»   » ನಾ ಟಾಟಾ ನೀ ಬಿರ್ಲಾ, ಪಿಯೂಸಿ ತೆರೆಗೆ ಸಿದ್ಧ

ನಾ ಟಾಟಾ ನೀ ಬಿರ್ಲಾ, ಪಿಯೂಸಿ ತೆರೆಗೆ ಸಿದ್ಧ

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿ ಅಭಿನಯಿಸುತ್ತಿದ್ದು, ಹಾಸ್ಯಭರಿತ ಚಿತ್ರ 'ನಾ ಟಾಟಾ ನೀ ಬಿರ್ಲಾ' ಚಿತ್ರದಲ್ಲಿ ಮೋಹಕ ತಾರೆ ಜೆನ್ನಿಫರ್ ಕೋತ್ವಾಲ್ ಹಾಗೂ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಜತೆ ಕುಣಿಯಲಿದ್ದಾರೆ.

ಕಳೆದವಾರ ಬೆಂಗಳೂರಿನಲ್ಲಿ ಬಿರ್ಲಾ ತನ್ನ ಸಂಗಾತಿಯೊಡನೆ ಕುಣಿದಿದ್ದನ್ನು ಚಿತ್ರೀಕರಿಸಿಕೊಂಡ ನಿರ್ದೇಶಕ ಮಾಗಡಿ ಪಾಂಡು ಬ್ಯಾಂಕಾಕ್‌ಗೆ ತೆರಳಿದ್ದಾರೆ. ಅಲ್ಲಿ ಟಾಟಾ ಪಾತ್ರಧಾರಿ ರವಿಚಂದ್ರನ್ ಹಾಗೂ ಬೆಡಗಿ ಜನ್ನಿಫರ್ ಕೊತ್ವಾಲ್ ಅವರ ಅಭಿನಯದಲ್ಲಿ ಹೃದಯಶಿವ ಅವರು ಬರೆದಿರುವ

'ಮುತ್ತು ಕೊಡಲ ಮುತ್ತು ಕೊಡಲ ಮನಸಾರೆ ಕಣ್ಣಿಗೊಂದನ್ನು ಒತ್ತಿ ಬಿಡಲೆ ಒತ್ತಿ ಬಿಡಲೆ ಮನಸಾ ಈ ಕಾಲಿಂಗ್ ಬೆಲ್ಲನು' ಗೀತೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ಗೀತೆಯ ಚಿತ್ರೀಕರಣದೊಂದಿಗೆ ಮದರ್ ಇಂಡಿಯಾ ಮೂವೀಟೋನ್ ಲಾಂಛನದಲ್ಲಿ ರವಿಕುಮಾರ್ ಹಾಗೂ ಎಸ್.ಎನ್.ದೊಡ್ಡೇಗೌಡರು ನಿರ್ಮಿಸುತ್ತಿರುವ 'ನಾ ಟಾಟಾ ನೀ ಬಿರ್ಲಾ ' ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ.

ಕೌಟುಂಬಿಕ ಸನ್ನಿವೇಶದೊಂದಿಗೆ ಹಾಸ್ಯದ ಹೊನಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಗೀತರಚನೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಲಕ್ಷ್ಮಣರೆಡ್ಡಿ ಸಂಕಲನ, ಕಡೂರುಶಿವು, ಜಿ.ಎಸ್.ವೇದಾಂತ್ ಸಹನಿರ್ದೇಶನ, ಇಸ್ಮಾಯಿಲ್ ಕಲೆ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ಜಗ್ಗೇಶ್, ಜನ್ನಿಫರ್ ಕೊತ್ವಾಲ್, ಪೂಜಾಗಾಂಧಿ, ನಿಖಿತಾ, ಕೀರ್ತಿಚಾವ್ಲಾ, ಊರ್ವಶಿ, ಜ್ಯೋತಿರಾಣಾ, ಸಾಧುಕೋಕಿಲಾ, ದೊಡ್ಡಣ್ಣ ಮುಂತಾದವರಿದ್ದಾರೆ.

****
'ಪಿಯುಸಿ' ಪರೀಕ್ಷೆ ಮುಗಿದಿದೆ, ಫಲಿತಾಂಶ ಪ್ರೇಕ್ಷಕರಿಗೆ ಬಿಟ್ಟಿದ್ದು!

ಇದೇನು ಇನ್ನೂ ಪರೀಕ್ಷೆ ಮುಗಿದೇ ಇಲ್ಲ ಆಗಲೇ ಮುಕ್ತಾಯ ಅಂದರೆ! ಇಲ್ಲಿ ಮುಕ್ತಾಯಗೊಂಡಿರುವುದು 'ಪಿಯುಸಿ'(ಪ್ರಥಮ ಅಥವಾ ದ್ವಿತೀಯ ಅನ್ನುವುದು ಗೊತ್ತಿಲ್ಲ!) ಯ ಶಿಕ್ಷಣವಲ್ಲ ಅದೇ ಹೆಸರಿನ ಸಿನೆಮಾ ಚಿತ್ರೀಕರಣ.

''ಇದು ಯಾರೋ, ಕಾಣದೆ ಕಾಡುವವಳು, ಕುಣಿಯುವವಳು, ಕೆಣಕುವವಳು ದಿನ...'' ಎಂಬ ಕಲ್ಯಾಣ್ ಬರೆದಿರುವ ಗೀತೆಯನ್ನು ವಂಡರ್ ಲಾದಲ್ಲಿ ನಾಯಕ ಚೇತನ್‌ಚಂದ್ರ ಹಾಗೂ ಸ್ನೇಹಿತರ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳುವುದರೊಂದಿಗೆ ಸುಮಾರು 60ದಿನಗಳ ಚಿತ್ರೀಕರಣವನ್ನು ಪೂರೈಸಿದ್ದಾರೆ ನಿರ್ದೇಶಕದ್ವಯರಾದ ಎಸ್.ಆರ್.ಬ್ರದರ್ಸ್. ಫೈವ್‌ಸ್ಟಾರ್ ಗಣೇಶ್ ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ. ಅಭಯಜ್ಯೋತಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣೇಗೌಡ ಬಿ ಪಾಟೀಲ್ ನಿರ್ಮಿಸಿ ಎಸ್.ಆರ್. ಬ್ರದರ್ಸ್ ಅವರು ಎಳೆಯ ಕಂಗಳ ಅಷೋತ್ತರಗಳನ್ನು ಅನ್ವೇಷಣೆ ಮಾಡಿ ನಿರ್ದೇಶಿಸಿರುವ ''ಪಿಯುಸಿ' ಯಲ್ಲಿ ಪ್ರೀತಿಯ ವಿವಿಧ ಬಗೆಗಳನ್ನು ಕಾಣಬಹುದು.

ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜವಾಬ್ದಾರಿ ಹೊತ್ತಿದ್ದಾರೆ. ರವಿರಾಜ್ ಸಂಗೀತ, ಸುರೇಶ್‌ಬಾಬು ಛಾಯಾಗ್ರಹಣ, ಪ್ರಕಾಶ್ ಸಂಕಲನ, ಮದನ್ - ಹರಿಣಿ, ಚಿನ್ನಿಪ್ರಕಾಶ್ ನೃತ್ಯ, ರವಿವರ್ಮ ಸಾಹಸ, ಸೋಮನಾಥ್ ಸಹನಿರ್ದೇಶನ, ಕೆ.ವಿ.ಮಂಜಯ್ಯ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್‌ಚಂದ್ರ, ಹರ್ಷಿಕಾಪೂರ್ಣಚ್ಛ, ಚರಿಷ್ಮಾ, ಅವಿನಾಶ್, ವಿನಯಾಪ್ರಕಾಶ್, ರಾಮಕೃಷ್ಣ, ಸಾಧುಕೋಕಿಲಾ ಮುಂತಾದವರಿದ್ದಾರೆ.

ಇತ್ತೀಚೆಗಷ್ಟೇ ಯಲಹಂಕ ರೇವಾ ಕಾಲೇಜಿನ ಬಳಿ 'ಪಿಯುಸಿ' ಚಿತ್ರೀಕರಣದ ವೇಳೆ ಜೇನುಹುಳುಗಳು ಕಾಟಕೊಟ್ಟ ಪರಿಣಾಮ ಚಿತ್ರದ ನಾಯಕ ಚೇತನ್ ಚಂದ್ರ, ನಾಯಕಿ ಹರ್ಷಿಕಾ, ಚರಿಷ್ಮಾ ಸೇರಿದಂತೆ 20ಕ್ಕೂ ಅಧಿಕ ಮಂದಿ ಆಸ್ಪತ್ರೆ ಪಾಲಾಗಿದ್ದರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada