ಇನ್ನೊಂದು ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಮತ್ತೊಂದು ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ. ಹಿಂದಿಯಲ್ಲಿ ಸುದೀಪ್ ಅಭಿನಯಿಸಲಿರುವ ಐದನೇ ಚಿತ್ರ ಇದಾಗಲಿದೆ. ವಿನಯ್ ಸಪ್ರು ಆಕ್ಷನ್, ಕಟ್ ಹೇಳಲಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ 'ಲಕ್ಕಿ' ಚಿತ್ರವನ್ನು ಇವರು ನಿರ್ದೇಶಿಸಿದ್ದರು.
ಕಿಚ್ಚನ ಜೊತೆ ಈ ಬಾರಿ ತೆರೆಹಂಚಿಕೊಳ್ಳುತ್ತಿರುವವರು ಕಂಗನಾ ರನಾವತ್. ಈ ವಿಷಯವನ್ನು ಸುದೀಪ್ ಸ್ಪಷ್ಟಪಡಿಸಿದ್ದು, ಆಗಸ್ಟ್ ನಲ್ಲಿ ಆರು ದಿನ ಹಾಗೂ ಸೆಪ್ಟೆಂಬರ್ ನಲ್ಲಿ ಎಂಟು ದಿನಗಳ ಕಾಲ್ ಶೀಟನ್ನು ನೀಡಿದ್ದೇನೆ ಎಂದಿದ್ದಾರೆ. ಮುಂಬೈ ಸೇರಿದಂತೆ ಚಿಕಾಗೊ ಮತ್ತು ನ್ಯೂಯಾರ್ಕ್ ನಲ್ಲಿ ಚಿತ್ರೀಕರಣ ನಡೆಯಲಿದೆ.
ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದ್ದು ಹಾಸ್ಯ ಮತ್ತು ಪ್ರಣಯಭರಿತ ಸನ್ನಿವೇಶಗಳಿಂದ ಕೂಡಿದೆ ಎನ್ನುತ್ತಾರೆ ಸುದೀಪ್. ಇತ್ತ ಕನ್ನಡದ 'ಕನ್ವರ್ ಲಾಲ್' ಚಿತ್ರದಲ್ಲೂ ಸುದೀಪ್ ನಟಿಸುತ್ತಿದ್ದು ಚಿತ್ರ ಅಂತಿಮ ಹಂತ ತಲುಪಿದೆ. 'ಅಂತ' ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಪೋಷಿಸಿದ್ದ ಕನ್ವರ್ ಲಾಲ್ ಪಾತ್ರದಲ್ಲಿ ಸುದೀಪ್ ಕಾಣಿಸಲಿದ್ದಾರೆ.
ಸುದೀಪ್ ಅಭಿನಯದ ತ್ರಿಭಾಷಾ(ತೆಲುಗು, ಹಿಂದಿ ಮತ್ತು ತಮಿಳು) ಚಿತ್ರ 'ರಕ್ತ ಚರಿತ್ರ' ಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ಈ ಚಿತ್ರ ಎರಡು ಹಂತಗಳಲ್ಲಿ ಬಿಡುಗಡೆಯಾಗಲಿದೆ. ಎರಡು ತಿಂಗಳ ಅಂತರದಲ್ಲಿ ಒಂದೊಂದು ಚಿತ್ರ ಬಿಡುಗಡೆಯಾಗಲಿದೆ.
'ಕನ್ವರ್ ಲಾಲ್' ಚಿತ್ರದಲ್ಲಿ ಸುದೀಪ್ ಅವರದು ದ್ವಿಪಾತ್ರ. ಈ ಚಿತ್ರ ಮುಗಿದ ಬಳಿಕ ನಿರ್ಮಾಪಕ ದ್ವಾರಕೀಶ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಗ್ರಾಫ್ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ.


Click it and Unblock the Notifications











