ಗೀತಪ್ರಿಯ ಚಿಕಿತ್ಸೆಗೆ ಬಿಬಿಎಂಪಿ ರು.1 ಲಕ್ಷ ಚೆಕ್
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ಗೀತಸಾಹಿತಿ ಗೀತಪ್ರಿಯ (81) ಅವರ ಚಿಕಿತ್ಸೆಗೆ ಎಲ್ಲಡೆಯಿಂದಲೂ ಧನಸಹಾಯ ಹರಿದುಬರುತ್ತಿದೆ. ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರು.1.50 ಲಕ್ಷ ಧನ ಸಹಾಯ ನೀಡಲಾಗಿದೆ. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಗೀತಪ್ರಿಯ ಚಿಕಿತ್ಸೆಗೆ ರು.1 ಲಕ್ಷ ಧನ ಸಹಾಯ ನೀಡಿದೆ.
ಬಿಬಿಎಂಪಿಯ ಉಪ ಮೇಯರ್ ಎಸ್ ಹರೀಶ್ ಅವರು ಒಂದು ಲಕ್ಷ ರುಪಾಯಿಗಳ ಚೆಕ್ ಅನ್ನು ಗೀತಪ್ರಿಯ ದಂಪತಿಗೆ ಹಸ್ತಾಂತರಿಸಿದರು. ಮಹಾಲಕ್ಷ್ಮಿ ಬಡಾವಣೆಯ ಗೀತಪ್ರಿಯ ನಿವಾಸಕ್ಕೆ ಭೇಟಿ ನೀಡಿ ಚೆಕ್ ವಿತರಿಸಲಾಯಿತು. ಗೀತಪ್ರಿಯ ಅವರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಪರೇಷನ್ ಕಾರಣದಿಂದಾಗಿ ಮಾತಾಡಲು ಬಾಯಿ ತೆಗೆದರೂ ಮಾತೇ ಹೊರಡದಂತಹ ಪರಿಸ್ಥಿತಿ ಅವರದು.
ವರನಟ ಡಾ.ರಾಜ್‌ಕುಮಾರ್ ಅವರ 'ಮಣ್ಣಿನ ಮಗ' ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ಗೀತಪ್ರಿಯ ಅವರು ಕೊಟ್ಟಿದ್ದಾರೆ. ಅವರ ಸಾಮಾಜಿಕ ಕಳಕಳಿ ಸ್ಮರಣಾರ್ಹ ಎಂದಿರುವ ಹರೀಶ್, ಕನ್ನಡ ಚಿತ್ರೋದ್ಯಮವೂ ಅವರ ಚಿಕಿತ್ಸೆಗೆ ನೆರವಾಗಲಿ ಎಂದಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











