಳೆದ ವರ್ಷ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರವನ್ನ ಘೋಷಿಸಿದ್ದ ದರ್ಶನ್ ಅವರ ಮತ್ತೊಬ್ಬ ಅತ್ಯಾಪ್ತ ಸ್ನೇಹಿತ ಸಚ್ಚಿದಾನಂದ ಇಂಡುವಾಳ ಕೂಡ ಈ ಬಾರಿ ಕೂಡ ತಮ್ಮ ಮಾತಿಗೆ ಬದ್ದರಾಗಿದ್ದಾರೆ. ಈ ಚಿತ್ರವನ್ನೂ ಕೂಡ ತರುಣ್ ಸುಧೀರ್ ಅವರೇ ನಿರ್ದೇಶಿಸುತ್ತಿರುವುದು ವಿಶೇಷ.

ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ದರ್ಶನ್ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿಯನ್ನ ತೋರಿಸಿರುವ ಉಳಿದ ನಿರ್ಮಾಪಕರು. ಇವರ ಚಿತ್ರಕ್ಕೆ ಯಾರು ನಿರ್ದೇಶಕರು ಅನ್ನುವುದಕ್ಕೆ ಉತ್ತರ ಸದ್ಯಕ್ಕೆ ಇಲ್ಲ. ಇ
ನ್ನೂ ದರ್ಶನ್ ಅವರ ಜೊತೆ ಜಗ್ಗು ದಾದಾ ಚಿತ್ರವನ್ನ ಮಾಡಿದ್ದ ರಾಘವೇಂದ್ರ ಹೆಗ್ಡೆ ಕೂಡ ಮತ್ತೊಂದು ಚಿತ್ರವನ್ನ ದರ್ಶನ್ ಅವರ ಜೊತೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸಾಧ್ಯನಾ..? ಈ ಪ್ರಶ್ನೆಗೆ ಈಗಲೇ ಉತ್ತರ ಹೇಳುವುದು ಕಷ್ಟ.
ಯಾಕೆಂದರೆ ಜಗ್ಗು ದಾದಾ ಚಿತ್ರ ಹಿಟ್ ಆಯ್ತಾದ್ರೂ ಖುದ್ದು ದರ್ಶನ್‌ಗೆ ಆ ಚಿತ್ರದ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳಲು ಅಂದು ಇಷ್ಟವಿರಲಿಲ್ಲ. ಬಿಡುಗಡೆಯ ಹಿಂದೆ ಮುಂದೆ ನಿರ್ದೇಶಕರ ಜೊತೆಗಿನ ಚಿಕ್ಕ ಮನಸ್ತಾಪ ಇದಕ್ಕೆ ಕಾರಣವಾಗಿದ್ದು ಸುಳ್ಳಲ್ಲ. ಈ ಕಾರಣಕ್ಕೆ ದರ್ಶನ್ ಮತ್ತೊಮ್ಮೆ ರಾಘವೇಂದ್ರ ಹೆಗ್ಡೆ ಅವರ ಜೊತೆ ಸಿನಿಮಾ ಮಾಡ್ತಾರಾ ಇಲ್ಲವಾ ಎಂಬ ಕುತೂಹಲ ಇದ್ದೇ ಇದೆ.

ನೋ ಡೌಟ್ ದರ್ಶನ್ ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್. ಇವರು ಮುಟ್ಟಿದ್ದೆಲ್ಲ ಚಿನ್ನ ಆದ ಉದಾಹರಣೆ ಹಿಂದೆ ಇದೆ. ಕಾಟೇರದ ಗೆಲುವು ದರ್ಶನ್ ಅವರ ಜವಾಬ್ದಾರಿಯನ್ನ ಕೂಡ ಇನ್ನೂ ಹೆಚ್ಚಿಸಿದೆ. ಸಂದರ್ಭ ಸನ್ನಿವೇಶ ಹೀಗಿರುವಾಗ ಒಂಭತ್ತು ಸಿನಿಮಾಗಳನ್ನ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಘೋಷಿಸಲಾಗಿದೆ.
ದರ್ಶನ್ ಅವರ ಡೆವಿಲ್ ಚಿತ್ರವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಈ ಲೆಕ್ಕ ಹತ್ತಕ್ಕೇರುತ್ತೆ. ಪ್ರೇಮ್ ನಿರ್ದೇಶನದಲ್ಲಿ ಕೆ.ವಿ.ಎನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರ ತೆಗೆದುಕೊಂಡರೆ ಸಂಖ್ಯೆ ಹನ್ನೊಂದಾಗುತ್ತೆ. ಇನ್ನೂ ಸಾಮಾನ್ಯವಾಗಿ ಒಂದು ಸಿನಿಮಾ ಆದ ನಂತರವೇ ದರ್ಶನ್ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವುದು ವಾಡಿಕೆ. ಸಿನಿಮಾ ಅನೌನ್ಸ್ ಕೂಡ ಹಾಗೆಯೇ ಆಗುತ್ತವೆ. ಹೀಗಾಗಿ ಈ ಡೆವಿಲ್ ದಿ ಹೀರೋ ಹಾಗೂ ಪ್ರೇಮ್ ನಿರ್ದೇಶನದ ಚಿತ್ರ ಹೊರತು ಪಡಿಸಿದರೆ ಯಾವ ಚಿತ್ರಕ್ಕೆ ಹಾಗೂ ಯಾರಿಗೆ ದರ್ಶನ್ ಮೊದಲ ಪ್ರಾಶಸ್ಯ್ತ ನೀಡ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











