»   » ಅಶೋಕ್‌ ಪಾಟೀಲರಿಗೆ ‘ಶಾಪ’ ವಿಮೋಚನೆ ಆಗೋದ್ಯಾವಾಗ?

ಅಶೋಕ್‌ ಪಾಟೀಲರಿಗೆ ‘ಶಾಪ’ ವಿಮೋಚನೆ ಆಗೋದ್ಯಾವಾಗ?

Posted By: Super
Subscribe to Filmibeat Kannada

'ಅವರು ನನ್ನನ್ನ ಕರೆದರು. ಮಾತಾಡಿಸಿದರು. ಎರಡೇ ನಿಮಿಷದಲ್ಲಿ ನೀವೇ ನನ್ನ ಸಿನಿಮಾಟೋಗ್ರಾಫರ್‌ ಅಂದರು. ಕೆಲಸಕ್ಕೆ ಹೋದೆ. ಒಂದು ಪುಸ್ತಕ ಕೊಟ್ಟರು. ಅದರಲ್ಲಿ ಕತೆಯಷ್ಟೇ ಅಲ್ಲ, ಶೆಡ್ಯೂಲ್‌ಗಳೆಲ್ಲಾ ಇದ್ದವು. ಓದಿಕೊಂಡೇ ಕೆಲಸ ಮಾಡಿದ್ದು. ನನ್ನ ಹತ್ತು ವರ್ಷಗಳ ಕೆರಿಯರ್‌ನ ದಿ ಬೆಸ್ಟ್‌ ಚಿತ್ರವದು..."

ಅಶೋಕ್‌ ಕುರಿತು ಇನ್ನೊಬ್ಬ ಅಶೋಕ್‌ ಆಡಿರುವ ಮೆಚ್ಚುಗೆಯ ಮಾತಿದು. 'ಶಾಪ" ಚಿತ್ರದ ನಿರ್ದೇಶಕ ಅಶೋಕ್‌ ಪಾಟೀಲರನ್ನು ಟಿವಿ ಸಂದರ್ಶನವೊಂದರಲ್ಲಿ ಯದ್ವಾತದ್ವಾ ಹೊಗಳಿದ್ದು ಸಿನಿಮಾಟೋಗ್ರಾಫರ್‌ ಅಶೋಕ್‌ ಕಶ್ಯಪ್‌.

ಇಬ್ಬರೂ ಅಶೋಕರದ್ದು ಒಂದೇ ಟೇಸ್ಟು. ಇಬ್ಬರ ನಡುವಿನ ವ್ಯತ್ಯಾಸವೆಂದರೆ- ಒಬ್ಬರು ಇದ್ದಬದ್ದ ಕಷ್ಟಗಳನ್ನೆಲ್ಲ ನುಂಗಿಕೊಂಡು ಇಲ್ಲೇ ಏಗುತ್ತಿದ್ದರೆ, ಇನ್ನೊಬ್ಬರು ಯಾರ ಸಹವಾಸವೂ ಬೇಡ ಅಂತ ಅಮೆರಿಕಾಗೆ ಓಡಿದ್ದಾರೆ. ತಮ್ಮ ಚೊಚ್ಚಿಲ ಸಿನಿಮಾ 'ಶಾಪ" ಅಶೋಕ್‌ ಪಾಟೀಲರ ಪಾಲಿಗೆ ಶಾಪವೇ ಆಯಿತು. ಅಣ್ಣನ ದುಡ್ಡೆಲ್ಲಾ ನೀರಲ್ಲಿ ಮಾಡಿದ ಹೋಮವಾಯ್ತು.

ಅಶೋಕ್‌ ಪಾಟೀಲರ ಕೆಲಸ ನಿರರ್ಥಕವಾ?
ಟೇಸ್ಟ್‌ ಇರುವವರ್ಯಾರೂ ಹಾಗೆ ಹೇಳೋಕೆ ಸಾಧ್ಯವೇ ಇಲ್ಲ. ಶಾಪ ಚಿತ್ರಕ್ಕೆ ಒಳ್ಳೆಯ ಕ್ರಿಟಿಕ್‌ ಸಿಕ್ಕಿತು. ಆದರೆ, ಥಿಯೇಟರ್‌ಗೆ ಜನ ಬರಲಿಲ್ಲ. ಹೊಸ ನಿರ್ದೇಶಕ ಎಂಬ ಕಾರಣಕ್ಕೋ ಏನೋ ವಿತರಕರು ಅಶೋಕ್‌ ಪಾಟೀಲರನ್ನು ಗೋಳು ಹೊಯ್ದುಕೊಂಡು, ಅಕ್ಷರಶಃ ಬೆಂಗಳೂರಿಂದ ಓಡಿಸಿದರು. ಆದರೆ, ಶಾಪ ಚಿತ್ರವನ್ನು ಗಂಭೀರವಾಗಿ ಗಮನಿಸಿದವರು ಅಶೋಕ್‌ ಪಾಟೀಲರನ್ನು ಮಣಿರತ್ನಂಗೆ ಹೋಲಿಸಿದ್ದೂ ಉಂಟು.

ಮೊದಲ ಸೋಲಿಗೇ ಅಲುಗಾಡಿ ಅಶೋಕ್‌ ಪಾಟೀಲ್‌ ಸುಮ್ಮನಿರೋದು ಯಾಕೆ? ಅವರೀಗ ಮಾಡುತ್ತಿರುವುದಾದರೂ ಏನು? ಹಾಲಿವುಡ್‌ನಲ್ಲಿ ಕಲಿತಿರುವುದನ್ನು ಕನ್ನಡಕ್ಕೆ ಇಳಿಸಬಲ್ಲ ಜಾಣ್ಮೆ ಅವರಲ್ಲಿದೆ. ಅಂಥಾ ಜಾಣರು ಸ್ಯಾಂಡಲ್‌ವುಡ್‌ಗೆ ಖಂಡಿತ ಬೇಕು. ಬಿ.ಸಿ.ಪಾಟೀಲರು ಇದನ್ನು ಮನಗಂಡು ತಮ್ಮ ಸೋದರನನ್ನು ಮತ್ತೆ ಬೆಂಗಳೂರಿಗೆ ಕರೆಸಲಿ. ಅಶೋಕ್‌ ಪಾಟೀಲರಿಂದ ಇನ್ನೊಂದು ಒಳ್ಳೆಯ ಸಿನಿಮಾ ತೆರೆ ಕಾಣಲಿ.

ಅಶೋಕ್‌ ಹೀರೋ ಆಗ್ತಾರಾ?
ಈ ಬಾರಿ ಬೆಂಗಳೂರಿಗೆ ಬರುವ ಅಶೋಕ್‌ ಪಾಟೀಲ್‌ ತಲೆಯಲ್ಲಿ ಚಿತ್ರವೊಂದನ್ನು ಹೊತ್ತೇ ತರುತ್ತಾರೆ. ಫಾರ್‌ ಎ ಚೇಂಜ್‌- ಈ ಸಲ ಅಶೋಕ್‌ ಚಿತ್ರವನ್ನು ನಿರ್ದೇಶಿಸುವುದಿಲ್ಲ , ನಟಿಸುತ್ತಾರೆ- ಎಂದು ಟ್ಯಾಬ್ಲಾಯಿಡ್‌ ಒಂದು ಬರೆದಿದೆ. ಅಶೋಕ್‌ ಪಾಟೀಲ್‌ ಹೀರೋ ಆಗುವ ಯೋಜನೆ ಬಿ.ಸಿ.ಪಾಟೀಲರ ಪತ್ನಿ ವನಜಾ ಅವರಿಗೆ ಅಸಹನೆ ಮೂಡಿಸಿದೆಯಂತೆ. ಈಗಾಗಲೇ ಹೀರೋ ಆಗಿರುವ ಅಣ್ಣ ಪಾಟೀಲರು ಕಳೆದದ್ದೇ ಸಾಕು ಅನ್ನುವುದು ಆಯಮ್ಮನ ಅಭಿಮತ. ಇದು ನಿಜಾನಾ ಪಾಟೀಲ್‌ ? ವಾರ್ತಾ ಸಂಚಯ

English summary
When Ashok Patil will come back to sandalwood?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada