ಹತ್ತು ವರ್ಷಕ್ಕೆ ಒಂದು ಸಿನಿಮಾ ಸಾಕಾ ? ಎಲ್ಲಿದ್ದೀರಾ ಯಶ್ ?
ಮತ್ತೆ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದ್ದಾರೆ ನಟ ಯಶ್. ಕಾದು ಕಾದು ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿದ್ದಾರೆ. ಹೀರೊ ಆಗಿ ಪ್ರೈಂ ಟೈಮ್ ಅನ್ನು ಅವರು ವೇಸ್ಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಹೋಗ್ಲಿ ಒಂದು. ಅದು ಬೇಡಪ್ಪ 2 ವರ್ಷಕ್ಕಾದ್ರು ಒಂದು ಸಿನಿಮಾ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ. ಕೊನೆ ಪಕ್ಷ 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಹೇಳಿ ಪುಣ್ಯ ಕಟ್ಕೊಳ್ಳಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ. ಅದರಲ್ಲಾದ್ರು ರಿಲೀಸ್ ಡೇಟ್ ರಿವೀಲ್ ಆಗುತ್ತೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. 'ಟಾಕ್ಸಿಕ್' ಸಿನಿಮಾ ಈ ವರ್ಷ ತೆರೆಗೆ ಬರೋದೇ ಅನುಮಾನ ಎನ್ನುವಂತಾಗಿದೆ. ಯಶ್ ಲೆಕ್ಕಾಚಾರ, ಮಹತ್ವಾಕಾಂಕ್ಷೆ ಬಗ್ಗೆ ದ್ರೂಸಾ ಮಾತಿಲ್ಲ. ಆದರೂ ಯಾಕೋ ಯಶ್ ಸಿನಿಮಾ ರಿಲೀಸ್ ಬಹಳ ತಡ ಆಯ್ತು ಅನ್ನಿಸ್ತಿಲ್ವಾ?

ಕಳೆದ 10 ವರ್ಷಗಳಲ್ಲಿ ಯಶ್ ನಟನೆಯ ಎರಡು ಸಿನಿಮಾ ಅಲ್ಲ, ಅಲ್ಲ ಒಂದು 'ಕೆಜಿಎಫ್' ಸಿನಿಮಾ ಮಾತ್ರ ಎರಡು ಭಾಗಗಳಾಗಿ ತೆರೆಗೆ ಬಂದಿದೆ. ಅದಕ್ಕೂ ಮುನ್ನ ಕೊನೆಯದಾಗಿ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ಯಶ್ ನಟಿಸಿದ್ದರು. 2014ರಲ್ಲಿ 'ಮಿ. & ಮಿ. ರಾಮಚಾರಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮರುವರ್ಷ ಬಂದ 'ಮಾಸ್ಟರ್‌ಪೀಸ್' ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಇನ್ನು 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಸೋತಿದ್ದು ಗೊತ್ತೇಯಿದೆ. 'ಕೆಜಿಎಫ್' ಚಾಪ್ಟರ್-1 ಪ್ರೇಕ್ಷಕರ ಮನಗೆದ್ದಿತ್ತು. ಚಾಪ್ಟರ್-2 ಬಾಕ್ಸಾಫೀಸ್ ಕೊಳ್ಳೆ ಹೊಡೆದರೂ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಅಂದ್ರೆ 'ಮಿ. & ಮಿ. ರಾಮಚಾರಿ' ಬಳಿಕ 'ಕೆಜಿಎಫ್' ಚಿತ್ರದಿಂದ ಮಾತ್ರ ಯಶ್ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿದ್ದರು.
ಈ ವರ್ಷ ಅಕ್ಟೋಬರ್ ಕೊನೆ ವಾರ 'ರಾಮಾಯಣ' ಚಿತ್ರ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ 'ಟಾಕ್ಸಿಕ್' ರಿಲೀಸ್ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ. ಅಲ್ಲಿಗೆ ಕಳೆದ 10 ವರ್ಷಗಳಲ್ಲಿ ಯಶ್ ನಟಿಸಿದ್ದು 'ಕೆಜಿಎಫ್' ಚಿತ್ರದಲ್ಲಿ ಮಾತ್ರ. ಒಂದರ್ಥದಲ್ಲಿ ಯಶ್ ಪ್ರತಿ ಸಿನಿಮಾ ಪಂಚವಾರ್ಷಿಕ ಯೋಜನೆ ಎನ್ನುವಂತಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಲೇಟ್ ಆದರೂ ಲೇಟೆಸ್ಟ್ ಆಗಿ ನಮ್ ಬಾಸ್ ಸಿನಿಮಾ ಬರುತ್ತೆ ಎಂದು ಕಾಯುತ್ತಿರುವವರು ಕೂಡ ಯಾಕೋ ಈಗ ಒಳಗೊಳಗೆ ರೋಸಿ ಹೋಗಿದ್ದಾರೆ. ಎಲ್ಲಿದ್ದೀರಾ ಯಶ್ ಎಂದು ಕೇಳುವಂತಾಗಿದೆ.

ಒಂದ್ಕಡೆ ಅಪ್ಪು ಅಗಲಿಕೆ, ಮತ್ತೊಂದು ಕಡೆ ದರ್ಶನ್ ಅನುಪಸ್ಥಿತಿ. ನನ್ನ ಜೀವನ ನನ್ನಿಷ್ಟದಂತೆ ನಡೆಸಲು ಬಿಡಿ ಎನ್ನುತ್ತಿರುವ ಸುದೀಪ್, 4 ವರ್ಷದಿಂದ 'ರಿಚರ್ಡ್ ಆಂಟನಿ' ಕಥೆ ಬರೆಯುತ್ತಾ ಕೂತಿರುವ ರಕ್ಷಿತ್ ಶೆಟ್ಟಿ, ಪ್ಯಾನ್ ಇಂಡಿಯಾ ಹೆಸರಿನಲ್ಲಿ ಪರಭಾಷೆ ಸಿನಿಮಾಗಳ ಕಡೆ ಮುಖ ಮಾಡಿದ ರಿಷಬ್ ಶೆಟ್ಟಿ.. ಅಲ್ಲಿಗೆ ಕನ್ನಡ ಚಿತ್ರರಂಗದ ಕಥೆಯೇನು? ಎನ್ನುವ ಚರ್ಚೆ ಚಿತ್ರರಂಗದಲ್ಲಿ ಶುರುವಾಗಿದೆ. ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಬಂದು ಕರ್ನಾಟಕದಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವಾಗ ನಮ್ಮ ಸ್ಟಾರ್‌ಗಳು ತಮ್ಮದೇ ಲೋಕದಲ್ಲಿರುವುದು ವಿಪರ್ಯಾಸವೇ ಸರಿ.
ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕರು ಕೂಡ ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ತಾಕತ್ತು ಇರುವವರೇ ಹೀಗೆ ಮಾಡಿದ್ರೆ ಚಿತ್ರರಂಗದ ಕಥೆಯೇನು? ಎಲ್ಲರೂ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಅಂತ ಹೋದ್ರೆ ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಮಾಡೋದು ಯಾರು? ಇನ್ನಾದರೂ ನಮ್ಮ ಸ್ಟಾರ್ ನಟರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.


Click it and Unblock the Notifications