»   » ಪುಸ್ತಕದಲ್ಲಿ ಸಂಗ್ರಹಿಸುವುದೆಂದರೆ ತುಂಬಾ ಇಷ್ಟದ ಕೆಲಸ...

ಪುಸ್ತಕದಲ್ಲಿ ಸಂಗ್ರಹಿಸುವುದೆಂದರೆ ತುಂಬಾ ಇಷ್ಟದ ಕೆಲಸ...

By: ಮಹೇಶ್‌ ದೇವಶೆಟ್ಟಿ
Subscribe to Filmibeat Kannada

ಧಾರವಾಡದ ಈ ಹುಡುಗಿ ಈಗ ಬೆಂಗಳೂರಿನಲ್ಲೇ ಮನೆ ಮಾಡಿದ್ದಾಳೆ. ಇಲ್ಲೇ ಇರುವ ನಿರ್ಧಾರಕ್ಕೂ ಬಂದಿದ್ದಾಳೆ. ಅದು ಅವಳ ಅನಿವಾರ್ಯತೆಯೂ ಹೌದು... ಈಕೆಯ ಪ್ರೊಫೆಷನ್ನಿಗೆ ಬೆಂಗಳೂರು ತವರೂ ಹೌದು. ಈ 'ಹೌದು"ಗಳ ನಡುವೆ ಆರಕ್ಕೇರದೆ ಮೂರಕ್ಕಿಳಿಯದೆ ಉಳಿದಿರುವ ನಟಿಯ ಹೆಸರು ದಾಮಿನಿ!

'ಉಪೇಂದ್ರ" ಚಿತ್ರದ ಮೂಲಕ ಏಕ್‌ದಂ ನಟಿಯಾದ ಈಕೆಗೆ ಆಮೇಲೆ ಹೇಳಿಕೊಳ್ಳುವ ಪಾತ್ರಗಳೇನೂ ಸಿಗಲಿಲ್ಲ . ಸದ್ಯಕ್ಕೆ 'ಪಂಜಾಬಿ ಹೌಸ್‌" ಚಿತ್ರವೊಂದೇ ಪುನರ್ಜನ್ಮ ನೀಡಬಹುದೆಂದು ಕಾದು ಕುಳಿತಿದ್ದಾಳೆ. ಅದೇ ನನ್ನ ಮೊದಲ ಚಿತ್ರವೆಂದು ತಿಳಿದಿದ್ದೇನೆ ಎನ್ನುವಾಗ ದಾಮಿನಿಯ ಕಂಗಳಲ್ಲಿ ಭರವಸೆಯ ಮಿಂಚು.

ತಮಿಳು ಮತ್ತು ತೆಲುಗು ಭಾಷೆಗಳ ಅರಿವಿರದ ಕಾರಣ ಆ ಭಾಷೆಗಳಲ್ಲಿ ನಟಿಸುವ ಕೆಲವು ಅವಕಾಶಗಳನ್ನು ತಪ್ಪಿಸಿಕೊಂಡಿದ್ದಾಳೆ. ಮುಂದೊಂದು ದಿನ ಆ ಭಾಷೆಗಳಲ್ಲೂ ನಟಿಸುತ್ತೇನೆ ಬಿಡಿ ಎಂದು ಮೈ ತುಂಬಿ ನಗುವ ದಾಮಿನಿಗೆ ಎರಡು ಅಭ್ಯಾಸಗಳಿವೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ತನ್ನ ಸ್ಥಿರ ಚಿತ್ರಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಸಂಗ್ರಹಿಸುವುದು ಹಾಗೂ ಗ್ರೀಟಿಂಗ್‌ ಸಂಗ್ರಹಿಸುವುದು.

ಕನ್ನಡದ ಜೊತೆಗೆ ಬೇರೆ ಭಾಷೆಯ ಚಿತ್ರಗಳನ್ನೂ ನೋಡುವ ದಾಮಿನಿ ಸಿಟಿ ಚಾನಲ್‌ ಸಿನಿಮಾಗಳನ್ನು ಮಾತ್ರ ತಪ್ಪದೆ ನೋಡುತ್ತಾರಂತೆ. ಯಾವಾಗ ಮಾಲಾಶ್ರೀ ನಟಿಸುವುದನ್ನು ನಿಲ್ಲಿಸಿದರೋ ಅಂದಿನಿಂದ ಥಿಯೇಟರ್‌ ಕಡೆ ಮುಖ ಹಾಕೊಲ್ಲ ಎನ್ನುವ ಈಕೆ ಸಿಟಿ ಚಾನಲ್‌ನ ಖಾಯಂ ದರ್ಶಕಿಯೂ ಹೌದು.

ಉಪೇಂದ್ರ ಚಿತ್ರದಲ್ಲಿ ನಟಿಸುವವರೆಗೂ ಕೆಮರಾದ ಕೆಲಸವೇನೆಂದು ಈಕೆಗೆ ತಿಳಿದಿರಲಿಲ್ಲವಂತೆ. ಆಗ ಪ್ರೇಮ ನಟಿಸುವುದನ್ನು ನೋಡಿ ತಾನು ಅವರಂತೆ ಯಾವಾಗ ನಟಿಸಲು ಸಾಧ್ಯವೆಂದು ಅನ್ನಿಸಿದ್ದೂ ಹೌದಂತೆ. 'ಪಂಜಾಬಿ ಹೌಸ್‌"ನಲ್ಲಿ ದಾಮಿನಿಯದು ಮೂಕಿಯ ಪಾತ್ರ. ಆ ಪಾತ್ರ ಮಾಡಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ. 'ಅಂಜಲಿ ಗೀತಾಂಜಲಿ" ಚಿತ್ರದಲ್ಲಿ ಪ್ರೇಮಾ ಅವರದ್ದು ಮೂಕಿಯ ಪಾತ್ರವಾದರೂ ಅವರು ಸನ್ನೆ ಮೂಲಕ ಮಾತನಾಡುವುದಿಲ್ಲ . ಆದರೆ ನಾನು ಸನ್ನೆ ಮೂಲಕ ಮಾತನಾಡಿ ಥೇಟ್‌ ಮೂಕಿಯಾಗಿದ್ದೇನೆ. ಹೀಗೆನ್ನುವಾಗ ಆಕೆಗೆ ಪ್ರೇಮಾಗಿಂತ ತಾನು ಒಂದು ಗುಂಜಿ ಹೆಚ್ಚಿಗೆ ಎನ್ನುವ ಭಾವವಿತ್ತೇ?

ಏನೇ ಆದರೂ ದೂರದಿಂದ ಬಂದು ಇಲ್ಲಿ ಹೆಸರು ಮಾಡಿರುವ ದಾಮಿನಿಗೆ ಆದಷ್ಟು ಬೇಗ 'ಸೋಲೊ"ಹೀರೊಯಿನ್‌ ಪಾತ್ರಗಳು ಸಿಕ್ಕರೆ ಆಕೆಯ ಪ್ರೊಫೆಷನ್‌ ನಿರಂತರವಾಗಿ ಮುಂದುವರಿಯಬಹುದೇನೋ.(ವಿಜಯ ಕರ್ನಾಟಕ)

English summary
Kannada film heroine Damini waits for Good roles
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada