»   » ಪ್ರೇಮಾಸ್ಮಿ- ರವಿಚಂದ್ರನ್‌ ಮ್ಯಾಜಿಕ್‌

ಪ್ರೇಮಾಸ್ಮಿ- ರವಿಚಂದ್ರನ್‌ ಮ್ಯಾಜಿಕ್‌

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಏಳುಬೀಳುಗಳ ಹಾದಿಯಲ್ಲಿ ಸಾಗುವುದು ರವಿಚಂದ್ರನ್‌ಗೊಂದು ಫ್ಯಾಷನ್‌. ನಿರಂತರ ಪ್ರಯೋಗ ಹಾಗೂ ಸಾಹಸಗಳಿಂದ ಮಿಂಚುವ ರವಿ ಪ್ರಪಂಚದ ತುಂಬ ಬಣ್ಣಗಳೇ ತುಂಬಿಹೋಗಿವೆ. ‘ನಮ್ಮ ಪ್ರೇಮಾಂಗಿ ಪಾಪ ಏಕಾಂಗಿಯಾಗಬಾರದಿತ್ತು’ ಎಂದು ಗಾಂಧಿನಗರ ಗೊಣಗುವಾಗಲೇ, ‘ಮಲ್ಲ’ ಗೆಲ್ಲೋದು ಬಲ್ಲ ಅನ್ನೋದನ್ನು ರವಿ ಸಾಬೀತು ಮಾಡಿದ್ದರು.

ಪ್ರೇಕ್ಷಕರ ಪಾಲಿಗೆ ರವಿಚಂದ್ರನ್‌ ರಸಿಕ. ರವಿಚಂದ್ರನ್‌ ಕನಸುಗಾರ. ರವಿಚಂದ್ರನ್‌ ರಣಧೀರ. ರವಿಚಂದ್ರನ್‌ ಮೋಜುಗಾರ, ರವಿಚಂದ್ರನ್‌ ಚೆಲುವ-ಹೀಗಾಗಿಯೇ ಅವರ ಚಿತ್ರಗಳ ಬಗ್ಗೆ ಅಪಾರ ನಿರೀಕ್ಷೆ. ಪ್ರೇಮಲೋಕದ ಗುಂಗಿನಲ್ಲಿಯೇ ಇರುವ ರವಿ ಮತ್ತು ಅವರ ಪ್ರೇಕ್ಷಕರಿಗೆ ಎರಡನೇ ಪ್ರೇಮಲೋಕವನ್ನು ಕಾಣುವ ಬಯಕೆ. ಆ ಪರಿಣಾಮವೇ ಮೂಡುತ್ತಿದೆ- ಅಹಂ ಪ್ರೇಮಾಸ್ಮಿ.

ದಾಖಲೆಗಳ ಕತೆ ಬರೆಯುವಲ್ಲಿ ರವಿಚಂದ್ರನ್‌ ಎತ್ತಿದೆ ಕೈ. ಬಿಡುಗಡೆಗೆ ಮೊದಲೇ ಅಹಂ ಪ್ರೇಮಾಸ್ಮಿಯ ಪ್ರೇಮದ ಅಲೆ ಎಲ್ಲೆಲ್ಲೂ ಸುನಾಮಿಗಿಂತಲೂ ವ್ಯಾಪಕವಾಗಿದೆ. ಕ್ಯಾಸೆಟ್‌ ಪ್ರಪಂಚದ ಎಲ್ಲ ದಾಖಲೆಗಳು ಈಗ ಚಿಂದಿಚಿಂದಿಯಾಗಿವೆ. ಮೊದಲ ವಾರವೇ ಮೂರು ಲಕ್ಷ ಕ್ಯಾಸೆಟ್‌ಗಳು ಖಾಲಿಯಾಗಿವೆ.

ಕನ್ನಡ ಚಿತ್ರಗಳ 3000 ಸಿ.ಡಿ.ಮಾರಾಟವಾಗುವುದೇ ಕಷ್ಟ ಎನ್ನುವ ಪರಿಸರದಲ್ಲಿ ಆಹಂ ಪ್ರೇಮಾಸ್ಮಿಯ 60,000 ಸಿ.ಡಿಗಳು ಮಾರಾಟವಾಗಿವೆ. ಈಗಲೂ ಕ್ಯಾಸೆಟ್‌ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌. ಬುಕಿಂಗ್‌ ಮುಂದುವರೆದಿದೆ. ಹಂಸಲೇಖ ಇಲ್ಲದಿದ್ದರೂ ರವಿ-ಚಂದ್ರ ಮೂಡ ಬಲ್ಲ...ಬೆಳಕನ್ನು ಚೆಲ್ಲಬಲ್ಲ!

ಪೈರಸಿ ವಿರುದ್ಧ ಸಮರ ಸಾರಿರುವ ರವಿಚಂದ್ರನ್‌, ಚಿತ್ರದ ಕ್ಯಾಸೆಟ್‌ಗಳ ಮಾರಾಟಕ್ಕೆ ಮಾಡಿದ್ದ ಐಡಿಯಾ ಸೂಪರ್‌ ಸಕ್ಸಸ್‌ ಆಗಿದೆ. ಕ್ಯಾಸೆಟ್‌ ಅಂಗಡಿಗಳು ಅಸಲಿಗಿಂತಲೂ ನಕಲಿ ಕ್ಯಾಸೆಟ್‌ ಮಾರುವುದೇ ಹೆಚ್ಚು ಎನ್ನುವ ರವಿಚಂದ್ರನ್‌, ಅಹಂ ಪ್ರೇಮಾಸ್ಮಿಯನ್ನು ಎಲ್ಲರ ಮನೆಮನೆಯನ್ನು ತಲುಪುವ ಕೇಬಲ್‌ ಆಪರೇಟರ್‌ಗಳ ಮೂಲಕ ತಲುಪಿಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಧ್ವನಿಸುರುಳಿ ಮಾರುಕಟ್ಟೆಗೆ ಬಂದ ಮಾರನೇ ದಿನವೇ ರವಿ, ಪೋಲೀಸರೊಂದಿಗೆ ಕ್ಯಾಸೆಟ್‌ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಲಕ್ಷಮೌಲ್ಯದ ನಕಲಿ ಕ್ಯಾಸೆಟ್‌ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

‘ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ... ಚಿತ್ರಗಳ ಸಂಗೀತವನ್ನು ಕೇಳೋರಿಲ್ಲ’ ಅನ್ನೋ ಡೈಲಾಗ್‌ ಬಗ್ಗೆ ರವಿಚಂದ್ರನ್‌ಗೆ ವಿಪರೀತ ಸಿಟ್ಟು. ಮಿತಿಮೀರಿದ ಪೈರಸಿಯಿಂದಾಗಿಯೇ ಕನ್ನಡ ಸಿನಿಮಾ ಕ್ಯಾಸೆಟ್‌ಗಳು ಅಂಗಡಿಯಲ್ಲಿಯೇ ಕೊಳೆಯುತ್ತವೆ ಎನ್ನುತ್ತಾರೆ ರವಿಚಂದ್ರನ್‌.

ಅಹಂ ಪ್ರೇಮಾಸ್ಮಿಯನ್ನು ನೇರವಾಗಿ ಪ್ರದರ್ಶಕರಿಗೆ ನೀಡುವ ಯೋಚನೆ ಅವರಲ್ಲಿದೆ. ‘ಸಣ್ಣ ಊರಲ್ಲೂ ಚಿತ್ರ ಪ್ರದರ್ಶನ ಕಾಣಬೇಕು. ಪಿವಿಆರ್‌ ಮಲ್ಟಿಪ್ಲೆಕ್ಸ್‌ನ ಎಲ್ಲ 11 ಸ್ಕಿೃೕನ್‌ಗಳನ್ನು ನನಗೆ ಕೊಡಲಿ. ಅಲ್ಲಿ ಅಹಂ ಪ್ರೇಮಾಸ್ಮಿ ಪ್ರದರ್ಶಿಸುತ್ತೇನೆ. ಜನ 500ರೂಪಾಯಿ ನೀಡಿ ಯಾಕೆ ಕನ್ನಡ ಸಿನಿಮಾ ನೋಡಲ್ಲ ಅಂತ ನಾನು ನೋಡ್ತೀನಿ’ -ಇದು ರವಿ ಸವಾಲು.

ನಟನೆ, ಕತೆ, ಚಿತ್ರಕತೆ, ಸಾಹಿತ್ಯ, ಸಂಗೀತ, ಸಂಭಾಷಣೆ, ನಿರ್ಮಾಣ, ನಿರ್ದೇಶನದ ಹೊಣೆಯನ್ನು ರವಿಚಂದ್ರನ್‌ ತಲೆ ಮೇಲೆ ಹೊತ್ತಿದ್ದಾರೆ. ಜೊತೆಗೆ ತಮ್ಮ ಸಹೋದರ ಬಾಲಾಜಿಯನ್ನು ನಾಯನನ್ನಾಗಿಸುವ ಭಾರ ಸಹ ಅವರ ಮೇಲಿದೆ.

ಸುಮಾರು 40ಲಕ್ಷ ವೆಚ್ಚದಲ್ಲಿ ಚಿತ್ರಕ್ಕೆ ಡಿಜಿಟಲ್‌ ಗ್ರೇಡಿಂಗ್‌ ಮಾಡಿಸುತ್ತಿದ್ದಾರೆ. ಇಂತಹ ವಿಶೇಷತೆ ಹೊಂದಿದ ಮೊದಲ ಚಿತ್ರ ಪ್ರೇಮಾಸ್ಮಿಯಾಗಲಿದೆ. ಎಲ್ಲವೂ ಸರಿಹೋದರೆ ಚಿತ್ರ ಶಿವರಾತ್ರಿ ಹೊತ್ತಿಗೆ ತೆರೆಗೆ ಬರುತ್ತದೆ. ಬಾಲಾಜಿಗೆ ನಾಯಕಿಯಾಗಿ ಆರತಿ ಛಾಬ್ರಿಯಾ ಚಿತ್ರದಲ್ಲಿದ್ದಾರೆ. ಚಿತ್ರಶೆಣೈ, ಗಣೇಶ್‌, ಶರಣ್‌ ಮತ್ತಿತರರು ತಾರಾ ಬಳಗದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada