ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ: ನಟ ದರ್ಶನ್ ಬಂಧನ

ಈ ಮಧ್ಯೆ, ಸಕಲೇಶಪುರದಲ್ಲಿ ನಡೆಯುತ್ತಿದ್ದ ದರ್ಶನ್ ತಾರಾಗಣದ 'ಚಿಂಗಾರಿ' ಸಿನಿಮಾ ಚಿತ್ರೀಕರಣವನ್ನು ರದ್ದುಪಡಿಸಲಾಗಿದೆ.
ಕನ್ನಡದ ಖ್ಯಾತ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಅವರು ತಮ್ಮ ಪತ್ನಿಗೆ ಚಪ್ಪಲಿಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಗಾಯಗೊಂಡಿರುವ ವಿಜಯಲಕ್ಷ್ಮಿಯನ್ನು ವಿಜಯನಗರದ ಗಾಯತ್ರಿ ನರ್ಸಿಂಗ್ ಹೋಂಗೆ ದಾಖಲಿಸಲಾಗಿದೆ.
ಏಳು ವರ್ಷದ ಸಂಸಾರ ನಡೆಸಿರುವ ದಂಪತಿ ಮಧ್ಯೆ ಕಳೆದ ಒಂದು ವರ್ಷದಿಂದ ವಿರಸ ನೆಲೆಸಿತ್ತು. ಇದಕ್ಕೆಲ್ಲ ಮೂಲ ಕಾರಣ ದರ್ಶನ್ ನಟಿ ನಿಖಿತಾ ಅವರೊಂದಿಗೆ ಅತಿ ಸ್ನೇಹ ಅತಿ ಸಲುಗೆ ಇಟ್ಟುಕೊಂಡಿರುವುದೇ ಆಗಿದೆ ಎಂದು ಗಾಂಧೀನಗರ ಹೇಳುತ್ತಿದೆ.
ದರ್ಶನ್ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಬಂದರು. ಆ ಸಮಯಕ್ಕೆ ರಾಜರಾಜೇಶ್ವರಿ ನಗರದಲ್ಲಿರುವ ಗಂಡನ ಮನೆಯಿಂದ ವಿಜಯನಗರದಲ್ಲಿರುವ ಸ್ನೇಹಿತೆ ವಿದ್ಯಾ ಮನೆಗೆ ವಿಜಯಲಕ್ಷ್ಮಿ ಬಂದಿದ್ದರು. ಆದರೆ ಅಲ್ಲಿಗೇ ತೆರಳಿದ ದರ್ಶನ್, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಕನ್ನಡ ಚಿತ್ರರಂಗ ಹಾಗು ದರ್ಶನ್ ಅಭಿಮಾನಿಗಳು ಮತ್ತು ಕರ್ನಾಟಕದ ಜನತೆಯನ್ನು ದಿಗ್ಭ್ರಮೆಗೆ ತಳ್ಳಿದ್ದು, ಮುಂದಿನ ಬೆಳವಣಿಗೆಗಳನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ವಿಜಯನಗರದಲ್ಲಿ ಕ್ಯಾಂಪ್ ಮಾಡಿರುವ ನಮ್ಮ ವರದಿಗಾರರು ಘಟನಾವಳಿಗಳನ್ನು ಕ್ಷಣಕ್ಷಣಕ್ಕೂ ನಿಮ್ಮ ಮುಂದಿಡಲಿದ್ದಾರೆ.


Click it and Unblock the Notifications











