»   » ಅರ್ಜುನ್‌ ಸರ್ಜಾ ಈಗ ‘ಹೆಚ್‌.ಡಿ.ಕುಮಾರಸ್ವಾಮಿ’!

ಅರ್ಜುನ್‌ ಸರ್ಜಾ ಈಗ ‘ಹೆಚ್‌.ಡಿ.ಕುಮಾರಸ್ವಾಮಿ’!

Posted By:
Subscribe to Filmibeat Kannada


ಹೆಚ್‌.ಡಿ.ಕುಮಾರಸ್ವಾಮಿ’ ಇದು ಹೊಸ ಕನ್ನಡ ಸಿನಿಮಾವೊಂದರ ಟೈಟಲ್‌. ಹೆಸರೇ ಹೇಳುವಂತೆ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬದುಕಿನ ಪುಟಗಳು ಈ ಚಿತ್ರಕ್ಕೆ ಆಧಾರ!

  • ಪುಷ್ಪಪಾದ
ಈ ಚಿತ್ರದ ನಾಯಕ ಅರ್ಜುನ್‌ ಸರ್ಜಾ. ನಾಯಕಿ ಪಾತ್ರಕ್ಕೆ ಮಂಗಳೂರು ಮಲ್ಲಿಗೆ ರಾಧಿಕಾ ಸೇರಿದಂತೆ ಇನ್ನಿತರ ನಟಿಯರ ಹೆಸರುಗಳು ಕೇಳಿ ಬರುತ್ತಿದೆ!

ತಮಿಳಿನಲ್ಲಿ ನೆಲೆಕಂಡುಕೊಂಡ ಅರ್ಜುನ್‌ ಸರ್ಜಾ, ಕನ್ನಡ ಸಿನಿಮಾಗಳಲ್ಲಿ ಏನು ಮಾಡಿದರೂ ಪ್ರೇಕ್ಷಕರು ಒಪ್ಪುತ್ತಿಲ್ಲ. ಬೇಸತ್ತು ತಮಿಳುನಾಡಿಗೆ ಹೋದರೆ, ಅಲ್ಲಿನ ಪ್ರೇಕ್ಷಕರು ಕರೆದು ಮಣೆ ಹಾಕಿದರು. ಆದರೂ ಅರ್ಜುನ್‌ಗೆ ತವರಿನ ಸೆಳೆತ. ಆಗೊಮ್ಮೆ, ಈಗೊಮ್ಮೆ ಸ್ಯಾಂಡಲ್‌ವುಡ್‌ಗೆ ಬರ್ತಾನೆ ಇದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಲಾಟರಿಯಂತೂ ಅವರಿಗೆ ಹೊಡೆದಿಲ್ಲ!

ಮತ್ತೆ ‘ಹೆಚ್‌.ಡಿ.ಕುಮಾರಸ್ವಾಮಿ’ ಸಿನಿಮಾ ಬಗ್ಗೆ ಹೇಳುವುದಾದರೇ, ಇದೊಂದು ದಾಖಲೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಬ್ಬರ ಹೆಸರಲ್ಲಿ ಸಿನಿಮಾ ಹೊರಬಂದ ಉದಾಹರಣೆಗಳಿಲ್ಲ. ಹೀಗಾಗಿ ಕುಮಾರಸ್ವಾಮಿಗೆ ಮತ್ತೊಂದು ಗರಿ!

‘ಎಸ್‌.ಪಿ.ಸಾಂಗ್ಲಿಯಾನ’ ಚಿತ್ರದ ನಿರ್ಮಾಪಕ ಕೃಷ್ಣಂರಾಜುಗೆ, ಕುಮಾರಸ್ವಾಮಿ ಬದುಕಿನ ಬಗ್ಗೆ ಬೆರಗು. ತಮ್ಮ ಬೆರಗನ್ನು ಚಿತ್ರವನ್ನಾಗಿಸಲು ಅವರು ಹಣ ಹಾಕುತ್ತಿದ್ದಾರೆ. ಚಿತ್ರದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ, ಆಶೀರ್ವಾದ ಪಡೆದಿದ್ದಾರೆ.

ಒಂದು ದಿನದ ಮುಖ್ಯಮಂತ್ರಿ ಪಾತ್ರವನ್ನು ತಮಿಳು ಚಿತ್ರ ‘ಮುಧಲ್ವನ್‌’ನಲ್ಲಿ ನಿರ್ವಹಿಸಿದ್ದ ಅರ್ಜುನ್‌, ಈಗ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪಾತ್ರ ಮಾಡಲು ಸಜ್ಜಾಗಿದ್ದಾರೆ.

ಮುಖ್ಯಮಂತ್ರಿ ಮತ್ತು ಸಿನಿಮಾ :

ಸಿನಿಮಾಗಳಿಗೂ ಮುಖ್ಯಮಂತ್ರಿಗಳಿಗೂ ಒಂದಿಷ್ಟು ನಂಟುಗಳಿವೆ. ತೆಲುಗಿನಲ್ಲಿ ಎನ್‌ಟಿಆರ್‌, ತಮಿಳಿನಲ್ಲಿ ಎಂಜಿಆರ್‌ ಮಿಂಚಿದ್ದು ಎಲ್ಲರಿಗೂ ಗೊತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ ಅಂತಹ ಗಂಭೀರ ಪ್ರಯತ್ನಗಳು ನಡೆದಿಲ್ಲ. ನಟ ರಾಜ್‌ಕುಮಾರ್‌, ರಾಜಕೀಯ ಪ್ರವೇಶಿಸಿದ್ದರೆ, ಮುಖ್ಯಮಂತ್ರಿಯಾಗುತ್ತಿದ್ದರು ಎಂಬ ಮಾತುಗಳು ನಮ್ಮ ನಡುವೆ ಇವೆ.

ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ‘ಮರಣ ಮೃದಂಗ’ ಮತ್ತು ‘ಪ್ರಜಾಶಕ್ತಿ’ ಯಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ಕಾದಂಬರಿ ಸಿನಿಮಾ(ಸಾಗರ ದೀಪ) ಆಗಿದೆ. ಸಿನಿಮಾ ನಿರ್ಮಾಣ ಮತ್ತು ವಿತರಣೆ ಮಾಡುತ್ತಿದ್ದ ಹೆಚ್‌.ಡಿ.ಕುಮಾರಸ್ವಾಮಿ, ಸಿನಿಮಾದಲ್ಲಾಗುವಂತೆಯೇ, ಮುಖ್ಯಮಂತ್ರಿ ಕುರ್ಚಿ ಹತ್ತಿದರು. ಇಷ್ಟು ಬಿಟ್ಟರೇ, ಬೇರೆ ವಿಷಯಗಳು ಸದ್ಯಕ್ಕೆ ನೆನಪಾಗುತ್ತಿಲ್ಲ. ನಿಮಗೇನಾದರೂ ನೆನಪಾಗುತ್ತಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada