»   » ಧಾರವಾಡದಲ್ಲಿ ‘ಮೂಡಲ ಮನೆ’ ಕಳ್ಳುಬಳ್ಳಿಗಳ ಸಂಭ್ರಮ

ಧಾರವಾಡದಲ್ಲಿ ‘ಮೂಡಲ ಮನೆ’ ಕಳ್ಳುಬಳ್ಳಿಗಳ ಸಂಭ್ರಮ

Posted By: Staff
Subscribe to Filmibeat Kannada

ಅದು ಮನೆ ಮಕ್ಕಳ ಸಂಭ್ರಮ. ಊರಿನ ಮಕ್ಕಳ ಗೆಲುವಿಗೆ ಊರಿಗೆ ಊರೇ ಅಭಿಮಾನಿಸುವ ಸಂಭ್ರಮ. 'ಮೂಡಲ ಮನೆ"ಯ ಅರ್ಥಪೂರ್ಣ ಸಂಭ್ರಮ.
ಈಟೀವಿ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುವ 'ಮೂಡಲ ಮನೆ" ಧಾರಾವಾಹಿಯ ತಂಡದೊಂದಿಗೆ, ಫೆ.9ರ ಸೋಮವಾರ ಧಾರವಾಡದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಬಿಂಬದ ವತಿಯಿಂದ ಏರ್ಪಾಡಾಗಿದ್ದ ಈ ಸಂವಾದ ನಡೆದದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ ವೇದಿಕೆಯಲ್ಲಿ . ಅಲ್ಲಿ ಚೆಂಬಳಕಿನ ಕವಿ ಚನ್ನವೀರ ಕಣವಿಯಿದ್ದರು. ನಾಡೋಜ ಪಾಟೀಲ ಪುಟ್ಟಪ್ಪನವರಿದ್ದರು. ಭರ್ತಿ ಜನರಿದ್ದರು.

ಧಾರಾವಾಹಿಯಲ್ಲಿ ಬಿಂಬಿಸಲಾಗುತ್ತಿರುವ ಮಾನವೀಯ ಸಂಬಂಧಗಳ ಕುರಿತು ಕವಿ ಕಣವಿಗೆ ಇನ್ನಿಲ್ಲದ ಮೆಚ್ಚುಗೆ. ಸಂಬಂಧಗಳಲ್ಲಿನ ಸ್ಥಿತ್ಯಂತರಗಳ ಜೊತೆಜೊತೆಗೇ ಘಟನೆಗಳ ಬದಲಾವಣೆಯನ್ನೂ ಮೂಡಲಮನೆ ಸಮರ್ಥವಾಗಿ ಹಿಡಿದಿಟ್ಟಿದೆ ಎಂದು ಕಣವಿ ಬಣ್ಣಿಸಿದರು.

ಉತ್ತರ ಕರ್ನಾಟಕದ ಪ್ರತಿಭೆಗಳು ಮೂಡಲಮನೆಯಲ್ಲಿ ಮಿಂಚುತ್ತಿವೆ. ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಉತ್ತರ ಕರ್ನಾಟಕದ ಭಾಷೆ ಹಾಗೂ ಸೊಗಡನ್ನು ಒಳಗೊಂಡಿರುವ ಮೂಡಲಮನೆಯನ್ನು ನೋಡುವುದೇ ಒಂದು ಚೆಂದ ಎಂದು ಕಣವಿ ಹೇಳಿದರು.

ಪಾಪು ಅವರಿಗೆ 'ಮೂಡಲ ಮನೆ"ಯಲ್ಲಿನ ಭಾಷಾಶಕ್ತಿಯ ಕುರಿತು ಅಭಿಮಾನ. ಉತ್ತರ ಕರ್ನಾಟಕ ಭಾಷೆಯನ್ನು ತಮಾಷೆಯಾಗಿ ಬಳಸುವವರೇ ಹೆಚ್ಚು ಮಂದಿ. ಇಂಥ ಸಂದರ್ಭದಲ್ಲಿ ಧಾರಾವಾಹಿಯ ಶಕ್ತಿಯಾಗಿ ಉತ್ತರ ಕರ್ನಾಟಕದ ಭಾಷೆ ಬಳಕೆಯಾಗುತ್ತಿರುವ ಕುರಿತು ಪಾಪು ತೃಪ್ತಿ ವ್ಯಕ್ತಪಡಿಸಿದರು. ಮೂಡಲಮನೆ ಪಾತ್ರಧಾರಿಗಳು ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದಾರೆ ಎಂದು ಪಾಪು ಶಹಬ್ಭಾಸ್‌ಗಿರಿ ನೀಡಿದರು.

ನಿರ್ದೇಶಕಿ ವೈಶಾಲಿ ಅವರಿಗೆ ಹೃದಯ ತುಂಬಿ ಬಂದ ಸಂದರ್ಭವದು. ವೈಶಾಲಿ ಯಶಸ್ಸನ್ನು ನಿರೀಕ್ಷಿಸಿದ್ದರು. ಆದರೆ, ಇಂಥದೊಂದು ಭಾರೀ ಯಶಸ್ಸು ದೊರೆತ ವಿಸ್ಮಯದಲ್ಲಿ ತಮ್ಮ ಜವಾಬ್ದಾರಿ ಹೆಚ್ಚಿರುವುದರ ಅರಿವೂ ಅವರಿಗಿದೆ.

ಮೂಡಲಮನೆಯ ಕಳ್ಳುಬಳ್ಳಿಗಳ ಪಾತ್ರದಲ್ಲಿ ಮಿಂಚಿರುವ ಕೆ.ಎಸ್‌.ಎಲ್‌.ಸ್ವಾಮಿ, ಸುನೀಲ್‌ ಪುರಾಣಿಕ್‌, ರೇಣುಕಮ್ಮ ಮುರುಗೋಡ್‌, ಅನಂತ ದೇಶಪಾಂಡೆ, ಸುಜಾತ, ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಲ್ಲಿ ಕೇಳಿಬಂದದ್ದು ಅದೇ ಹಾಡು- 'ಮರದ ಎಲಿ ನೆರಳು ಮನಿಯ ಗೋಡೆ ಮೇಲೆ ಹಾಡುತಾವ ಆಟ / ಮೂಡ್ಯಾವ ತೊಗಲು ಗೊಂಬಿಯಾಟ." (ಇನ್ಫೋ ವಾರ್ತೆ)

English summary
Warm exchange of views on Kannada television serial Moodalamane
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada