For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ

  By Staff
  |

  ಬೆಂಗಳೂರು, ಸೆ.24:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರಿಗೆ ಹಾಗೂ 2007ರಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರಗಳ, ನಿರ್ಮಾಪಕರ, ನಿರ್ದೇಶಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿತು. ಅಭಿಮಾನಿ ಸಾಗರದ ನಡುವೆ ತಾರೆಗಳು ಬೆಳಗ್ಗೆ 10.30ಕ್ಕೆ ಸರಿಯಾಗಿ ಬಸವೇಶ್ವರ ನಗರದ ಅಭಿಮಾನಿ ಸಭಾಂಗಣದಲ್ಲಿ ಸಂಗಮವಾಗಿದ್ದರು.

  ಈ ಅಪರೂಪದ ಕಲರ್ ಫುಲ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಯಿತು. 70-80ರ ದಶಕದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಜಯಂತಿ, ಜಯಮಾಲ, ಭಾರತಿ ಸೇರಿದಂತೆ ಹಲವಾರು ಕಲಾವಿದರು ಕಾರ್ಯಕ್ರಮದ ಹೈಲೈಟ್ ಆಗಿದ್ದರು.

  ಡಾ.ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ
  ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಕನ್ನಡ ಭಾಷೆ, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿರುವ ಚಿತ್ರರಂಗ ಶ್ರೇಯೋಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ ಎಂದರು. ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಎಲ್ಲ ಕಲಾವಿದರಿಗೆ ನೆರವು ನೀಡಲು ಸಿದ್ಧವಿದೆ ಎಂದರು. ಚಿತ್ರರಂಗದ ಕಾರ್ಮಿಕ ವರ್ಗ ಕಷ್ಟಪಟ್ಟು ದುಡಿದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ವಾಣಿಜ್ಯ ಮಂಡಳಿ ಭವಿಷ್ಯ ನಿಧಿ ಸ್ಥಾಪಿಸಬೇಕು. ಸರ್ಕಾರ ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡಲಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭರವಸೆ ನೀಡಿದರು. ಶೀಘ್ರದಲ್ಲೇ ಡಾ.ರಾಜ್ ಕುಮಾರ್ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

  ಹಿರಿಯ ಕಲಾವಿದೆ ಬಿ.ಸರೋಜಾದೇವಿ ಮಾತನಾಡುತ್ತಾ, ಕಲಾವಿದರೆಲ್ಲಾ ಒಗ್ಗಟ್ಟಾಗಬೇಕು. ಒಡಕುಗಳನ್ನು ಬಿಟ್ಟು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಡಾ.ರಾಜ್ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಾಪಕಿ ಪಾರ್ವತಮ್ಮ ಮಾತನಾಡುತ್ತಾ, ಚಿತ್ರರಂಗದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ವಾಣಿಜ್ಯ ಮಂಡಳಿ ಉತ್ತಮ ಕೆಲಸ ಮಾಡಿದೆ ಎಂದು ಕೊಂಡಾಡಿದರು. ಈ ಕಾರ್ಯಕ್ರಮದ ಸಂಪ್ರದಾಯ ಮುಂದೆಯೂ ನಡೆಯಬೇಕು ಎಂದು ಸಲಹೆ ನೀಡಿದರು.

  ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ತಾರೆ ಡಾ.ಬಿ.ಸರೋಜಾದೇವಿ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಶ್ರೀನಾಥ್, ಹಿರಿಯ ಚಿತ್ರ ಕಲಾವಿದ ಡಾ.ಕೆ.ಎಸ್.ಅಶ್ವಥ್, ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟಿ ಉಮಾಶ್ರೀ, ಮಧು ಬಂಗಾರಪ್ಪ, ಟಿ.ಎಸ್.ನಾಗಾಭರಣ, ಶೈಲಜಾ ಶ್ರೀಕಾಂತ್, ಬಿ.ಎಸ್.ಲಿಂಗದೇವರು, ಧನರಾಜ್, 'ಕೋಟಿ ಚನ್ನಯ್ಯ' ಚಿತ್ರದ ನಿರ್ದೇಶಕ ಆನಂದ್ ಪಿ ರಾಜು ಅವರನ್ನು ಅಭಿನಂದಿಸಲಾಯಿತು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X