ಮಾರ್ಚ್ ನಲ್ಲಿ ತೆರೆಯ ಮೇಲೆ ಭರ್ಜರಿ ತೂಫಾನ್
ಚಿಂಗಾರಿ ಚಿತ್ರ ಬಿಡುಗಡೆಯ ನಂತರ ತೆರೆಗೆ ತರುವ ಉದ್ದೇಶದಿಂದ ಸಾಕಷ್ಟು ಚಿತ್ರಗಳು ಡಬ್ಬದಲ್ಲಿಯೇ ಮಲಗಿದ್ದವು. ಇದೀಗ ಚಿಂಗಾರಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಯಾವುದೇ ದೊಡ್ಡ ಬ್ಯಾನರ್ ಚಿತ್ರದ ಬಿಡುಗಡೆಯಿಲ್ಲ. ಹಾಗಾಗಿ, ಒಂದೊಂದಾಗಿ ಹೊಸ ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಪಾರಿಜಾತ, ಎ ಕೆ 56 ಹಾಗೂ ತುಗ್ಲಕ್ ಬಿಡಗಡೆ ಆಗಿವೆ. ಗವಿಪುರ, ಪುನೀತ್ ಮುಂದಿನ ವಾರಕ್ಕೆ ಕ್ಯೂನಲ್ಲಿವೆ.
ಈ ನಡುವೆ ಹೆಚ್ಚು ಆರ್ಭಟವಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿ ನಿಂತಿರುವ ಚಿತ್ರ ಬಹುನಿರೀಕ್ಷೆಯ ಹೊಸಬರ ಚಿತ್ರ 'ತೂಫಾನ್'. 'ಸ್ಮೈಲ್ ಸೀನು' ಎಂಬ ಹೊಸ ನಿರ್ದೇಶಕ ಹಾಗೂ 'ಶಿಶಿರ' ಹಾಗೂ 'ಚಿಂಗಾರಿ' ಚಿತ್ರದಲ್ಲಿ ಅಮೋಘ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿರುವ ನಟ 'ಯಶಸ್ ಸೂರ್ಯ' ಸಂಗಮದ ಚಿತ್ರ ಈ ತೂಫಾನ್. ಗಾಂಧಿ ನಗರದ ವರ್ತಮಾನದ ಪ್ರಕಾರ ತೂಫಾನ್ ಚಿತ್ರ ತೀರಾ ಚೆನ್ನಾಗಿ ಮೂಡಿ ಬಂದಿದೆ. ಹಾಗಾಗಿ, ಸಾಕಷ್ಟು ಸಮಯ ಕಾದು ಬಿಡುಗಡೆ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕ ನಟ ಯಶಸ್ ಸೂರ್ಯ ಅವರಿಗೆ ನಾಯಕಿಯಾಗಿ ತೆಲುಗು ನಟಿ 'ನಕ್ಷತ್ರ' ಇದ್ದಾರೆ. ಪ್ರಮುಖ ಪಾತ್ರಗಳಲ್ಲಿ ಖಾಸಗಿ ವಾಹಿನಿ ನಿರೂಪಕ ಚಂದನ್ ಹಾಗೂ ಸಾಧು ಕೋಕಿಲ ನಟಿಸಿದ್ದಾರೆ. ಹೆಚ್ ಜಡೇಗೌಡ್ರು ನಿರ್ಮಿಸಿರುವ ಈ ಚಿತ್ರಕ್ಕೆ ಎಲ್ವಿನ್ ಜೋಶ್ವಾ ಸಂಗೀತ ಹಾಗೂ ರವಿ ಸುವರ್ಣ ಛಾಯಾಗ್ರಹಣವಿದೆ. ಮಾರ್ಚ್ ಮೊದಲ ವಾರ ತೂಫಾನ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











