»   » ಕೇರಾಫ್ ಪುಟ್ ಪಾತ್ ಚಿತ್ರಕ್ಕೆ ಸ್ವರ್ಣಕಮಲದ ಗರಿ

ಕೇರಾಫ್ ಪುಟ್ ಪಾತ್ ಚಿತ್ರಕ್ಕೆ ಸ್ವರ್ಣಕಮಲದ ಗರಿ

Posted By:
Subscribe to Filmibeat Kannada

ನವದೆಹಲಿ, ಜೂ. 10 : ಮಂಗಳವಾರ (ಜೂನ್.10) 54ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕನ್ನಡದ ಮೂರು ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾದ್ದು ಉತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಮಾ.ಕಿಶನ್ ನಟಿಸಿ, ನಿರ್ದೇಶಿಸಿದ 'ಕೇರಾಫ್ ಪುಟ್ ಪಾತ್' ಚಿತ್ರಕ್ಕೆ ಸ್ವರ್ಣಕಮಲ, ಟಿ.ಎಸ್.ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರ ಅತ್ಯುತ್ತಮ ಭಾವೈಕ್ಯತೆ ಚಿತ್ರ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶನದ 'ಕಾಡಬೆಳದಿಂಗಳು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.


ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಇದುವರೆಗೂ ಮೂರು ಸಲ ಭಾವೈಕ್ಯತೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಲ್ಲರಳಿ ಹೂವಾಗಿ ಚಿತ್ರ ಉತ್ತಮ ಅಭಿರುಚಿಯ ಚಿತ್ರವಾಗಿದೆ. ಅಪಾರ ಶ್ರದ್ಧೆಯಿಂದ ಈ ಚಿತ್ರವನ್ನು ತೆರಗೆ ತರಲಾಗಿತ್ತು. ನಮ್ಮ ಪರಿಶ್ರಮ ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಅತೀವ ಸಂತಸವಾಗಿದೆ ಎಂದು ಹೇಳಿದರು. ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರ ನೀಡಬೇಕು ಎನ್ನುವ ಆಸೆ ಅನೇಕ ದಿನಗಳಿಂದ ಮನಸ್ಸಿನಲ್ಲಿತ್ತು. ಮಧು ಬಂಗಾರಪ್ಪ ಬಂಡವಾಳ ಹೂಡಲು ಮುಂದಾದಾಗ ಕಲ್ಲರಳಿ ಹೂವಾಗಿ ಚಿತ್ರ ಸಿದ್ಧವಾಯಿತು. ತುಂಬಾ ಅಚ್ಚುಕಚ್ಚಾಗಿ ತೆರೆಗೆ ತರಲಾಗಿತ್ತು. ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ, ಒಂದು ಉತ್ತಮ ಚಿತ್ರ ಮಾಡಿರುವ ನೆಮ್ಮದಿ ಇತ್ತು ಎಂದು ನಾಗಾಭರಣ ವಿಶ್ವಾಸದಿಂದ ಹೇಳಿದರು.

ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರನಾಗಿರುವ ಬಾಲ ಪ್ರತಿಭೆ ಮಾ. ಕಿಶನ್ ಚಿಕ್ಕ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ್ದಾರೆ. 'ಕೇರಾಫ್ ಪುಟ್ ಪಾತ್' ಮಕ್ಕಳ ವಿಭಾಗದ ಅತ್ಯುತ್ತಮ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಸ್ವರ್ಣಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಕುರಿತು ಮಾತನಾಡಿದ ಕಿಶನ್, ನನಗೆ ತುಂಬಾ ಸಂತೋಷವಾಗಿದೆ. ಪ್ರಶಸ್ತಿಯನ್ನು ನಿರೀಕ್ಷಿರಲಿಲ್ಲ. ಅನಿರೀಕ್ಷಿತವಾಗಿ ಬಂದಿರುವ ಪ್ರಶಸ್ತಿಯಿಂದ ಇನ್ನೊಂದು ಚಿತ್ರ ನಿರ್ಮಿಸುವ ಕನಸಿನ ಮೊಳಕೆ ಒಡೆಯತೊಡಗಿದೆ ಎಂದು ಹೇಳಿದರು.

ಪ್ರಶಸ್ತಿಗಳ ವಿವರ:

ಜನಪ್ರಿಯ ಚಿತ್ರ - ಲಗೇ ರಹೋ ಮುನ್ನಾಬಾಯಿ ಮತ್ತು ಮುನ್ನಾಬಾಯಿ ಎಂಬಿಬಿಎಸ್
ಉತ್ತಮ ಸಹನಟ ಪ್ರಶಸ್ತಿ - ದಿಲೀಪ್ ಪ್ರಭೋಲ್ಕರ್
ಉತ್ತಮ ಸಾಹಿತ್ಯ ಪ್ರಶಸ್ತಿ - ಸ್ವಾನಂದ ಕಿರ್ಕೀರೆ
ಇಂದಿರಾ ಗಾಂಧಿ ಪ್ರಶಸ್ತಿ - ಕಾಬೂಲ್ ಎಕ್ಸ್ ಪ್ರೇಸ್ (ನಿರ್ದೇಶನ -ಕಬೀರ್ ಖಾನ್)
ಉತ್ತಮ ಚಿತ್ರ - ಖೋಸ್ಲಾ ಕಾ ಘೋಸ್ಲಾ.
ಉತ್ತಮ ನಿರ್ದೇಶಕ ಪ್ರಶಸ್ತಿ - ಮಧುರ್ ಭಂಡಾರ್ಕರ್ (ಚಿತ್ರ -ಟ್ರಾಫಿಕ್ ಸಿಗ್ನಲ್)
ಉತ್ತಮ ನಟ ಪ್ರಶಸ್ತಿ - ಸೌಮಿತ್ರ ಚಟರ್ಜಿ
ಉತ್ತಮ ನಟಿ - ಪ್ರಿಯಮಣಿ (ತಮಿಳು ಚಿತ್ರ -ಪರುತಿವೀರನ್)
ಕೊಂಕಣ ಸೇನ್ ಶರ್ಮಾ ಮತ್ತು ವಿಶಾಲ್ ಭಾರದ್ವಾಜ - ಉತ್ತಮ ಪೋಷಕ ನಟರು
ಉತ್ತಮ ಸಂಗೀತ ಪ್ರಶಸ್ತಿ - ಶಾಂತನು ಮೂಯಿತ್ರಾ (ಚಿತ್ರ - ಲಗೇ ರಹೋ ಮುನ್ನಾಬಾಯಿ)
ಉತ್ತಮ ಗಾಯಕ ಪ್ರಶಸ್ತಿ - ಗುರುದಾಸ್ ಮನ್ನಾ
ಉತ್ತಮ ಗಾಯಕಿ - ಆರತಿ ಅಂಕ್ಲೇಕರ್ ಮತ್ತು ತಿಕೇಕರ್
ಉತ್ತಮ ಪ್ಯೂಚರ್ ಚಿತ್ರ - ಅಮೋಲ್ ಪಾಲೇಕರ್ (ಇಂಗ್ಲೀಷ್ ಚಿತ್ರ - ಕ್ವೆಸ್ಟ್)
ಉತ್ತಮ ಚಿತ್ರ - ಬಿಷರ್ ಬ್ಲೂಸ್ (ನಿರ್ದೇಶಕ - ಅಮಿತಾಬ್ ಚಕ್ರವರ್ತಿ)
ಉತ್ತಮ ಅನಿಮೇಶನ್ ಚಿತ್ರ - ಕಿಟ್ಟು (ತೆಲುಗು ಚಿತ್ರ)

(ದಟ್ಸ್ ಕನ್ನಡ ಸಿನಿವಾರ್ತೆ)
ವಿಡಿಯೋ:ಗಿನ್ನೆಸ್ ದಾಖಲೆ ವಿಜೇತ ಬಾಲ ಪ್ರತಿಭೆ ಕಿಶನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada