»   » ನಾವಿರುವುದೆ ನಿಮಗಾಗಿ! ಚಿತ್ರೋದ್ಯಮಕ್ಕೆ ಸಿದ್ಧರಾಮಯ್ಯಅಭಯಹಸ್ತ !

ನಾವಿರುವುದೆ ನಿಮಗಾಗಿ! ಚಿತ್ರೋದ್ಯಮಕ್ಕೆ ಸಿದ್ಧರಾಮಯ್ಯಅಭಯಹಸ್ತ !

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಚಲನಚಿತ್ರರಂಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ ಕನ್ನಡ ಚಿತ್ರೋದ್ಯಮಕ್ಕೆ ಭರವಸೆ ನೀಡಿದ್ದಾರೆ.

ಚಿತ್ರೋದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಆ.9ರ ಸೋಮವಾರ ಬೃಹತ್‌ ಪ್ರತಿಭಟನಾ ಕಾರ್ಯಕ್ರಮವನ್ನು ನಿರ್ಮಾಪಕರ ಸಂಘ ಹಮ್ಮಿಕೊಂಡಿತ್ತು . ವರನಟ ಡಾ.ರಾಜ್‌ಕುಮಾರ್‌ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ- ಕನ್ನಡ ಚಿತ್ರೋದ್ಯಮದ ಪ್ರಗತಿಗೆ ರಾಜ್ಯ ಸರ್ಕಾರ ಬದ್ಧ ಎಂದರು.

ಚಿತ್ರೋದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಶೀಘ್ರದಲ್ಲೇ ಸಮಿತಿಯಾಂದನ್ನು ರಚಿಸಲಿದೆ. ಇದರಿಂದಾಗಿ ಚಿತ್ರರಂಗದ ಪ್ರಗತಿಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ. ಸರ್ಕಾರ ಹಾಗೂ ಉದ್ಯಮದ ಪ್ರತಿನಿಧಿಗಳು ಈ ಸಮಿತಿಯಲ್ಲಿರುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿದರು.

ಚಿತ್ರೋದ್ಯಮದ ಸಮಸ್ಯೆಗಳ ಕುರಿತ ಚರ್ಚೆಗೆ ಸರ್ಕಾರ ಮುಕ್ತ ಮನಸ್ಸಿನಿಂದಿದೆ ಎಂದ ಸಿದ್ಧರಾಮಯ್ಯ - ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ತಾವು ಖುದ್ದು ಮಾತುಕತೆ ನಡೆಸುವುದಾಗಿಯೂ ತಿಳಿಸಿದರು.

ಸಂಚಾರ ಅಸ್ತವ್ಯಸ್ತ : ಸರ್ಕಾರದ ಕಣ್ತೆರೆಸುವ ಚಿತ್ರೋದ್ಯಮದ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರಿಂದ ಕೆಂಪೇಗೌಡ ರಸ್ತೆ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ಸೋಮವಾರ ಬೆಳಗ್ಗೆ ಸಂಚಾರ ವ್ಯವಸ್ಥೆ ಕೆಲ ಕಾಲ ಹದಗೆಟ್ಟಿತು. ಸಾವಿರಾರು ಸಂಖ್ಯೆಯ ಗುಂಪು ಪುರಭವನದಿಂದ ಕೆಂಪೇಗೌಡ ವೃತ್ತದವರೆಗೆ ಮೆರವಣಿಗೆ ನಡೆಸಿತ್ತು .

ವರನಟ ರಾಜ್‌ಕುಮಾರ್‌, ಶಿವರಾಜ್‌, ರವಿಚಂದ್ರನ್‌, ಸುದೀಪ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌, ಜಗ್ಗೇಶ್‌, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ನಾಗಾಭರಣ, ಎಸ್‌.ನಾರಾಯಣ್‌, ಪಾರ್ವತಮ್ಮ ರಾಜ್‌ಕುಮಾರ್‌, ಜಯಂತಿ, ಅನು ಪ್ರಭಾಕರ್‌, ಪ್ರೇಮಾ, ರಮ್ಯಾ, ಸಿಂಧುಮೆನನ್‌, ರಾಮಕುಮಾರ್‌, ಮುಂತಾದ ನಾಯಕನಟರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ- ಮೆಚ್ಚಿನ ನಟನರನ್ನು ನೋಡಲು ಅಭಿಮಾನಿ ದೇವರುಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ಸಿದ್ಧ ಎಂದು ರಾಜ್‌ ಘೋಷಿಸಿದರು. ಕೆಲದಿನಗಳ ಹಿಂದಷ್ಟೇ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ರಾಜ್‌ ಅನಾರೋಗ್ಯದ ಕುರುಹೇ ಇಲ್ಲದಂತೆ ಲವಲವಿಕೆಯಿಂದಿದ್ದರು.

ಕನ್ನಡೇತರ ಚಿತ್ರಗಳ ಮೇಲಿನ ಮನರಂಜನಾ ತೆರಿಗೆಯನ್ನು ಶೇ.70ರಿಂದ 40ಕ್ಕೆ ಇಳಿಸಿರುವ ಸರ್ಕಾರದ ಕ್ರಮ ಸರಿಯಾದುದಲ್ಲ . ಮನರಂಜನಾ ತೆರಿಗೆಯನ್ನು ಶೇ.70ರಷ್ಟೇ ಉಳಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(ಪಿಟಿಐ)

English summary
Karnataka Government committed to the development of Kannada cinema industry and will do everything possible in this direction, says Siddaramaiah, Deputy Chief Minister

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada