»   » ಹಿರಿಯ ನಿರ್ದೇಶಕ ರಾಜ್ ಕಿಶೋರ್ ನಿಧನ

ಹಿರಿಯ ನಿರ್ದೇಶಕ ರಾಜ್ ಕಿಶೋರ್ ನಿಧನ

Subscribe to Filmibeat Kannada

ಕನ್ನಡ ಚಿತ್ರರಂಗ ಹಿರಿಯ ನಿರ್ದೇಶಕ ರಾಜ್ ಕಿಶೋರ್(53) ಹೃದಯಾಘಾತದಿಂದ ಮಹಾರಾಷ್ಟ್ರದ ಶಿರಡಿಯಲ್ಲಿ ಬುಧವಾರ ನಿಧನರಾದರು. ರಾಜ್ ಕಿಶೋರ್ ಅವರು ಮೂರು ದಶಕಗಳಿಗೂ ಅಧಿಕ ಕಾಲ ಕನ್ನಡ ಚಿತ್ರರಂಗದೊಂದಿಗೆ ಒಡನಾಟ ಹೊಂದಿದ್ದರು. ಅವರಿಗೆ ಪತ್ನಿ ಮೂವರು ಪುತ್ರಿಯರಿದ್ದಾರೆ. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಕಲ್ಯಾಣ ನಗರದ ಅವರ ಮನೆಯಲ್ಲಿ ಇಡಲಾಗಿದೆ. ಗುರುವಾರ ಸಂಜೆಗೆ ಅಂತ್ಯ ಕ್ರಿಯೆಯನ್ನು ನೆರೆವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ರಾಜ್ ಕಿಶೋರ್ 20ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಭಾಕರ್, ಜಗ್ಗೇಶ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವಾರು ನಟರ ಚಿತ್ರಗಳನ್ನು ನಿರ್ದೇಶಿಸಿದ್ದರು. ರಾಜೇಂದ್ರಸಿಂಗ್ ಬಾಬು ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ರಾಜ್ ಕಿಶೋರ್ ನಂತರದ ದಿನಗಳಲ್ಲಿ ದ್ವಾರಕೀಶ್ ಚಿತ್ರ ನಿರ್ಮಾಣದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. 'ನೀ ಬರೆದ ಕಾದಂಬರಿ'ಯಿಂದ 'ಆಪ್ತಮಿತ್ರ' ಚಿತ್ರದವರೆಗೂ ದ್ವಾರಕೀಶ್ ಅವರ ಸಹಾಯಕರಾಗಿಯೇ ದುಡಿದರು.

ವಿಷ್ಣುವರ್ಧನ್ ಹಾಗೂ ನಳಿನಿ ಅಭಿನಯದ 'ಆಸೆಯ ಬಲೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ರಾಜ್ ಕಿಶೋರ್ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಜೀವನ ಜ್ಯೋತಿ, ಭಂಡ ನನ್ನ ಗಂಡ, ಅವತಾರ ಪುರುಷ, ತಾಯಿಯ ಆಸೆ, ಭೂಮಿ ತಾಯಾಣೆ, ರಾಜ ಯುವರಾಜ, ತ್ರಿನೇತ್ರ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಛಾಲೆಂಜ್, ಹೊಸ ಲವ್ ಸ್ಟೋರಿ, ನೀಲ ಮೇಘ ಶಾಮ, ಬೇಡ ಕೃಷ್ಣ ರಂಗಿನಾಟ, ಭೈರವ ರೆಬಲ್ ಸ್ಟಾರ್ ಅಂಬರೀಶ್ ಅವರ ತಾಯಿಗೊಬ್ಬ ಕರ್ಣ, ಪುಗಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ಸೇರಿದಂತೆ ಹಲವಾರು ಚಿತ್ರಗಳು ರಾಜ್ ಕಿಶೋರ್ ನಿರ್ದೇಶನದಲ್ಲಿ ಹೊರಬಂದಿವೆ. ಅವರ ಕೊನೆಯ ಚಿತ್ರ 'ಸಿರಿಚಂದನ'. ನಟಿ ರಾಧಿಕ ಅವರನ್ನು ನೀಲ ಮೇಘ ಶಾಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ರಾಜ್ ಕಿಶೋರ್.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada