»   » ಕವಿತಾ ಚಿತ್ರದಲ್ಲಿ ಶ್ರುತಿ, ವಿಜಯ್, ಸಚಿವ ಎಂ.ಪಿ.ಪ್ರಕಾಶ್!

ಕವಿತಾ ಚಿತ್ರದಲ್ಲಿ ಶ್ರುತಿ, ವಿಜಯ್, ಸಚಿವ ಎಂ.ಪಿ.ಪ್ರಕಾಶ್!

Posted By:
Subscribe to Filmibeat Kannada


ಮಗನಿಗೆ ಪತ್ರಿಕೆ ಮಾಡೋದಕ್ಕೆ ಬರೋದಿಲ್ಲ. ಅಪ್ಪನಿಗೆ ಸಿನಿಮಾ ಮಾಡೋದಕ್ಕೆ ಬರೋದಿಲ್ಲ.ಈ ಮಾತು ಲಂಕೇಶ್ ಮತ್ತು ಅವರ ಪುತ್ರ ಇಂದ್ರಜಿತ್ ಲಂಕೇಶ್ ಕುರಿತು ಹೇಳಿದರೆ, ಬಹುಮಂದಿ ವಿರೋಧಿಸುವುದಿಲ್ಲ ಅಂದುಕೊಳ್ಳೋಣ.

ಅಂದರೇ, ಲಂಕೇಶ್ ಪ್ರಯೋಗಗಳು ಚಿತ್ರರಂಗದಲ್ಲಿ ಫಲಿಸಲಿಲ್ಲ. ಇಂದ್ರಜಿತ್ ಪ್ರಯೋಗಗಳು ಪತ್ರಿಕೋದ್ಯಮದಲ್ಲಿ ಫಲಿಸಲಿಲ್ಲ. ಅಂದ ಹಾಗೇ, ಫಲಿಸುವುದರ ಅರ್ಥ ಇಲ್ಲಿ ಜನರನ್ನು ತಲುಪುವುದು ಎನ್ನುವಷ್ಟಕ್ಕೆ ಸೀಮಿತಗೊಳಿಸಿದ್ದೇವೆ! ಆದರೆ ಅವರ ಪುತ್ರಿ ಕವಿತಾ ಲಂಕೇಶ್, ಅಪ್ಪ ತಲುಪಲಾರದ ಎತ್ತರವನ್ನು ತಲುಪಿದ್ದಾರೆ. ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ.

ಬಿಂಬ, ದೇವೇರಿ, ಅಲೆಮಾರಿಯಂತಹ ಕಲಾತ್ಮಕ ಚಿತ್ರಗಳು, ಪ್ರೀತಿ ಪ್ರೇಮ ಪ್ರಣಯ ಮತ್ತು ತನನಂ ತನನಂ ರೀತಿಯ ವಾಣಿಜ್ಯ ಚಿತ್ರಗಳು ಆಯಾ ರಂಗದಲ್ಲಿ ಗೆದ್ದಿವೆ. ತನನಂ ತನನಂ ನಿರ್ಮಾಪಕರ ಜೇಬು ತುಂಬಿಸದಿದ್ದರೂ, ಕೈ ಕಚ್ಚಿಲ್ಲ ಎಂದು ಕವಿತಾ ಅಭಿಮಾನಿಗಳು ಹೇಳುತ್ತಾರೆ.

ಈಗ ಮತ್ತೆ ಕಲಾತ್ಮಕ ಚಿತ್ರಗಳತ್ತ ಕವಿತಾ ಗಮನ ಹರಿಸಿದ್ದಾರೆ. ಅವರು ಅವ್ವಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಅಪ್ಪ ಲಂಕೇಶ್ ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಮುಸ್ಸಂಜೆಯ ಕಥಾ ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು, ಕವಿತಾ ಲಂಕೇಶ್ ಚಿತ್ರಕತೆ ಬರೆದಿದ್ದಾರೆ. ಈ ಹಿಂದೆಯೇ ಲಂಕೇಶ್ ಮತ್ತು ಬಿ.ಚಂದ್ರೇಗೌಡ ಸಿದ್ಧಪಡಿಸಿರುವ ಸಂಭಾಷಣೆಯನ್ನು ಅವರು ಬಳಸಿಕೊಳ್ಳುತ್ತಿದ್ದಾರೆ.

ಸುರೇಶ್ ಅರಸ್ ಸಂಕಲನ, ಮಧು ಅಂಬತ್ ಛಾಯಾಗ್ರಹಣ ಚಿತ್ರಕ್ಕಿದೆ. ನಟಿ ಶ್ರುತಿ, ದುನಿಯಾ ಖ್ಯಾತಿಯ ವಿಜಯ್ ,ರಂಗಾಯಣ ರಘು,ಏಣಗಿ ನಟರಾಜ್, ಸುಧೀಂದ್ರ ಪ್ರಸಾದ್, ಅಶ್ವಥ್ ನೀನಾಸಂ ಮುಖ್ಯಪಾತ್ರದಲ್ಲಿದ್ದಾರೆ. ಗೃಹಸಚಿವ ಎಂ.ಪಿ.ಪ್ರಕಾಶ್, ಈ ಚಿತ್ರಕ್ಕಾಗಿ ಬಣ್ಣ ಹಚ್ಚಲು ಸಮ್ಮತಿಸಿದ್ದಾರೆ. ಸ್ಮಿತಾ ಚಿತ್ರದ ನಾಯಕಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada