»   » ಬಾಲಿವುಡ್‌ನಲ್ಲಿ ಹೊಸಗಾಳಿ !

ಬಾಲಿವುಡ್‌ನಲ್ಲಿ ಹೊಸಗಾಳಿ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಸಾಹಿತ್ಯಿಕ ಕೃತಿಗಳನ್ನು ತೆಗೆದುಕೊಂಡು ಅದಕ್ಕೊಂದಿಷ್ಟು ಮಸಾಲೆ ಸೇರಿಸಿ ಅಥವಾ ಕೃತಿಯಲ್ಲಿರುವ ಮಸಾಲೆ ಅಂಶಕ್ಕೆ ಇನ್ನಷ್ಟು ಖಾರ ಸೇರಿಸಿ ಚಿತ್ರ ನಿರ್ಮಿಸುವ ಯೋಚನೆಗಳು ಬಾಲಿವುಡ್‌ ನಿರ್ದೇಶಕರ ತಲೆಯಲ್ಲಿ ಓಡಾಡುತ್ತಿವೆ. ನಿರ್ಮಾಪಕರು ಕೂಡ ಕಲಾತ್ಮಕ ಚಿತ್ರಗಳ ಕುರಿತು ಯೋಚಿಸುತ್ತಿರುವುದು ಸಮಾಧಾನದ ಸಂಗತಿ.

ಸದ್ಯಕ್ಕೆ ಬಾಲಿವುಡ್‌ನಲ್ಲಿ ಮೂರು ಚಿತ್ರಗಳು ಚಿತ್ರ ರಸಿಕರ ಕುತೂಹಲ ಕೆರಳಿಸಿವೆ. ಋತುಪರ್ಣ ಘೋಷ್‌ ಅವರ ಚೋಕೇರ್‌ ಬಾಲಿ, ಗುರಿಂದರ್‌ ಛಡ್ಡಾ ರ ಬ್ರೆೃಡ್‌ ಆ್ಯಂಡ್‌ ಪ್ರೆಜುಡಿಸ್‌, ಚಂದ್ರಪ್ರಕಾಶ್‌ ದ್ವಿವೇದಿಯವರ ಪಿಂಜಾರ. ಬಿಡುಗಡೆಗೆ ಸಿದ್ಧವಾಗಿರುವ ಈ ಮೂರೂ ಚಿತ್ರಗಳೂ ಕಾದಂಬರಿ ಆಧಾರಿತ ಎನ್ನುವುದು ವಿಶೇಷ.

ರವೀಂದ್ರನಾಥ ಠಾಗೋರ್‌ ಅವರ ಚೋಕೇರ್‌ ಬಾಲಿ ಎಂಬ ಬೆಂಗಾಲಿ ಕಾದಂಬರಿಯಿಂದ ಕಥೆಯ ಎಳೆಯನ್ನು ತೆಗೆದುಕೊಂಡಿದ್ದಾರೆ. ಜೇನ್‌ ಆಸ್ಟನ್‌ರ ಪ್ರೆೃಡ್‌ ಆ್ಯಂಡ್‌ ಪ್ರೆಜುಡಿಸ್‌ ಕಾದಂಬರಿಯಿಂದ ಬ್ರೆೃಡ್‌ ಆ್ಯಂಡ್‌ ಪ್ರೆಜುಡಿಸ್‌ ಸಿದ್ಧವಾಗಿದೆ. ಕಾದಂಬರಿಯನ್ನು ಆಧರಿಸಿಕೊಂಡು, ಅದನ್ನು ವಸಿ ತಿರುಚಿ ಆಕರ್ಷಕವಾಗಿಸುವ ಟ್ರೆಂಡು ಮೊದಲು ಶುರುವಾಗಿದ್ದು ಹಾಲಿವುಡ್‌ನಲ್ಲಿ . ನಂತರ ಈ ಹವಾ ಬಾಲಿವುಡ್‌ಗೂ ಬಂತು.

ಚೋಕೇರ್‌ ಬಾಲಿ ಕಥೆ 20ನೇ ಶತಮಾನದ ಆದಿಭಾಗದಲ್ಲಿ ನಡೆಯುವಂತಹುದು. ಐಶ್ವರ್ಯಾ ನಟಿಸುತ್ತಿರುವುದು ಈ ಚಿತ್ರದ ಇನ್ನೊಂದು ಆಕರ್ಷಣೆ. ಬಂಗಾಳೀ ಸಮಾಜದಲ್ಲಿನ ವಿಧವಾ ವಿವಾಹ ಹಾಗೂ ಸತಿಯ ಬಗ್ಗೆ ಕಥೆ ಸಾಗುತ್ತದೆ. ಈಗಾಗಲೇ ಲ್ಯುಕಾರ್ನೋ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡು ಸುದ್ದಿ ಮಾಡಿದೆ.

ಅಮೃತಾ ಪ್ರತಿಮಾ ಬರೆದಿರುವ, ಪಾಕಿಸ್ತಾನ ವಿಭಜನೆಯ ನಂತರ ದುರಂತ ಕತೆ ಪಿಂಜಾರಾದದ್ದು. ಊರ್ಮಿಳಾ ಮಾತೋಂಡ್ಕರ್‌ ಮತ್ತು ಮನೋಜ್‌ ವಾಜಪೇಯಿ ನಟಿಸಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. ಗಲಾಟೆ, ದೊಂಬಿ, ಕೊಲೆ ಸುಲಿಗೆ, ಕೋಮುವಿವಾದಗಳ ನಡುವೆ ತೆವಳುವ ಈ ಕತೆ ಕುತೂಹಲಕಾರಿಯಾಗಿದೆ. ಅದಕ್ಕೆ ಪೂರಕವಾಗಿ- ತನ್ನ ಜೀವನದಲ್ಲೇ ಇಂಥ ಪಾತ್ರವೊಂದನ್ನು ನಾನು ಮಾಡಿಲ್ಲ. ಪಿಂಜಾರಾದಲ್ಲಿ ನನ್ನ ಪಾತ್ರ ಅತ್ಯಂತ ವಿಭಿನ್ನವಾಗಿದೆ. ಕಾದಂಬರಿಯಷ್ಟೇ ಶಾರ್ಪ್‌ ಆಗಿದೆ ಈ ಚಿತ್ರ. ಚಿತ್ರದ ಬಗ್ಗೆ ನಂಗೆ ತುಂಬಾ ಅಭಿಮಾನವಿದೆ ಎಂದು ಮನೋಜ್‌ ವಾಜಪೇಯಿ ಹೇಳಿಕೊಂಡಿದ್ದಾರೆ.

ಮಾರ್ಟಿನ್‌ ಹೆಂಡರ್‌ಸನ್‌ ಮತ್ತು ಐಶ್ವರ್ಯಾ ರೈ ನಟಿಸಿರುವ ಬ್ರೆೃಡ್‌ ಆ್ಯಂಡ್‌ ಪ್ರೆಜುಡಿಸ್‌ ಮೂಲ ಕಥೆಗಿಂತ ತುಸು ಭಿನ್ನವಾಗಿದೆ.

ಈ ಚಿತ್ರಗಳಲ್ಲಿ ಐಶ್ವರ್ಯಾ ರೈ ಮಿಂಚುತ್ತಿರುವುದು ಇನ್ನೊಂದು ವಿಶೇಷ. ಅತ್ತ ಚೋಕೇರ್‌ ಬಾಲಿಯಲ್ಲಿ ಬಂಗಾಲಿ ಹುಡುಗಿಯಾಗಿ ಇತ್ತ ಬ್ರೆೃಡ್‌ ಆ್ಯಂಡ್‌ ಪ್ರೆಜುಡಿಸ್‌ನಲ್ಲಿ ಮದುಮಗಳು ಸುಂದರಿಯಾಗಿ ಐಶ್ವರ್ಯಾ ಅಭಿಮಾನಿಗಳ ಎದೆಗೆ ಲಗ್ಗೆ ಹಾಕಲಿದ್ದಾಳೆ. ನಂತರದ ಸರದಿಯಷ್ಟೇ ಊರ್ಮಿಳಾಳದ್ದು. ಬಾಲಿವುಡ್‌ನಲ್ಲಿ ಇದೊಂದು ನಮೂನೆಯ ಕಾಂಪಿಟಶನ್ನು. ಚಿತ್ರಗಳೆರಡೂ ಹಿಟ್‌ ಆದರೆ ಐಶೂಗೆ ಶುಕ್ರದೆಸೆ....! ಬಾಲಿವುಡ್‌ನಲ್ಲೊಂದಿಷ್ಟು ದಿನ ಹೊಸ ಕಳೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada