»   » ಬೆಳ್ಳಿತೆರೆ ತಾರೆಯರು ದೀಪಾವಳಿ ದಿನ ಏನ್ ಮಾಡ್ತಾರೆ?

ಬೆಳ್ಳಿತೆರೆ ತಾರೆಯರು ದೀಪಾವಳಿ ದಿನ ಏನ್ ಮಾಡ್ತಾರೆ?

Posted By:
Subscribe to Filmibeat Kannada

ಈ ವಾರ ದೀಪಾವಳಿ. ಆದರೆ ಯಾವುದೇ ಚಿತ್ರಗಳು ತೆರೆಕಾಣುತ್ತಿಲ್ಲ. ವಿಕಲಚೇತನ ನಟ ಧ್ರುವ ಅಭಿನಯದ 'ಸ್ನೇಹಾಂಜಲಿ' ಮಾತ್ರ ಶುಕ್ರವಾರ(ನ.09) ಬಿಡುಗಡೆಯಾಗುತ್ತಿದೆ. ವಿಷ್ಣು ಮತ್ತು ಸುಹಾಸಿನ ಅಭಿನಯದ'ಈ ಬಂಧನ' ಬಿಡುಗಡೆ ಅನಿವಾರ್ಯ ಕಾರಣದಿಂದ ಮುಂದೂಡಲ್ಪಟ್ಟಿದೆ. ಯಾವುದೇ ಭರವಸೆಯ ಹೊಸ ಚಿತ್ರಗಳು ಘೋಷಣೆಯಾಗಿಲ್ಲ. ಆ ವಿಷಯ ಒಂದು ಕಡೆ ಇರಲಿ. ತಾರೆಯರ ದೀಪಾವಳಿ ಹೇಗಿರುತ್ತದೆ ಎನ್ನುವುದನ್ನು ಅವರ ಮಾತಲ್ಲಿಯೇ ಕೇಳಿ..

ದೀಪಾವಳಿ ಎಂದಾಕ್ಷಣ ಕೋಲ್ಕತಾದ ಕಾಳಿ ಪೂಜೆ ನೆನಪಾಗುತ್ತದೆ. ಅಲ್ಲಿ ಎಲ್ಲರೂ ಸಾರ್ವಜನಿಕ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮದುವೆಯಾದ ನಂತರ ಒಮ್ಮೆಯೂ ತವರುಮನೆಯಲ್ಲಿ ದೀಪಾವಳಿ ಆಚರಿಸಿಲ್ಲ. ಇಲ್ಲಿ ಅತ್ತೆ-ಮಾವನ ಸಲಹೆಯಂತೆ ಮನೆಯ ಸುತ್ತಮುತ್ತಲೂ ದೀಪಗಳಿಂದ ಅಲಂಕರಿಸಿ ಶೃಂಗರಿಸುತ್ತೇನೆ. ಮುದ್ದು ನಾಯಿ ಮರಿಗಳು ಮನೆಯಲ್ಲಿ ಇರುವುದರಿಂದ ಆದಷ್ಟೂ ಶಬ್ದವಿಲ್ಲದ ಪಟಾಕಿ ಹೊಡೆಯುತ್ತೇವೆ. ಮಗ ಆಯುಷ್, ಮಗಳು ಐಶ್ವರ್ಯಾಗೆ ಪಟಾಕಿ ಹೊಡೆಯುವುದನ್ನು ಹೇಳಿಕೊಡುತ್ತಿದ್ದೇವೆ.

ಉಪೇಂದ್ರ ಪತ್ನಿ ಮತ್ತು ನಟಿ ಪ್ರಿಯಾಂಕ

***

ದೀಪಾವಳಿ ಎಂದರೆ ಶಾಪಿಂಗ್. ಮನೆಯವರೆಲ್ಲ ಕಮರ್ಷಿಯಲ್ ರಸ್ತೆ ಕಡೆಗೆ ಧಾವಿಸುತ್ತೇವೆ. ೩ ದಿನ ಎಡಬಿಡದೆ ನೆಂಟರ ಆಗಮನ. ಸಾಂಪ್ರದಾಯಿಕ ಉಡುಪು ಧರಿಸಿ ಲಕ್ಷ್ಮಿ ಪೂಜೆ ಮಾಡುತ್ತೇವೆ. ಕಳೆದ ಬಾರಿ ಶೂಟಿಂಗ್‌ಗಾಗಿ ಲಂಡನ್‌ನಲ್ಲಿ ಬ್ಯುಸಿಯಾಗಿದ್ದೆ. ಈ ಬಾರಿ ಮನೆಯಲ್ಲೆ ಎಲ್ಲರೊಂದಿಗೆ ಆಚರಿಸುತ್ತಿದ್ದೇನೆ.

ಸಜನಿ ಹುಡುಗಿ ಶರ್ಮಿಳಾ ಮಾಂಡ್ರೆ

***

ಚಿಕ್ಕವನಿದ್ದಾಗ ಮನೆಯಲ್ಲಿ ಹಣಕಾಸು ಸಮಸ್ಯೆ ಇತ್ತು. ಪಟಾಕಿ ಹೊಡೆಯಲು ದುಡ್ಡಿರಲಿಲ್ಲ. ಅಕ್ಕ-ಪಕ್ಕದ ಮನೆಯವರು ಹಚ್ಚಿ, ಸಿಡಿಯದ ಪಟಾಕಿಗಳ ಪುಡಿ ಸೇರಿಸಿ ಬೆಂಕಿ ಹಚ್ಚಿ ಖುಷಿಪಡುತ್ತಿದ್ದೆವು. ಆಗ ಹಣ ಇರಲಿಲ್ಲ, ಸಂಭ್ರಮ ಇತ್ತು. ಈಗ ಹಣ ಇದೆ, ಆದರೆ ನನ್ನ ಬಾಲ್ಯ ಇಲ್ಲ. ಹಾಗಾಗಿ ಇಂದು ನಮ್ಮ ಸುತ್ತಮುತ್ತಲ ಮಕ್ಕಳೆಲ್ಲರಿಗೂ ಪಟಾಕಿ ವಿತರಿಸಿ ಅವರ ಮಧ್ಯೆ ನಾವು ಖುಷಿಪಡುತ್ತೇವೆ. ನಮ್ಮ ಮಕ್ಕಳು ಪಟಾಕಿ ಹಚ್ಚುವಾಗ ಆ ಕಷ್ಟದ ದಿನಗಳನ್ನು ನೆನಸಿಕೊಂಡರೆ ಕಣ್ಣಂಚಲಿ ನೀರು ಬರುತ್ತದೆ.

'ನೆನಪಿರಲಿ'ನಟ ಪ್ರೇಮ್

***

ಹಬ್ಬದ ದಿನ ಎಣ್ಣೆ ಸ್ನಾನ. ಭರ್ಜರಿ ಊಟ. ಚಿಕ್ಕವನಾಗಿದ್ದಾಗ ಅಪ್ಪ-ಅಮ್ಮ ತಂದು ಕೊಡುವ ಪಟಾಕಿ ಸಾಲುತ್ತಿರಲಿಲ್ಲ. ಸೇಟು ಮನೆ ಮುಂದೆ ಹೊಡೆದ ಪಟಾಕಿಯಲ್ಲಿ ಅಳಿದುಳಿದದ್ದನ್ನು ಆಯ್ದು ತಂದು ಮತ್ತೊಮ್ಮೆ ಹಚ್ಚುತ್ತಿದ್ದೆವು. ಅಂದು ಕಷ್ಟದ ದಿನಗಳು ಹೆಚ್ಚಾಗಿದ್ದವು. ಈ ಮಧ್ಯೆಯೇ ಸಡಗರದ ಹಬ್ಬ ನಮ್ಮೆಲ್ಲರನ್ನು ಒಟ್ಟುಗೂಡಿಸುತ್ತಿತ್ತು. ಇಂದು ನನ್ನ ಸುತ್ತ ವಿವಾದ ಭುಗಿಲೆದ್ದಿದೆ. ಒಳ್ಳೆಯತನ ಬಿಟ್ಟುಕೊಡದೆ ಹೋರಾಟ ನಡೆಸಲು ಅಣಿಯಾದ ನನಗೆ ಎದುರಾಗಿವೆ. ಈ ದೀಪಾವಳಿ ಸಂಭ್ರಮ ಹೊತ್ತು ತರುವ ಬದಲು, ಮಾನಸಿಕ ಹಿಂಸೆ ತಂದಿದೆ. ಅಭಿಮಾನಿಗಳ ಪ್ರೀತಿ-ಆದರಗಳು ನನ್ನನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕನ್ನಡಿಗರೆಲ್ಲರಿಗೆ ದೀಪಾವಳಿಯ ಮನಃಪೂರ್ವಕ ಶುಭಾಶಯ. ಎಲ್ಲರ ಬೆಂಬಲ ನನಗೆ ಬೇಕಾಗಿದೆ.

ದುನಿಯಾ ವಿಜಯ್

(ಸ್ನೇಹ ಸೇತು : ವಿಜಯಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada