»   » ಗಣೇಶ್ ಚಿತ್ರದಲ್ಲಿ ಮುಂಬೈ ಕನ್ನಡತಿ ವೇದಿಕಾ

ಗಣೇಶ್ ಚಿತ್ರದಲ್ಲಿ ಮುಂಬೈ ಕನ್ನಡತಿ ವೇದಿಕಾ

Subscribe to Filmibeat Kannada

ಲಂಡನ್‌ನಲ್ಲಿ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು ಮಾಡೆಲಿಂಗ್ ಲೋಕದಿಂದ ಸಿನೆಮಾ ರಂಗಕ್ಕೆ ಜಿಗಿದಿರುವ ಅಪ್ಪಟ ಕನ್ನಡತಿ ವೇದಿಕಾ ಪ್ರಥಮ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಸತತ ಏಳು ಚಿತ್ರಗಳ ಭರ್ಜರಿ ಯಶಸ್ವಿ ಗುಂಗಿನಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಚಿತ್ರ 'ಸಂಗಮ'ದ ನಾಯಕಿಯಾಗಿ ಚಲುವೆ ವೇದಿಕಾ ಆಯ್ಕೆಯಾಗಿದ್ದಾರೆ. ಇದೇ 14ರಿಂದ ಸಂಗಮ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಮುಂಬೈನಲ್ಲಿ ಹುಟ್ಟಿ ಬೆಳಿದಿದ್ದರೂ ತಾನು ಕನ್ನಡತಿಯೆಂದು ವೇದಿಕಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಥಳಕು ಬಳುಕಿನ ಲೋಕದಲ್ಲಿಯೂ ಉತ್ಕೃಷ್ಟ ವೃತ್ತಿಪರತೆಯನ್ನು ಬಯಸುವ ಮತ್ತು ಮೆಚ್ಚುವ ವೇದಿಕಾ ತಮ್ಮ ಈ ಯಶಸ್ಸಿಗೆ ಉತ್ತಮ ವಿದ್ಯಾಭ್ಯಾಸವೇ ತಳಪಾಯ ಎಂದು ಹೇಳುತ್ತಾರೆ. ವಿದ್ಯಾಭ್ಯಾಸ ವಿಶ್ವಾಸ ತುಂಬುತ್ತದೆ ಮತ್ತು ಸ್ವತಂತ್ರವಾಗಿ ಮುನ್ನುಗ್ಗಲು ಸಹಾಯ ಮಾಡುತ್ತದೆ ಎನ್ನುವುದು ಅವರ ಧ್ಯೇಯವಾಕ್ಯ.

ಈ ವೃತ್ತಿಪರತೆಯೇ ಅವರನ್ನು ಇನ್ನೂ ನೆಲದ ಮೇಲೆ ಕಾಲು ಊರುವಂತೆ ಮಾಡಿದೆ ಮತ್ತು ಮಣ್ಣಿನ ಮೇಲಿನ ಪ್ರೀತಿಯನ್ನು ಇನ್ನೂ ಹಚ್ಚುಹಸುರಾಗುವಂತೆ ಮಾಡಿದೆ. ಮುಂಬೈ ಕನ್ನಡತಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮಗಾಗಿಯೇ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿರುವ ವೇದಿಕಾ ತಾವು ಕನ್ನಡತಿಯೆಂದು ಅಭಿಮಾನದಿಂದ ಹೇಳುತ್ತಿರುವುದೇ ಅದಕ್ಕೆ ಸಾಕ್ಷಿ. ಆದರೆ, ಕನ್ನಡ ಚಿತ್ರವೊಂದರಿಂದ ಕರಿಯರ್ ಪ್ರಾರಂಭಿಸಿ ಕನ್ನಡತನವನ್ನು ಮರೆತು ತಾವೊಬ್ಬ ಮುಂಬೈವಾಲಿ ಎಂದು ಹೇಳಿಕೊಳ್ಳುತ್ತಿರುವ ಬೆಳಗುತ್ತಿರುವ ಮತ್ತೊಬ್ಬ ನಟಿಗೆ ತಾನು ಕನ್ನಡತಿಯೆಂದು ಹೇಳಲು ಅಸಹ್ಯ. ಎಂಥ ವಿಪರ್ಯಾಸವಲ್ಲವೆ?

ಭರತನಾಟ್ಯಂ ಮತ್ತು ಕಥಕ್ ನೃತ್ಯ ಪ್ರಕಾರದಲ್ಲಿ ಪರಿಣತಿಯಿರುವ ವೇದಿಕಾ ಜಾಹಿರಾತು ಕ್ಷೇತ್ರದಿಂದ ಸಿನೆಮಾರಂಗಕ್ಕೆ ನೆಗೆದಿದ್ದು ಆಕಸ್ಮಿಕ. ಹಿಂದಿಯಲ್ಲಿ ಮ್ಯುಸಿಕ್ ಆಲ್ಬಂ ಮತ್ತು ಆಡ್ ಲೋಕದಲ್ಲಿ ತಮ್ಮ ಪ್ರತಿಭೆಯನ್ನು ಜಾಹಿರಾತು ಮಾಡಿದ್ದ ಅವರು ಮೊದಲು ಬಿದ್ದಿದ್ದು ಅರ್ಜುನ್ ಕಣ್ಣಿಗೆ. ಅರ್ಜುನ್ ದಕ್ಷಿಣ ಚಿತ್ರರಂಗಕ್ಕೆ ಎಳೆದು ತಂದೇಬಿಟ್ಟರು. ಶಿವಕಾಶಿ, ಮುನಿ, ಸಿಂಬು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡ ಚಿತ್ರದಲ್ಲಿಯೂ ನಟಿಸುತ್ತಿರುವುದು ಅವರಿಗೆ ಭಾರೀ ಹರ್ಷ ತಂದಿದೆ.

ತಾವು ಮುಂಬೈ ಕನ್ನಡತಿಯಾಗಿದ್ದರೂ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರಲಿಲ್ಲ. ಈಗ ನಟಿಸುತ್ತಿರುವುದು, ಅದೂ ಗಣೇಶ್ ಎದುರಾಗಿ, ಭಾರೀ ಸಂತಸ ತಂದಿದೆ ಎಂದು ಹೇಳುತ್ತಾರೆ ವೇದಿಕಾ. ಶಾಲಾ ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದು ಎಂದು ಹೇಳುವ ಈ ಬೆಡಗಿ, ಅನೇಕ ಸಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅನುಭವವನ್ನು ಹೊಂದಿರುವೆ ಎಂದು ಹೇಳುತ್ತಾರೆ. ಬಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ನೆಚ್ಚಿನ ಕ್ರೀಡೆಗಳು ಎನ್ನುವ ಈಕೆ ಹಿಂದಿ ನಟಿ ಶ್ರೀದೇವಿ ಅವರ ನಟನೆಯನ್ನು ಭಾರಿ ಮೆಚ್ಚಿಕೊಂಡಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada