»   » 'ಗಜ' ದಾಂಗುಡಿಯಿಟ್ಟು ಬರುತ್ತಿದ್ದಾನೆ, ದಾರಿಬಿಡಿ!

'ಗಜ' ದಾಂಗುಡಿಯಿಟ್ಟು ಬರುತ್ತಿದ್ದಾನೆ, ದಾರಿಬಿಡಿ!

Subscribe to Filmibeat Kannada


ಹೊಸ ವರ್ಷದ ಪ್ರಪ್ರಥಮ ಚಿತ್ರವಾಗಿ 'ಗಜ' ದಾಂಗುಡಿಯಿಟ್ಟು ಬರುತ್ತಿದ್ದಾನೆ. ಸಂಕ್ರಾಂತಿಯ ಮೊದಲೇ ಜನವರಿ 11ರಂದು ದರ್ಶನ್ ಚಿತ್ರಪ್ರಿಯರಿಗೆ ಹುಗ್ಗಿಯ ಭೂರಿಭೋಜನ. ಸ್ಕೆಚ್ಚು, ಮಚ್ಚು, ಕಾಮಿಡಿ, ತಂಗಿಯ ಸೆಂಟಿಮೆಂಟನ್ನೆಲ್ಲ ಪಡ್ಡೆಗಳಿಗೆ ಉಣಬಡಿಸಿರುವ ದರ್ಶನ್ ಈ ಚಿತ್ರದಲ್ಲಿ ಮತ್ತೆ ಮಾಮೂಲಿಯ 'ದರ್ಶನಿಸಂ'ನ ದರ್ಶನ ಮಾಡಿಸಲಿದ್ದಾರೆ. ದರ್ಶನ್ ಫೈಟ್ಸ್, ಪಂಚರಂಗಿ ಹಾಡು, ಸ್ವಿಟ್ಜರ್‌ಲಂಡ್ ಲೊಕೇಷನ್‌ಗಳನ್ನು ಮೈತುಂಬಿಸಿಕೊಂಡಿರುವ 'ಗಜ' ನಿರ್ಮಾಪಕರ ಪಾಲಿಗೆ 'ಭದ್ರ'ವಾಗಲಿದೆ ಎಂದು ಮಾತುಗಳು ಕೇಳಿಬರುತ್ತಿವೆ.

ತೆಲುಗಿನ 'ಭದ್ರ'ಕ್ಕೂ ಕನ್ನಡದ 'ಗಜ'ಕ್ಕೂ ಅಜಗಜಾಂತರ ವ್ಯತ್ಯಾಸ ಎಂದು ಟಾಂಟಾಂ ಹೊಡೆಯುತ್ತಿರುವ ನಿರ್ಮಾಪಕರಲ್ಲೊಬ್ಬರಾದ ಸುರೇಶ್ ಗೌಡ ಮತ್ತು ನಿರ್ದೇಶಕ ಮಾದೇಶರಿಗೆ 'ಗಜ' ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೂ ತೆಲುಗಿನ ಭದ್ರ ನೋಡಿದವರಿಗೆ ಇದು ಮನವರಿಕೆಯಾಗುತ್ತಿಲ್ಲ. ವರ್ಷದ ಪ್ರಥಮ ಬಿಡುಗಡೆಯಾದ್ದರಿಂದ ಆರಂಭ ಶುಭವಾಗೇ ಆಗುತ್ತದೆ ಎಂದು ಅಪಾರವಾಗಿ ನಂಬಿದ್ದಾರೆ ಗೌಡ. ಫೈಟಿಂಗ್ ಮತ್ತು ನಟನೆಯಲ್ಲಿ ಅಪಾರ ಶ್ರಮ ಹರಿಸಿರುವ ದರ್ಶನ್ ನಿರ್ಮಾಪಕ ಮತ್ತು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಮಾಡುವುದಿಲ್ಲ ಎಂಬ ಮಾತುಗಳೂ ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಬಿಡುಗಡೆಯಾಗಿರುವ ಆಡಿಯೋ ದಾಖಲೆ ಸೃಷ್ಟಿಸದಿದ್ದರೂ ನಿರ್ಮಾಪಕರಿಗೆ ಮೋಸವನ್ನಂತೂ ಮಾಡಿಲ್ಲ. ಮಾಧುರ್ಯದಿಂದ ಕೂಡಿರುವ 'ಮಾತು ನನ್ನವಳು, ಮೌನ ನನ್ನವಳು', 'ಲಂಬೂಜಿ ಲಂಬೂಜಿ' ಮತ್ತು ಶಂಕರ್ ಮಹಾದೇವನ್ ಹಾಡಿರುವ 'ಕಮಕಮಕಮ ಕಮಲಾಕ್ಷಿ' ಹಾಡುಗಳು ಶ್ರೋತೃಗಳ ಕಿವಿಗಳಿಗೆ ಲಗ್ಗೆ ಹಾಕಿವೆ. ಸ್ವಿಟ್ಜರ್‌ಲ್ಯಾಂಡ್ ಮತ್ತು ಬ್ಯಾಂಕಾಕ್‌ಗಳಲ್ಲಿ ಚಿತ್ರೀಕರಿಸಿರುವ ಹಾಡುಗಳಿಗೆ ಸುರೇಶ್ ಗೌಡ ಬಾರೀ ಹಣವನ್ನು ಸುರಿದಿದ್ದಾರೆ. ಹರಿಕೃಷ್ಣ ಚಿತ್ರಸಂಗೀತ ನೀಡಿದ್ದಾರೆ.

ಇದು ದರ್ಶನ್‌ಗಾಗಿಯೇ ಹೆಣೆದಂಥ ಅಪ್ಪಟ ಮಸಾಲಾ ಚಿತ್ರ. ಹೊಡೆದಾಟ ಮತ್ತು ಹಾಡುಗಳಲ್ಲಿ ದರ್ಶನ್‌ಗೆ ದರ್ಶನ್‌ರೇ ಸಾಟಿ ಎಂದು ಮಾದೇಶ ಹೇಳುತ್ತಿದ್ದಾರೆ. ಕೆ.ವಿ.ರಾಜು, ಎಂ.ಎಸ್.ರಮೇಶ್, ಶಿವಮಣಿ ಮುಂತಾದ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಮಾದೇಶ ಪ್ರಥಮಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತನ್ನದೇ ಗುಂಗನ್ನು ಸೃಷ್ಟಿಸಿರುವ ಮಲೆಯಾಳಿ ಚೆಲುವೆ ನವ್ಯಾ ನಾಯರ್ ಈ ಚಿತ್ರದಲ್ಲಿ ಪಂಚರಂಗಿ ರಂಗನ್ನು ಚೆಲ್ಲಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿರುವ ನವ್ಯಾ ಅವರ ನಟನೆಯ ಬಗ್ಗೆ ಎರಡನೆ ಮಾತೇ ಬೇಡ ಎಂಬುದು ಮಾದೇಶರ ಉವಾಚ.

ಕೋಮಲ್‌ರ ಕಾಮಿಡಿ ಪಂಚ್ ಚಿತ್ರದ ಹೈಲೈಟ್‌ಗಳಲ್ಲಿ ಒಂದು ಎಂದು ಹೇಳುವುದನ್ನು ಮಾದೇಶ ಮರೆಯುವುದಿಲ್ಲ. ಏಕ್ತಾ ಕಪೂರ್, ದೇವರಾಜ್, ಮಾಸ್ಟರ್ ಹಿರಣ್ಣಯ್ಯ, ಶೋಭರಾಜ್, ಶ್ರೀನಾಥ್ ಮುಂತಾದವರು ಪೋಷಕ ನಟರಾಗಿ ನಟಿಸಿದ್ದಾರೆ. ಶ್ರೀನಿವಾಸ ಮೂರ್ತಿ ಚಿತ್ರದ ಇನ್ನೊಬ್ಬ ನಿರ್ಮಾಪಕ.
ಪೂರಕ ಓದಿಗೆ:
ಐಕ್ಕಲಕಡಿ 'ಗಜ' ರಿಮೇಕ್ ಅಂದವ ದಾರಿಬಿಟ್ಟು ಸೈಡಿಗೆ ನಡಿ
ಮಲಯಾಳಿ ಚೆಲುವೆ ನವ್ಯಾ ನಾಯರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada