'ಗವಿಪುರ'ಕ್ಕೆ ಈ ವಾರ (ಫೆ.10) ಬಿಡುಗಡೆ ಭಾಗ್ಯವಿಲ್ಲ
ಈ ವಾರ ಬಿಡುಗಡೆಯಾಗಬೇಕಿದ್ದ ಗವಿಪುರ ಚಿತ್ರ ಫೆ.17, 2012ಕ್ಕೆ ಮುಂದೂಡಲ್ಪಟ್ಟಿದೆ. ಚಿತ್ರದ ಬಿಡುಗಡೆಯನ್ನು ಮುಂದೂಡಲು ವಿಶೇಷ ಕಾರಣವೇನು ಇಲ್ಲದಿದ್ದರೂ ಚಿತ್ರಮಂದಿರ ಸಮಸ್ಯೆಯೇ ಪ್ರಮುಖ ಕಾರಣವಾಗಿದೆ. ಈ ಸುದ್ದಿಯನ್ನು ಸ್ವತಃ ಚಿತ್ರದ ನಿರ್ದೇಶಕ ಕುಮಾರ್ ತಿಳಿಸಿದ್ದಾರೆ.
ಗವಿಪುರ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದರೂ ಉಳಿದ ಮೂರು ಚಿತ್ರಗಳು ಯಥಾಪ್ರಕಾರ ತೆರೆಗೆ ಅಪ್ಪಳಿಸುತ್ತಿವೆ. ಅವುಗಳಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಪಾರಿಜಾತ, ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಚಿತ್ರ ಎಕೆ 56 ಹಾಗೂ ಅರವಿಂದ್ ಕೌಶಿಕ್ ನಿರ್ದೇಶನದ 'ತುಗಲಕ್' ಬಿಡುಗಡೆಯಾಗುತ್ತಿವೆ.
ಕನ್ನಡ ಚಿತ್ರಗಳಿಗೇ ಚಿತ್ರಮಂದಿರಗಳಿಲ್ಲ ಎಂದರೆ ನಿಜಕ್ಕೂ ಬೇಸರದ ಸಂಗತಿ. ಸಾಮಾನ್ಯವಾಗಿ ಬಿಡುಗಡೆಯಾದ ಒಂದು, ಎರಡು ವಾರಕ್ಕೆ ಬಹುತೇಕ ಚಿತ್ರಗಳು ಎತ್ತಂಗಡಿಯಾಗುತ್ತಿದ್ದವು. ಆದರೆ ಈ ಬಾರಿ ದರ್ಶನ್ ಅವರ ಚಿಂಗಾರಿ, ಉಪೇಂದ್ರರ ಆರಕ್ಷಕ, ಯೋಗೇಶ್ ಅವರ ಸಿದ್ಲಿಂಗು ಹಾಗೂ ಶ್ರೀನಗರ ಕಿಟ್ಟಿ ಕೋ ಕೋ ಚಿತ್ರಗಳು ಬಾಕ್ಸಾಫೀಸಲ್ಲಿ ಗಟ್ಟಿಯಾಗಿ ಕಚ್ಚಿಕೊಂಡಿರುವುದು ಒಂದು ಪ್ರಮುಖ ಬೆಳವಣಿಗೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











