»   » ಟಿ.ಎನ್‌.ಸೀತಾರಾಮ್‌ರ ಹೊಸ ಚಿತ್ರ; ‘ಮೀರಾ, ಮಾಧವ, ರಾಘವ’!

ಟಿ.ಎನ್‌.ಸೀತಾರಾಮ್‌ರ ಹೊಸ ಚಿತ್ರ; ‘ಮೀರಾ, ಮಾಧವ, ರಾಘವ’!

Subscribe to Filmibeat Kannada


ರಕ್ಷಿತಾ ಆರಂಭದಲ್ಲೇ ಕೈಕೊಟ್ಟರೂ, ಟಿ.ಎನ್‌.ಸೀತಾರಾಮ್‌ ಅವರ ಸಿನಿಮಾ ಉತ್ಸಾಹ ಕಡಿಮೆಯಾಗಿಲ್ಲ. ಊರಿಗೆ ಒಬ್ಬಳೇನಾ ಪದ್ಮಾವತಿ ಎಂಬಂತೆ ರಮ್ಯಾರನ್ನು ಹಾಕಿಕೊಂಡು ‘ಮೀರಾ, ಮಾಧವ, ರಾಘವ’ ಎಂಬ ಸಿನಿಮಾ ಆರಂಭಿಸುವ ಉತ್ಸಾಹದಲ್ಲಿ ಅವರಿದ್ದಾರೆ.

ಚಿತ್ರದ ಮುಹೂರ್ತ ಇದೇ ಜ. 15ರಂದು ನಡೆಯಲಿದೆ. ರಮ್ಯಾಜೊತೆ ಮಿಥುನ್‌ ತೇಜಸ್ವಿ, ‘ಗಂಡಹೆಂಡತಿ’ ಚಿತ್ರದ ಬಾಯ್‌ ಫ್ರೆಂಡ್‌ ತಿಲಕ್‌, ಒಂದು ಪ್ರಮುಖ ಪಾತ್ರದಲ್ಲಿ ಸುದೀಪ್‌ ಸಹಾ ನಟಿಸಲಿದ್ದಾರೆ. ಸೀತಾರಾಮ್‌ ಸದ್ದಿಲ್ಲದೆ ಚಿತ್ರದ ಹಾಡುಗಳ ಧ್ವನಿಮುದ್ರಣವನ್ನೂ ಮುಗಿಸಿದ್ದಾರೆ.

ಧಾರಾವಾಹಿಗಳಿಗೆ ಮಾಡುವಂತೆಯೇ, ಈ ಚಿತ್ರಕ್ಕೂ ಸೀತಾರಾಮ್‌ ಸಾಕಷ್ಟು ಹೋಮ್‌ವರ್ಕ್‌ ಮಾಡಿದ್ದಾರೆ. ಹಂಸಲೇಖ ಸಂಗೀತ, ‘ನೆನಪಿರಲಿ’ ಚಿತ್ರವನ್ನು ಸುಂದವಾಗಿ ಸೆರೆಹಿಡಿದ ಎಚ್‌.ಎಂ.ರಾಮಚಂದ್ರ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ಬೆಳ್ಳಿತೆರೆಯಲ್ಲಿ ಯಾಕೆ ಸೋಲ್ತಾರೆ?

ಕಾಲೇಜು ರಂಗ, ಕಾಮನಬಿಲ್ಲು, ಮಾಯಾಮೃಗ, ಮನ್ವಂತರ, ಮುಕ್ತಾ -ಹೀಗೆ ಟಿವಿಯಿಂದ ದೊರೆತ ಮನ್ನಣೆ ಅವರಿಗೆ ಚಿತ್ರರಂಗದಿಂದ ದಕ್ಕಿಲ್ಲವೆಂದೇ ಹೇಳಬೇಕು.

ನಾಟಕಕಾರರಾಗಿಯೂ ಹೆಸರು ಮಾಡಿರುವ ಅವರು, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಪಳಗಿದ್ದಾರೆ. ಆದರೂ ಬಾಕ್ಸಾಫೀಸ್‌ ಲೆಕ್ಕಾಚಾರದ ಪ್ರಕಾರ, ಗೆಲುವು ಅವರಿಗೆ ಒಲಿದಿಲ್ಲ.

ಎಸ್‌.ಎಲ್‌.ಭೈರಪ್ಪನವರ ‘ಮತದಾನ’ವನ್ನು ಸೀತಾರಾಮ್‌ ಚಲನಚಿತ್ರ ಮಾಡಿದ ಸಂಗತಿ ಎಲ್ಲರಿಗೂ ಗೊತ್ತು. ಈ ಚಿತ್ರದಿಂದ ಅವರಿಗೆ ಪ್ರಶಂಸೆಯೇನೋ ಅಪಾರವಾಗಿ ದೊರೆಯಿತಾದರೂ, ನಿರ್ಮಾಪಕರ ಜೇಬು ಖಾಲಿ ಖಾಲಿ.

ಗೆಲ್ಲೋ ಸಿನಿಮಾ ಮಾಡೋದಕ್ಕೆ ಸೀತಾರಾಮ್‌ ಕೈಲಿ ಆಗೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡೋದಕ್ಕೆ ಈ ಸಲ ನಾನಾ ಕಸರತ್ತುಗಳು ನಡೆದಿವೆಯಂತೆ. ಆ ಕಸರತ್ತುಗಳಲ್ಲಿ ರಮ್ಯಾ ಸಹಾ ಒಬ್ಬಳಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada