ರಾಕಿಂಗ್ ಸ್ಟಾರ್ ಯಶ್ ಸುತ್ತ ವಿವಾದಗಳ ಮಹಾಪೂರ
ರಾಕಿಂಗ್ ಸ್ಟಾರ್ ಯಶ್ ಮೇಲೆ ದಿನದಿನಕ್ಕೂ ಆರೋಪಗಳ ಸುರಿಮಳೆಯಾಗುತ್ತಿದೆ. "ರೆಬಲ್ ಸ್ಟಾರ್ ಅಂಬರೀಷ್ ಅವರಿಗಿಂತ ನಾನೇ ಚೆನ್ನಾಗಿ ನಟಿಸೋದಿಲ್ವೇ? ಪವರ್ ಸ್ಟಾರ್ ಪುನೀತ್ ಗಿಂತ ನಾನೇ ಸೂಪರ್ ಆಗಿ ಡಾನ್ಸ್ ಮಾಡೋದಿಲ್ವೇ? ದರ್ಶನ್ ಗಿಂತ ನಾನೇ ಚೆನ್ನಾಗಿ ಆಕ್ಷನ್ ಮಾಡೋದಿಲ್ವಾ?" ಹೀಗಂತ ಯಶ್ ಪ್ರಶ್ನೆ ಕೇಳುತ್ತಾರೆ ಎಂಬುದು ಅವರ ಸುತ್ತ ಸುತ್ತುತ್ತಿರುವ ವಿವಾದ.
ಆದರೆ, "ಹಾಗಂತ ನಾನು ಹೇಳಿಯೇ ಇಲ್ಲ. ಅವೆಲ್ಲಾ ಕಟ್ಟುಕಥೆ. ಹೀಗೆಲ್ಲಾ ಹೇಳಲು ನಾನು ಮೂರ್ಖನಾಗಿರಬೇಕು, ಇಲ್ಲವೇ ಹುಚ್ಚುಹಿಡಿದಿರಬೇಕು. ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳಲು ಇಲ್ಲಿ ಬಂದಿದ್ದೇನೆ, ಯಾರೊಡನೆಯೂ ಹೋಲಿಸಿಕೊಂಡು ಕಾಲುಕೆರೆದುಕೋಳ್ಳುವುದಕ್ಕಲ್ಲ. ನಾನು ನನ್ನ ಪಾಡಿಗೆ ನಟಿಸುತ್ತಾ ಬಂದದ್ದನ್ನು ಬಂದಂತೆ ಸ್ವೀಕರಿಸಿ ನಡೆಯುತ್ತಿದ್ದೇನೆ" ಎಂದು ಸಮಜಾಯಿಶಿ ನೀಡುತ್ತಾರೆ ಯಶ್.
ಲಕ್ಕೀ ಚಿತ್ರದ ನಂತರ 'ಯಶ್' ವೃತ್ತಿಯ ಗ್ರಾಫ್ ಸಾಕಷ್ಟು ಏರುತ್ತಿದೆ. ಜೊತೆಗೆ ವಿವಾದವೂ. ಇದೀಗ ಯೋಗರಾಜ್ ಭಟ್ಟರ 'ಡ್ರಾಮಾ' ಚಿತ್ರದಲ್ಲಿ ನಟಿಸಲಿರುವ ಯಶ್, ನಂತರ ನಾಗಶೇಖರ್ ನಿರ್ದೆಶನದ 'ಮೈನಾ' ಚಿತ್ರದಲ್ಲೂ ನಟಿಸಲಿದ್ದಾರೆ. ಈ ಮಧ್ಯೆ ನಿರ್ದೆಶಕರಿಗೆ ನಿಲುಕದ ನಟ ಎಂಬ ಅವರ ಮೇಲಿನ ಆರೋಪವೂ, ಅದೆಲ್ಲಾ ಸುಳ್ಳು, ನನ್ನ ಏಳಿಗೆಯನ್ನು ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಅವರ ಪ್ರತ್ಯಾರೋಪಗಳೂ ನಡೆದಿವೆ. ಯಾವುದನ್ನು ನಂಬಬೇಕೋ, ಯಾವುದನ್ನು ಬಿಡಬೇಕೋ..! (ಒನ್ ಇಂಡಿಯಾ ಕನ್ನಡ)


Click it and Unblock the Notifications











