'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
ಕನ್ನಡದ ಕಲ್ಟ್ ಕ್ಲಾಸಿಕ್ 'ಉಳಿದವರು ಕಂಡಂತೆ' ಸಿನಿಮಾ 10 ವರ್ಷ ಪೂರೈಸಿದೆ. 2014 ಮಾರ್ಚ್ 28ರಂದು ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಗ್ಯಾಂಗ್‌ಸ್ಟರ್ ಸಿನಿಮಾ ತೆರೆಗಪ್ಪಳಿಸಿತ್ತು. ಬಾಕ್ಸಾಫೀಸ್‌ನಲ್ಲಿ ಸೋತರೂ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಬುದ್ದಿವಂತ ಪ್ರೇಕ್ಷಕರಿಗೆ ಮಾತ್ರ ಎನ್ನುವಂತೆ ಸಿನಿಮಾ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
'ಸಿಂಪಲ್ ಆಗಿ ಒಂದ್ ಲವ್‌ಸ್ಟೋರಿ' ಚಿತ್ರದಲ್ಲಿ ಹೀರೊ ಆಗಿ ಗೆದ್ದ ಬೆನ್ನಲ್ಲೇ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಸಾಹಸ ಮಾಡಿದ್ದರು. ಕಿಶೋರ್, ತಾರಾ, ಯಜ್ಞಾ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ, ಕರಮ್ ಚಾವ್ಲಾ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿತ್ತು. 5 ಬೇರೆ ಬೇರೆ ಚಾಪ್ಟರ್‌ಗಳಾಗಿ ಕಥೆಯನ್ನು ಹೇಳಲಾಗಿತ್ತು.

ಅವತ್ತಿನ ಕಾಲಕ್ಕೆ 'ಉಳಿದವರು ಕಂಡಂತೆ' ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಆಗಿತ್ತು. ಕರಾವಳಿ ಸಂಸ್ಕೃತಿ, ಅಲ್ಲಿನ ಭಾಷೆ ಎಲ್ಲವನ್ನು ತೆರೆಗೆ ತರಲಾಗಿತ್ತು. ಇನ್ನು ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿ ಆಗಿ ರಕ್ಷಿತ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದರು. ಸಿಂಪಲ್ ಸ್ಟಾರ್ ಗೆಟಪ್, ಮ್ಯಾನರಿಸಂ, ಹುಲಿ ಕುಣಿತ ಎಲ್ಲವೂ ಪ್ರೇಕ್ಷಕರಿಗೆ ಮಜಾ ಕೊಟ್ಟಿತ್ತು. ಅಂದೇ ಸಿನಿಮಾ ಪ್ರೀಕ್ವೆಲ್ ನೋಡಬೇಕು ಎಂದು ಆಸೆಪಟ್ಟಿದ್ದರು.
ಬರೋಬ್ಬರಿ 8 ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಿಸಲು ಮುಂದೆ ಬಂದಿತ್ತು. ಸಣ್ಣ ಟೀಸರ್ ರಿಲೀಸ್ ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಲಾಗಿತ್ತು. ಬಳಿಕ ರಕ್ಷಿತ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಜೊತೆಗೆ 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 'ಉಳಿದವರು ಕಂಡಂತೆ' ದಶಕದ ಸಂಭ್ರಮದಲ್ಲೇ ಪ್ರೀಕ್ವೆಲ್ ಅಪ್‌ಡೇಟ್ ಸಿಗುತ್ತದೆ ಎಂದು ಬಹಳ ಜನ ಕಾಯುತ್ತಿದ್ದರು. ಕೊನೆಗೂ ಸಿಂಪಲ್ ಸ್ಟಾರ್ ಪ್ರತಿಕ್ರಿಯಿಸಿದ್ದಾರೆ. ಆದರೆ ನಿರಾಸೆ ಮೂಡಿಸಿದ್ದಾರೆ.
"ಕಾಲಾನಂತರದಲ್ಲಿ, ಪ್ರತಿಯೊಂದು ಸೃಷ್ಟಿಯು ಅಸ್ತಿತ್ವದಲ್ಲಿ ತನ್ನ ಸರಿಯಾದ ಸ್ಥಾನವನ್ನು ಕಂಡುಕೊಳ್ಳುತ್ತದೆ. 'ಉಳಿದವರು ಕಂಡಂತೆ' ಚಿತ್ರ 10 ವರ್ಷ ಪೂರೈಸಿದೆ. ವರ್ಷಗಳು ಕಳೆದಂತೆ ಚಿತ್ರದ ಮೇಲಿನ ಪ್ರೀತಿ ಮತ್ತು ಮನ್ನಣೆ ಹೆಚ್ಚಾಗುತ್ತಿದೆ. 'ರಿಚರ್ಡ್ ಆಂಟನಿ' ಸಿನಿಮಾ ಪೈಪ್‌ಲೈನ್‌ನಲ್ಲಿದೆ. ಅಪ್‌ಡೇಟ್ ಘೋಷಣೆಗೆ ಇದು ಒಳ್ಳೆಯ ದಿನ ಎಂದು ನನಗೆ ಅನಿಸುತ್ತದೆ. ಆದರೆ ನಾನು ಅದನ್ನು ಇನ್ನೊಂದು ದಿನಕ್ಕೆ ಉಳಿಸುತ್ತಿದ್ದೇನೆ, ಏಕೆಂದರೆ ನಾವು ಆಯ್ಕೆ ಮಾಡಿಕೊಂಡಿರುವ ದಿನವು ಇದಕ್ಕಿಂತ ಹೆಚ್ಚು ದೊಡ್ಡದಾಗಿದೆ, ಇನ್ನಷ್ಟು ವಿಶೇಷವಾಗಿದೆ. ಲವ್ ಯು ಆಲ್" ಎಂದು ಟ್ವೀಟ್ ಮಾಡಿದ್ದಾರೆ.
'ರಿಚರ್ಡ್ ಆಂಟನಿ' ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ ಎನ್ನುವ ಬಗ್ಗೆ ಇತ್ತೀಚೆಗೆ ಗೊಂದಲ ಶುರುವಾಗಿತ್ತು. ಹೊಂಬಾಳೆ ಫಿಲ್ಮ್ಸ್ ಜೊತೆಗೆ ರಕ್ಷಿತ್ ಶೆಟ್ಟಿಗೆ ಭಿನ್ನಾಭಿಪ್ರಾಯಗಳಿವೆ ಎಂದು ಗುಲ್ಲಾಗಿತ್ತು. ರಕ್ಷಿತ್ ಶೆಟ್ಟಿ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಇದೆಲ್ಲಾ ಸುಳ್ಳು ಎನ್ನುವ ವಾದವೂ ಇದೆ. ಹೊಂಬಾಳೆ ಸಂಸ್ಥೆಯೇ 'ರಿಚರ್ಡ್ ಆಂಟನಿ'ಯನ್ನು ಕರ್ಕೊಂಡು ಬರಲಿದೆ.

'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ ನಟನೆಯಿಂದ ಬ್ರೇಕ್ ಪಡೆಯುತ್ತಿದ್ದಾರೆ. ತಮ್ಮದೇ ನಿರ್ದೇಶನದಲ್ಲಿ 'ರಿಚರ್ಡ್ ಆಂಟನಿ' ಹಾಗೂ 'ಪುಣ್ಯಕೋಟಿ' ಸರಣಿ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. 'ಮಿಡ್ ನೈಟ್ ಮೋಕ್ಷ' ಎನ್ನುವ ಮತ್ತೊಂದು ಚಿತ್ರಕ್ಕೂ ಪ್ಲ್ಯಾನ್ ಮಾಡುತ್ತಿದ್ದಾರೆ. ಎಲ್ಲಾ ಚಿತ್ರಗಳನ್ನು ತಾವೇ ನಿರ್ದೇಶಿಸಿ ನಟಿಸುವ ಕನಸು ಕಂಡಿದ್ದಾರೆ. ಆದರೆ ಯಾವ ಸಿನಿಮಾ ಯಾವಾಗ ತೆರೆಗೆ ಬರಬಹುದು ಎನ್ನುವ ಅಂದಾಜು ಖುದ್ದು ಸಿಂಪಲ್ ಸ್ಟಾರ್‌ಗೂ ಇಲ್ಲ.


Click it and Unblock the Notifications











