ಕನಸಿನ ರಾಣಿ ಮಾಲಾಶ್ರೀಗೆ ಹುಟ್ಟುಹಬ್ಬ ಸಂಭ್ರಮ
ಅದೆಷ್ಟೋ ಯುವಕರ ಕನಸಿನ ಲೋಕದಲ್ಲಿ ಚಿತ್ತಾರ ಬಿಡಿಸಿದ ಕನಸಿನ ರಾಣಿ ಮಾಲಾಶ್ರೀ ಅವರಿಗೆ ಬುಧವಾರ (ಆ.10) ಹುಟ್ಟುಹಬ್ಬದ ಸಂಭ್ರಮ. ಎಂಬತ್ತರ ದಶಕದ ಕೊನೆಯಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ ಸಿನಿಮಾ ತಾರೆ ಮಾಲಾಶ್ರೀ.
ಗೃಹ ಪ್ರವೇಶ, ಮಾಂಗಲ್ಯ, ಸಿಂಧೂರ ತಿಲಕ, ಬೆಳ್ಳಿ ಕಾಲುಂಗುರ, ಮನಮೆಚ್ಚಿದ ಸೊಸೆ ಚಿತ್ರಗಳ ಮೂಲಕ ಹೆಂಗೆಳೆಯರನ್ನು ಚಿತ್ರಮಂದಿರಕ್ಕೆ ಸೆಳೆದು ಅವರ ಕಣ್ಣಲ್ಲಿ ಗಂಗಾ ಭವಾನಿ ಹರಿಸಿದ ಖ್ಯಾತಿ ಮಾಲಾಶ್ರೀ ಅವರಿಗೆ ಸಲ್ಲುತ್ತದೆ. ಹಾಗೆಯೇ ಕಾಮಿಡಿಯಲ್ಲೂ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ರೆಡಿಮೇಡ್ ಗಂಡ, ಕನಸಿನ ರಾಣಿ, ಮಾಲಾಶ್ರೀ ಮಾಮಾಶ್ರೀ ಹಾಗೂ ಹಳ್ಳಿ ರಂಭೆ ಬೆಳ್ಳಿ ಬೊಂಬೆ ಚಿತ್ರಗಳಲ್ಲಿ ನಿರೂಪಿಸಿದರು.
ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜೊತೆ ಅಭಿನಯಿಸಿದ 'ಮರಣ ಮೃದಂಗ' ಚಿತ್ರ ಸೇರಿದಂತೆ ಎಸ್ ಪಿ ಭಾರ್ಗವಿ ,ಕೊಲ್ಲೂರ ಕಾಳ ಚಿತ್ರಗಳು ಆಕ್ಷನ್‌ಗೆ ಹೆಸರುವಾಸಿಯಾದರೆ, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಕಿತ್ತೂರಿನ ಹುಲಿ, ತವರುಮನೆ ಉಡುಗೊರೆ ಚಿತ್ರಗಳು ಮಾಲಾಶ್ರೀಗೆ ಅಪಾರ ಖ್ಯಾತಿ ತಂದುಕೊಟ್ಟವು.
ದಿಗ್ಗಜರುಗಳೊಡನೆ ನಾಯಕಿಯಾಗಿ ಮೆರೆದು, ನಿರ್ಮಾಪಕರಿಗೆ ಲಕ್ಷ್ಮಿಯಾಗಿ ಒಲಿದ, ಅದೆಷ್ಟೋ ಹೆಣ್ಣು ಮಕ್ಕಳ ಅಕ್ಕಳಾಗಿ, ತಾಯಂದಿರ ಮುದ್ದಿನ ಮಗಳಾಗಿ, ಗಂಡುಬೀರಿ ಅತ್ತೆಯ ಸೊಕ್ಕು ಮುರಿಯುವ ಸೊಸೆಯಾಗಿ, ಸಮಾಜದ ಮೌಲ್ಯಗಳನ್ನು ಕಾಪಾಡುವ ಪೊಲೀಸ್ ಅಧಿಕಾರಿಯಾಗಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದ ಮಾಲಾಶ್ರೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಮಾಲಾಶ್ರೀ ಅವರಿಗೆ ಹೂಗುಚ್ಛ ಕಳುಹಿಸಲು ಮರೀಬೇಡಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











