ತೆಲುಗು ಊಸರವಳ್ಳಿ ದಾಳಿಗೆ ಜೋಗಯ್ಯ ಧೂಳಿಪಟ

ಮೂಲಗಳ ಪ್ರಕಾರ, ಮಹೇಶ್ ಬಾಬು ಅಭಿನಯದ 'ದೂಕುಡು' ಹಾಗೂ ಜೂ.ಎನ್ಟಿಆರ್ ಅಭಿನಯದ 'ಊಸರವಳ್ಳಿ' ಚಿತ್ರಗಳು ರಾಜ್ಯದಾದ್ಯಂತ 65ಕ್ಕೂ ಅಧಿಕ ಚಿತ್ರಮಂದಿರಗಳಿಗೆ ಲಗ್ಗೆ ಹಾಕಿವೆ. ಆದರೆ ಕೆಎಫ್‌ಸಿಸಿ ನಿಯಮಗಳ ಪ್ರಕಾರ ಪರಭಾಷಾ ಚಿತ್ರಗಳು 24ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವಂತಿಲ್ಲ.
ಆದರೆ ಫಿಲಂ ಚೇಂಬರ್‌ನ ನಿಯಮಗಳನ್ನು ಗಾಳಿಗೆ ತೂರಿದ ಈ ಎರಡೂ ಚಿತ್ರಗಳು ಕರ್ನಾಟಕದಲ್ಲಿ ಕೂಚಿಪುಡಿ ಕಥಕ್ಕಳಿ ಮೋಹಿನಿ ಆಟ್ಟಂ ಒಟ್ಟಿಗೆ ಆಡುತ್ತಿವೆ. ಇದನ್ನು ಫಿಲಂ ಚೇಂಬರ್ ಕಣ್ಣು ಬಾಯಿಬಿಟ್ಟುಕೊಂಡು ನೋಡುತ್ತಿರುವುದು ದುರಂತ. ಈ ಎರಡು ತೆಲುಗು ಚಿತ್ರಗಳು ಕರ್ನಾಟಕದಲ್ಲಿ ರು.5 ಕೋಟಿಗೂ ಅಧಿಕ ದುಡ್ಡನ್ನು ಬಾಚಿಕೊಂಡಿವೆ.
ಕಪಾಲಿ ಚಿತ್ರಮಂದಿರದಲ್ಲಿ ಅರ್ಧ ಶತಕ ಬಾರಿಸಿದ್ದೇ ತಡ 'ಜೋಗಯ್ಯ'ನಿಗೆ ಗೇಟ್‍ಪಾಸ್ ನೀಡಲಾಗಿದೆ. ಕಪಾಲಿಯಲ್ಲಿ ಈಗ 'ಊಸರವಳ್ಳಿ' ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ತೆಲುಗು ಚಿತ್ರ ನಿರ್ಮಾಪಕರ ಜೇಬಿಗೆ ಚಿಲ್ಲರೆ ಕಾಸು ಹುಟ್ಟಿಸುತ್ತಿದೆ.
ವಿಚಿತ್ರ ಎಂದರೆ ಕಪಾಲಿ ಚಿತ್ರಮಂದಿರದಲ್ಲಿ 'ಜೋಗಯ್ಯ' ಚಿತ್ರ 50 ದಿನ ಪ್ರದರ್ಶನ ಕಂಡಿದ್ದಕ್ಕೆ ಆನಂದ ತುಂದಿಲರಾಗಿರುವ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ! ಗಾಂಧಿನಗರದ ಸುಬೇಧಾರ್ ಛತ್ರಂನ ಮತ್ತೊಂದು ಮೂಲೆಯ ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ 'ದೂಕುಡು' ಬಾಕ್ಸಾಫೀಸ್ ಕೊಳ್ಳೆಹೊಡೆಯುತ್ತಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











