»   » ಕನ್ಯಾಕುಮಾರಿಯಾದ ಕಾಶ್ಮೀರಿ ಪಂಡಿತಪುತ್ರಿ

ಕನ್ಯಾಕುಮಾರಿಯಾದ ಕಾಶ್ಮೀರಿ ಪಂಡಿತಪುತ್ರಿ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಕಾಶ್ಮೀರಿ ಸುಂದರಿ ಪ್ರಿಯ ಪಂಡಿತ್‌ಗೆ ಕನ್ಯಾಕುಮಾರಿ ಕಡೆಯಲ್ಲಿ ಮಿಂಚುವಾಸೆ. ಉತ್ತರದಿಂದ ದಕ್ಷಿಣದವರೆಗೂ ಕೀರ್ತಿ ಕಂಪನ್ನು ಸೂಸುವುದು ಮಹತ್ವಾಕಾಂಕ್ಷೆ. ಸದ್ಯಕ್ಕೆ ‘ದಿ ಸಿಟಿ’ ಎಂಬ ಇಂಗ್ಲಿಷ್‌ ಹೆಸರಿನ ಕನ್ನಡ ಸಿನಿಮಾದಲ್ಲಿ ‘ಬಾಯಿ ಭಯಂಕರ’ ಸಾಯಿಕುಮಾರ್‌ ನಾಯಕಿಯಾಗಿ ಪ್ರಿಯ ಸಿನಿಮಾ ಲೋಕಕ್ಕೆ ಕಾಲಿಡುತ್ತಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಎಜಿಎಂ ಜಿ.ಎಲ್‌.ಪಂಡಿತ್‌ ಮಗಳಾದ ಪ್ರಿಯ ಅವರ ಮೂಲ ಕಾಶ್ಮೀರ, ವರ್ತಮಾನದ ವಾಸ್ತವ್ಯ ಮೈಸೂರು. ಅಮ್ಮ ಉಷಾ ಪಂಡಿತ್‌ ಮೈಸೂರಿನವರೇ. ಹಾಗಾಗಿ ಪ್ರಿಯಗೆ ಕನ್ನಡ ಗೊತ್ತಿಲ್ಲದ ತೊಂದರೆಯಿಲ್ಲ. ಅಷ್ಟೇ ಅಲ್ಲ, ಕ್ಯಾಮರಾ ಕಂಡರೂ ಈಕೆಗೆ ಭಯವಿಲ್ಲ. ಯಾಕೆಂದರೆ, ಸಾಕಷ್ಟು ಬಾರಿ ಕ್ಯಾಮರಾ ಮುಂದೆ ಕ್ಯಾಟ್‌ವಾಕ್‌ ಮಾಡಿದ ಅನುಭವವಿದೆ.

ಮಿಸ್‌ ಮೈಸೂರಿನಲ್ಲಿ ರನ್ನರ್‌ ಅಪ್‌, ಮಿಸ್‌ ಜೆಸಿನದಲ್ಲಿ ಮಿಂಚು ಸುಂದರಿ, ಮಿಸ್‌ ಹೀರೋ ಹೋಂಡಾದಲ್ಲಿ ಮೋಟಾರ್‌ ಹುಡುಗಿ, ಮಿಸ್‌ ಸೌತ್‌ ಕರ್ನಾಟಕದಲ್ಲಿ ದಕ್ಷಿಣ ಸುಂದರಿ... ಹೀಗೆ ಸಾಕಷ್ಟು ಬಾರಿ ಸುಂದರಿ ಅಂತ ಬೆನ್ನು ತಟ್ಟಿಸಿಕೊಂಡಿರುವ ಪ್ರಿಯ ಮುಖದಲ್ಲಿ ದಕ್ಷಿಣ ಭಾರತದ ಅಪ್ಪಟ ಕಳೆಯಿದೆ. ಪಕ್ಕದಿಂದ ನೋಡಿದರೆ ಮಾಧವಿ ಥರ ಕಾಣಿಸುತ್ತಾರೆ. ಎತ್ತರ ಕೂಡ ಅವರಷ್ಟೇ ಇದೆ. ನಕ್ಕರೆ ದುಂಡುಮುಖ ಚಂದಿರನಂತಾಗುತ್ತೆ.

ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ಗೆ ಈಕೆ ಮೆಚ್ಚುಗೆಯಾಗಿದ್ದೇ ತಡ, ‘ದಿ ಸಿಟಿ’ ಚಿತ್ರದ ನಾಯಕಿಯ ಹೊಣೆ ಹೊರಿಸಿದ್ದಾರೆ. ಒಂದು ಸೋಲೋ ಗೀತೆ, ಒಂದು ಡ್ಯುಯೆಟ್ಟು, ಒಂದಷ್ಟು ಗುಡುಗು ಡೈಲಾಗ್‌ಗಳಿಗೆ ಸಾಯಿಕುಮಾರ್‌ ಜೊತೆ ಮುಖಾಮುಖಿ- ಇದು ಪ್ರಿಯಾಗೆ ಶಿಲ್ಪ ಕಲ್ಪಿಸಿಕೊಟ್ಟಿರುವ ಅವಕಾಶ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಡಸ್ಟ್ರಿಯಲ್‌ ರಿಲೇಷನ್ಸ್‌ ಓದುತ್ತಿರುವ ಪ್ರಿಯಾಗೆ ಐಶ್ವರ್ಯ ರೈ ಆಗೋಕೆ ಇಷ್ಟವಿಲ್ಲ. ಶ್ರೀದೇವಿ ಥರ ಆಗಬೇಕು ಅನ್ನೋದು ಕನಸು. 10 ವರ್ಷವಾದರೂ ಸಿನಿಮಾ ಲೋಕದಲ್ಲಿ ಮಿಂಚಬೇಕು ಅಂತ ಆಸೆ. ಚಾಲ್‌ಬಾಜ್‌, ಸದ್ಮಾ, ರೂಪ್‌ ಕಿ ರಾಣಿ ಚೋರೋಂಕಾ ರಾಜಾ ಮೋದಲಾದ ವೆರೈಟಿ ಹಿಂದಿ ಚಿತ್ರಗಳಲ್ಲಿ ಶ್ರೀದೇವಿ ಮಿಂಚಿರುವಂತೆ ಜಗಮಗಿಸಬೇಕೆಂಬುದು ಪ್ರಿಯಾ ಗುರಿ.

ಇಷ್ಟೆಲ್ಲ ಮಾಡುವುದಕ್ಕೂ ಮುಂಚೆ ಅವರು ಡೈಲಾಗ್‌ ರಾಜ ಸಾಯಿಕುಮಾರ್‌ ಉಸಿರು ಹಿಡಿದುಕೊಂಡು ಆಡುವ ಸಂಭಾಷಣೆಯನ್ನು ತಡೆದುಕೊಳ್ಳಬೇಕು. ಸಾಲದ್ದಕ್ಕೆ ಅದಕ್ಕಿಂತ ಹೆಚ್ಚು ಉಸಿರು ಹಿಡಕೊಂಡು ಮಾತಾಡುವ ಮಾಸ್ಟರ್‌ ಹಿರಣ್ಣಯ್ಯ ಅವರೂ ‘ದಿ ಸಿಟಿ’ಯಲ್ಲಿ ಉಂಟು. ಪ್ರಿಯ ಅವರ ಮುಖಾರವಿಂದ ಗಾಂಧಿನಗರಕ್ಕೆ ಪರಿಚಯವಾದದ್ದೇ ತಡ ಅದೃಷ್ಟ ಒದ್ದುಕೊಂಡು ಬಂದಿದೆ. ‘ಪ್ರೀತಿ ಅಂದ್ರೆ ಇದೇನಾ’ ಎಂಬ ಇನ್ನೊಂದು ಚಿತ್ರ ಈಕೆಯ ಕೈಗೆ ಸಿಕ್ಕಿದೆ. ಮೈಸೂರಿನವರೇ ಆದ ವಿಕ್ರಂ ಎಂಬ ಹುಡುಗ ನಾಯಕನಾಗಿ ಸಿಕ್ಕಿರುವುದು ಬೋನಸ್ಸು.

ಇದೀಗ ಬಂದ ಸುದ್ದಿ- ಪ್ರಿಯ ಪಂಡಿತ್‌ ಬಾಲಿವುಡ್‌ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ದಿನೇಶ್‌ ಬಾಬು ನಿರ್ದೇಶಿಸಿದ್ದ ಕನ್ನಡ ಚಿತ್ರ ‘ಸುಪ್ರಭಾತ’ದ ರೀಮೇಕಾದ ಈ ಚಿತ್ರದ ಹೆಸರು ‘ಬೇಕಬರ್‌’. ತಾಕಿರ್‌ ಖಾನ್‌ ಎಂಬ ನಿರ್ಮಾಪಕ ಕೈಗೆತ್ತಿಕೊಂಡಿರುವ ಈ ಸಿನಿಮಾದ ಪೂರ್ತಿ ಬಳಗ ಇನ್ನೂ ಫಿಕ್ಸ್‌ ಆಗಿಲ್ಲ. ಎಲ್ಲಕ್ಕೂ ಮೊದಲು ತಾಕಿರ್‌ ಖಾನ್‌ ಪ್ರಿಯ ಅವರನ್ನು ಬುಕ್‌ ಮಾಡಿಕೊಂಡಿರುವುದರಿಂದ ಈಕೆ ಕೂಡ ವಲಸೆ ಹಕ್ಕಿಯಾಗುವುದು ಗ್ಯಾರಂಟಿಯಾಗಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...