ಡಿಟಿಎಸ್ ನಲ್ಲಿ ಕಿಟ್ಟಿ, ಶರ್ಮಿಳಾ 'ಸ್ವಯಂವರ'
ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವಯಂವರ' ಚಿತಕ್ಕೆ ರಾಜನ್ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದೆ ಎಂದು ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ.
ಇತ್ತೀಚೆಗೆ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಚಿತ್ರದ ಧ್ವನಿಸುರುಳಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದ ರಮಣೀಯ ಸ್ಥಳಗಳು ಹಾಗೂ ದೂರದ ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ನಿರ್ದೆಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ'ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರ ರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.


Click it and Unblock the Notifications











