»   » ದ್ವಿಪಾತ್ರದಲ್ಲಿ ಕಿರುತೆರೆಗೆ ವಿಜಯಲಕ್ಷ್ಮಿ

ದ್ವಿಪಾತ್ರದಲ್ಲಿ ಕಿರುತೆರೆಗೆ ವಿಜಯಲಕ್ಷ್ಮಿ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಗಾಂಚಾಲಿ ಎಂಬ ಆರೋಪಕ್ಕೆ ಮೊದಲಿಂದಲೂ ಗುರಿಯಾಗುತ್ತಾ, ಅತ್ತಿಂದಿದ್ದ ಓಡಾಡಿಕೊಂಡು ಬಹು ಭಾಷಾ ಚಿತ್ರಗಳಲ್ಲಿ ಒಂದು ಕೈ ನೋಡಿ ಬಂದಿರುವ ಚಿನಕುರುಳಿ ನಟಿ ವಿಜಯಲಕ್ಷ್ಮಿ ಕಿರುತೆರೆಯಲ್ಲಿ ತಮ್ಮ ಇನ್ನಿಂಗ್ಸ್‌ ಶುರುಮಾಡುತ್ತಿದ್ದಾರೆ. ಅವರಿಗೆ ಇಲ್ಲೂ ಮೊದಲ ಅವಕಾಶ ಕೊಡುತ್ತಿರುವವರು ಕನ್ನಡದವರೇ.

ನಾಗಾಭರಣ ನಿರ್ದೇಶನದಲ್ಲಿ ನಟನೆಯನ್ನು ತಿದ್ದಿ ತೀಡಿಕೊಂಡು, ಚೊಚ್ಚಲ ಚಿತ್ರ ‘ನಾಗಮಂಡಲ’ ದ ಮೂಲಕ ಸಿನಿಮಾ ಮಂದಿಯ ಗಮನ ಸೆಳೆದಿದ್ದ ವಿಜಯಲಕ್ಷ್ಮಿ ಮುಂದೆ ಎಲ್ಲೂ ನೆಲೆ ನಿಲ್ಲಲಿಲ್ಲ. ಆಕೆ 33 ಚಿತ್ರಗಳಲ್ಲಿ ನಟಿಸಿದ್ದು ಅನೇಕರಿಗೇ ಲೆಕ್ಕಕ್ಕೇ ಸಿಗಲಿಲ್ಲ. ಇವತ್ತಿಗೂ ಆಕೆ ಪ್ರಾಮಾಣಿಕವಾಗಿ ಒಂದು ಸಂಗತಿಯನ್ನು ಒಪ್ಪಿಕೊಳ್ಳುತ್ತಾರೆ- ‘ನಾಗಮಂಡಲ’ ಹೊರತು ಪಡಿಸಿದರೆ ಮಿಕ್ಕೆಲ್ಲಾ ಚಿತ್ರದ ತಮ್ಮ ಪಾತ್ರಗಳು ಬುರ್ನಾಸು.

ಬಿಡುವಾಗಿದ್ದ ವಿಜಯಲಕ್ಷ್ಮಿಯನ್ನು ಸದ್ಯಕ್ಕೆ ಬ್ಯುಸಿ ಮಾಡಲು ಹೊರಟಿರುವುದು ಕಿರುತೆರೆ ಧಾರಾವಾಹಿ ನಿರ್ಮಾಪಕ ಶೂರ ಗುರುದತ್‌ ಹಾಗೂ ಆತನ ಗೆಳೆಯ ರಾಜ್‌ಕುಮಾರ್‌ (ಅಣ್ಣಾವ್ರಲ್ಲ). ವಿಜಯಲಕ್ಷ್ಮಿ ನಟಿಸುತ್ತಿರುವ ಧಾರಾವಾಹಿ ಹೆಸರು ‘ಸಾವಿತ್ರಿ’. ಕನಿಷ್ಠ 300 ಕಂತು ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ವಿಜಯಲಕ್ಷ್ಮಿಗೆ ದ್ವಿಪಾತ್ರ. ಇದು ಕಿರುತೆರೆಯ ಹೊಸ ವಿಕ್ರಮ ಅಂತ ಗುರುದತ್‌ ಎದೆ ತಟ್ಟಿಕೊಂಡು ಹೇಳುತ್ತಾರೆ. ಇಳವರಸನ ಕಥೆ ಆಧರಿಸಿದ ‘ಸಾವಿತ್ರಿ’ಯ ಚಿತ್ರೀಕರಣ ಬೆಂಗಳೂರು ಹಾಗೂ ಸಕಲೇಶಪುರದಲ್ಲಿ ನಡೆಯಲಿದೆ. ಅಂದಹಾಗೆ, ಡಿಸೆಂಬರ್‌ 22ರಿಂದ ಈ ಧಾರಾವಾಹಿ ಉದಯ ಟೀವಿಯಲ್ಲಿ ಪ್ರಸಾರವಾಗಲಿದೆ.

ಅದೆಲ್ಲ ಸರಿ, ಇಷ್ಟು ಚಿಕ್ಕ ವಯಸ್ಸಿಗೇ ನೀವು ಕಿರುತೆರೆಗೆ ಬಂದಿರಲ್ಲ ಅಂದರೆ, ‘ಕರಿಷ್ಮಾ ಕಪೂರ್‌ ಬರ್ಲಿಲ್ವ, ರವೀನಾ ಬರ್ಲಿಲ್ವ, ನಾನೇನು ಮಹಾ’ ಅಂತ ವಿಜಯಲಕ್ಷ್ಮಿ ಹುಬ್ಬುಗಂಟಿಕ್ಕಿದರು. ಸೆಟ್ಟಿನಲ್ಲಿ ಕೊಂಚ ದೂರ ನಿಂತಿದ್ದ ಯಾರೋ ಇವರು ಕೋಪ ಮಾಡಿಕೊಂಡಾಗಲೂ ಚೆನ್ನಾಗಿ ಕಾಣಿಸುತ್ತಾರೆ ಅಂದದ್ದಕ್ಕೆ ವಿಜಯಲಕ್ಷ್ಮಿ ನಗಲಿಲ್ಲ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada