For Quick Alerts
  ALLOW NOTIFICATIONS  
  For Daily Alerts

  ಅರಮನೆ ಮೈದಾನದಲ್ಲಿ ರಾಜ್‌ದರ್ಬಾರು!

  By Staff
  |

  *ಹ.ಚ.ನ

  ‘ ಸಾರ್ಥಕ ಸುವರ್ಣ ’ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶನಿವಾರ(ಜು.9) ಸಂಜೆ ಆರುಗಂಟೆಗೆ ಅರಮನೆ ಮೈದಾನದಲ್ಲಿ ರಾಜ್‌ ಮೇಳಕ್ಕೆ ಅಂತಿಮ ಕ್ಷಣದ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ವರುಣನ ಕೃಪೆಯಿಂದ ಮಳೆಯಾಗದಿದ್ದರೆ ಕಾರ್ಯಕ್ರಮ ರಂಗೇರಲಿದೆ.

  ಕನ್ನಡ ಚಿತ್ರರಂಗದ ಹಿರಿಯಣ್ಣ, ಅಭಿಮಾನಿಗಳ ಪಾಲಿನ ಅಣ್ಣಾವ್ರು ಎನ್ನುವ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿರುವ ರಾಜ್‌ಕುಮಾರ್‌ ಅವರ ಸಾರ್ಥಕ ಸೇವೆಯನ್ನು ರಾಜ್ಯ ಸರ್ಕಾರ ನಾಡಿನ ಪರವಾಗಿ ಅಭಿನಂದಿಸುತ್ತಿದೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಸಲ್ಲಿಸಿರುವ 50 ವರ್ಷಗಳ ಗಣನೀಯ ಸೇವೆಯನ್ನು ಆ ಮೂಲಕ ಸ್ಮರಿಸುತ್ತಿದೆ.

  ಶನಿವಾರ ಸಂಜೆ ಆರುಗಂಟೆಗೆ ವೇದಿಕೆಯ ಮೇಲೆ ಕನ್ನಡ ಚಿತ್ರರಂಗದ ನಟ-ನಟಿಯರು ವಿಶೇಷ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಇದೇ ಆವರಣದಲ್ಲಿ ‘ಕನ್ನಡವೇ ಸತ್ಯ’ಎನ್ನುವ ವಿನೂತನ ಕಾರ್ಯಕ್ರಮ ನೀಡಿದ್ದ ಸಿ.ಅಶ್ವತ್ಥ್‌ ಅವರ ‘ಜಯಭಾರತ ಜನನಿಯ ತನುಜಾತೆ’ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ನಟ ರಾಘವೇಂದ್ರ ರಾಜ್‌ಕುಮಾರ್‌, ನಟಿ ಪ್ರೇಮ ಅವರ ಹಾಡುಗಳು, ಪುನೀತ್‌ ಮತ್ತು ಶಿವರಾಜ್‌ಕುಮಾರ್‌ ಅವರ ನೃತ್ಯಗಳು ಕಾರ್ಯಕ್ರಮದ ಮನರಂಜನಾ ಪಟ್ಟಿಯಲ್ಲಿವೆ. ನಟಿ ರಮ್ಯ, ರಾಧಿಕಾ ಸೇರಿದಂತೆ ವಿವಿಧ ನಟಿಯರು ಕಾರ್ಯಕ್ರಮದಲ್ಲಿ ಹಾಡಿ-ಕುಣಿಯಲಿದ್ದಾರೆ.

  ಸುಮಾರು ಮೂರು ಗಂಟೆಗಳ ಈ ಕಾರ್ಯಕ್ರಮದ ಕಡೆಯ ಘಟ್ಟದಲ್ಲಿ ವರನಟನನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸನ್ಮಾನಿಸಿ, ಬೇಡರ ಕಣ್ಣಪ್ಪ ಚಿತ್ರದ ಪ್ರತಿರೂಪವಿರುವ ಸ್ಮರಣಫಲಕವನ್ನು ನೀಡುವರು. ಈ ಸಂದರ್ಭದಲ್ಲಿ ರಾಜ್‌ ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸುವ ವಾರ್ತಾ ಇಲಾಖೆ ಹೊರತಂದಿರುವ 200ಪುಟಗಳ ‘ಬಂಗಾರದ ಮನುಷ್ಯ’ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿದೆ.

  ಏನೀ ಅಪಸ್ವರ? : ಮನೆ ಹಿರಿಯಣ್ಣನನ್ನು ಗೌರವಿಸುವ ಐತಿಹಾಸಿಕ ಸಮಾರಂಭವಾಗಬೇಕಿದ್ದ ಸಾರ್ಥಕ ಸುವರ್ಣದ ಬಗೆಗೆ ಅಲ್ಲಲ್ಲಿ ಅಪಸ್ವರಗಳು ಎದ್ದಿವೆ. ಈ ಕಾರ್ಯಕ್ರಮವನ್ನು ಸರ್ಕಾರ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಸಿನಿ ಕ್ಷೇತ್ರದ ಗಣ್ಯರನ್ನು ಮತ್ತು ವಿರೋಧ ಪಕ್ಷದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಗೊಣಗಾಟಗಳ ಕಾರ್ಮೋಡ ಕಾರ್ಯಕ್ರಮದ ಮೇಲೆ ಕವಿದಿದೆ. ಕಾರ್ಮೋಡ ಸರಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
  ಆವತ್ತು ಗಂಗೂಬಾಯಿ ಹಾನಗಲ್‌ ಅವರಿಗೆ ಅವಮಾನ ಮಾಡಿದ ಸರ್ಕಾರ, ಸಾರ್ಥಕ ಸಂಭ್ರಮ ಕಾರ್ಯಕ್ರಮವನ್ನು ಬೇಜವಬ್ದಾರಿಯಿಂದ ನಡೆಸುತ್ತಿದೆ. ರಾಜಣ್ಣನಿಗೆ ಸನ್ಮಾನ ಮಾಡುತ್ತಿದ್ದಾರೋ, ಇಲ್ಲ ಅವಮಾನ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ನಟ ವಿಷ್ಣುವರ್ಧನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಸುದ್ದಿಗಾರರೊಂದಿಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಸರ್ಕಾರದಿಂದ ಒಂದು ಒಳ್ಳೆ ಕಾರ್ಯಕ್ರಮ ನಡೆದಿಲ್ಲ. ರಾಜ್‌ ಕನ್ನಡದ ಆಸ್ತಿ . ಅವರನ್ನು ಅಭಿನಂದಿಸುವ ಕಾರ್ಯಕ್ರಮ ಯಾವುದೋ ಮೂರುಗಂಟೆಯ ರಸಸಂಜೆಯ ಕಾರ್ಯಕ್ರಮವಾಗಬಾರದು. ಅದು ಐತಿಹಾಸಿಕವಾಗಬೇಕು ಎಂದಿದ್ದಾರೆ.

  ನನ್ನ ಗಮನಕ್ಕೆ ತಾರದೇ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಪ್ರಕಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದರೆ ಅಪಾರ್ಥ ಕಲ್ಪಿಸಲಾಗುತ್ತದೆ. ಶನಿವಾರ ಮೈಸೂರಿನಲ್ಲಿ ವಿಷ್ಣುಸೇನೆ ಚಿತ್ರೀಕರಣವಿದೆ. ರಾಜ್‌ ನಮ್ಮೆಲ್ಲರಿಗೂ ಹಿರಿಯಣ್ಣ. ಹೀಗಾಗಿ ಅವರ ಮೇಲಿನ ಪ್ರೀತಿಯಿಂದಾಗಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಅವರನ್ನು ಕುರಿತು ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ವಿಷ್ಣು ಅಭಿಪ್ರಾಯಪಟ್ಟಿದ್ದರು.

  ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳಿಲ್ಲ, ಅಧಿಕೃತ ಆಹ್ವಾನವಿಲ್ಲ ಎಂದು ನಟ ಮತ್ತು ವಿಧಾನ ಪರಿಷತ್‌ ಸದಸ್ಯ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರತಿಪಕ್ಷದ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕಾರಿಸುವ ಬೆದರಿಕೆವೊಡ್ಡಿದ್ದರು. ಆಹ್ವಾನ ಪತ್ರಿಕೆಯಲ್ಲಿ ಪ್ರತಿಪಕ್ಷದ ಮುಖಂಡರ ಹೆಸರುಗಳಿರಲಿ, ಅಧಿಕೃತ ಆಹ್ವಾನ ಸಹಾ ಸಿಕ್ಕಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು. ಸರ್ಕಾರ ಬಹಿರಂಗ ಕ್ಷಮೆ ಕೇಳದಿದ್ದರೆ, ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

  ವಾರ್ತಾ ಇಲಾಖೆ ಎಲ್ಲರನ್ನು ಸಮಾಧಾನಪಡಿಸಲು ಎರಡನೇ ಆಹ್ವಾನ ಪತ್ರಿಕೆ ಪ್ರಕಟಿಸಿದೆ. ಹೊಸ ಸೇರ್ಪಡೆಗಳ ಪರಿಣಾಮ ಮುಖ್ಯಮಂತ್ರಿ ಚಂದ್ರು ಮತ್ತು ಉಮಾಶ್ರೀ ಅವರಿಗೆ ವೇದಿಕೆಯ ಮೇಲೆ ಸ್ಥಾನ ಕಲ್ಪಿಸಲಾಗಿದೆ.

  ಹಬ್ಬದ ಸಂಭ್ರಮ : ನಗರದ ಗೋಡೆಗೋಡೆಗಳ ಮೇಲೆ ಸಾರ್ಥಕ ಸಂಭ್ರಮದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಶನಿವಾರ ಮಧ್ಯಾಹ್ನ 1ಗಂಟೆಯಿಂದಲೇ ಈ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆಗಳಿವೆ. ಅರಮನೆ ಮೈದಾನದಲ್ಲಿ ಬೃಹತ್‌ ವೇದಿಕೆ ಎದ್ದುನಿಂದಿದ್ದು, ವೇದಿಕೆಯ ದ್ವಾರಪಾಲಕರಂತೆ ಡಾ.ರಾಜ್‌ಕುಮಾರ್‌ರ ಪ್ರಪ್ರಥಮ ಚಿತ್ರ ‘ಬೇಡರ ಕಣ್ಣಪ್ಪ’ ಮತ್ತು ‘ಶಬ್ಧವೇದಿ’ ಚಿತ್ರದ ಸ್ಟಿಲ್‌ಗಳನ್ನು ಕಣ್‌ಕುಗ್ಗುವಂತಿವೆ.
  ಸಾರ್ಥಕ ಸಂಭ್ರಮವನ್ನು ಸವಿಯಲು ಆಗಮಿಸುವ ಜನರಿಗೆ ಅನುಕೂಲವಾಗಲೆಂದು, 10ಹೆಬ್ಬಾಗಿಲುಗಳು ತಲೆಎತ್ತಿವೆ. ಭಾಗ್ಯದ ಬಾಗಿಲು, ಬೇಡರ ಕಣ್ಣಪ್ಪ, ರಣಧೀರ ಕಂಠೀರವ -ಹೀಗೆ ರಾಜ್‌ ಅಭಿನಯದ ಪ್ರಮುಖ ಚಿತ್ರಗಳ ಶೀರ್ಷಿಕೆಗಳು ದ್ವಾರವನ್ನು ಅಲಂಕರಿಸಿವೆ.

  ಸುಮಾರು 40 ಸಾವಿರ ಜನಕ್ಕೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಚಿತ ಪಾಸ್‌ಗಳ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಜನಪ್ರತಿನಿಧಿಗಳು, ಸಿನಿತಾರೆಯರು ಮತ್ತು ವಿಶೇಷ ಆಹ್ವಾನಿತರಿಗೆ ಪ್ರತ್ಯೇಕ ಮೂರು ಹಂತಗಳಲ್ಲಿ ಆಸನ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

  ಶನಿವಾರ ಅರಮನೆ ಮೈದಾನಕ್ಕೆ ದೂರದರ್ಶನ ಮತ್ತು ಬಳ್ಳಾರಿ ರಸ್ತೆ ಎರಡೂ ಕಡೆಯಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ವಾಹನಗಳಿಗಾಗಿ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಸವಿಯಲು ಪೂರಕವಾಗುವಂತೆ, ಹತ್ತು ದೊಡ್ಡ ಪರದೆಗಳನ್ನು ಆವರಣದಲ್ಲಿ ಅಳವಡಿಸಲಾಗಿದೆ. 30ಲಕ್ಷ ರೂ. ಅಂದಾಜಿನ ಈ ಕಾರ್ಯಕ್ರಮದ ನಿರ್ವಹಣೆಯ ಹೊಣೆಯನ್ನು ಗ್ಲೋಬಲ್‌ ಕನ್ಸಲ್ಟೆಂಟ್‌ ಹೊತ್ತಿದೆ. ಅಭಿಮಾನಿ ದೇವರುಗಳ ಮಧ್ಯೆತಾರಾಮೇಳ ಕಳೆಗಟ್ಟುವುದೇ?

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X