»   » ಪುಷ್ಪೋದ್ಯಮದಿಂದ ಸಿನಿಮಾದತ್ತ ಮನೋಹರ್‌ ಪಯಣ

ಪುಷ್ಪೋದ್ಯಮದಿಂದ ಸಿನಿಮಾದತ್ತ ಮನೋಹರ್‌ ಪಯಣ

Subscribe to Filmibeat Kannada


ಕನ್ನಡ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದೆ... ನಟರು, ನಟಿಯರು, ಛಾಯಾಗ್ರಾಹಕರು ನಿರ್ದೇಶಕರು ಹಾಗೂ ನಿರ್ಮಾಪಕರು ಹೀಗೆ ಎಲ್ಲ ವಿಭಾಗಗಳಲ್ಲೂ ಹೊಸಬರ ದಂಡು ಪ್ರವೇಶ ಮಾಡಿದೆ. ಅವರ ಪ್ರಯತ್ನವೂ ಪ್ರಶಂಸಾರ್ಹವಾಗಿರುವುದರಿಂದ ಪ್ರೇಕ್ಷಕರು ಮೆಚ್ಚಿಕೊಂಡು ಯಶಸ್ಸಿನ ಧಾರೆಯೆರೆಯುತ್ತಿದ್ದಾರೆ...

ಇದೀಗ ‘ಒರಟ ಐ ಲವ್‌ ಯೂ’ ಚಿತ್ರದ ಮೂಲಕ ಮತ್ತೊಂದು ಹೊಸಬರ ದಂಡು ಚಿತ್ಯೋದ್ಯಮಕ್ಕೆ ಲಗ್ಗೆ ಇಟ್ಟಿದೆ. ಈ ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿರುವವರು ಸಿ.ಆರ್‌.ಮನೋಹರ್‌. ಇವರು ಮೂಲತಃ ಪುಷ್ಪೋದ್ಯಮಿ. ಅದರಲ್ಲೂ ಗುಲಾಬಿ ಕೃಷಿಕ. ಅತಿಹೆಚ್ಚು ಪ್ರಮಾಣದಲ್ಲಿ ಗುಲಾಬಿ ಹೂ ರಫ್ತು ಮಾಡುವ ಬೆಂಗಳೂರಿಗ ಎಂಬ ಖ್ಯಾತಿ. ಇದಕ್ಕಾಗಿ ಪ್ರಶಸ್ತಿಯಾಂದನ್ನೂ ಪಡೆದಿದ್ದಾರೆ.

ಒಟ್ಟು 150 ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯವ ಮನೋಹರ್‌, ತಮ್ಮ ವ್ಯವಹಾರವನ್ನು ರಿಯಲ್‌ ಎಸ್ಟೇಟ್‌ನತ್ತಲೂ ಕೊಂಡೊಯ್ದಿದ್ದಾರೆ. ಬಿಎಚ್‌ಇಎಲ್‌ ಮತ್ತು ಟೆಲಿಕಾಮ್‌ ಇಲಾಖೆಗಳಿಗೆ ಲೇಔಟ್‌ಗಳನ್ನು ನಿರ್ಮಿಸಿದ್ದಾರೆ. ಮನೋಹರ್‌ ವಾರ್ಷಿಕ ವ್ಯವಹಾರ ಸುಮಾರು 250ಕೋಟಿ ರೂಪಾಯಿ.

ಇಷ್ಟೆಲ್ಲ ಹಿನ್ನೆಲೆಯುಳ್ಳ ಅವರು ಚಿತ್ರೋದ್ಯಮದತ್ತ ವಾಲಿದ್ದು, ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಭರವಸೆಯೇ ಹೌದು. ಈ ಚಿತ್ರದ ಮೂಲಕ ಶ್ರೀನಿವಾಸ್‌ ಎಂಬುವವರು ಮೊದಲ ಬಾರಿಗೆ ನಿರ್ದೇಶಿಸುವ ಅವಕಾಶ ಪಡೆದಿದ್ದಾರೆ. ಚಿತ್ರದ ತಾರಾಬಳಗವೂ ಹೊಸಬರಿಂದಲೇ ಕಂಗೊಳಿಸುತ್ತಿದೆ.

ಶ್ರೀನಿವಾಸ್‌ ಮನೆಮಂದಿಯೆಲ್ಲಾ ಕುಳಿತು ಆನಂದಿಸುವ ಅತ್ಯುತ್ತಮ ಚಿತ್ರ ನಿರ್ದೇಶಿತ್ತಾರೆಂಬ ನಂಬಿಕೆ ಇದೆ. ಬೇರೆಯವರನ್ನು ಅನುಕರಿಸುವ ಬದಲಿಗೆ ಸಹಜ ಹರಿವಿನ ಚಿತ್ರಗಳು ನನಗೆ ಇಷ್ಟವಾಗುತ್ತವೆ. ಶ್ರೀನಿವಾಸ್‌ ಹೇಳಿದ ಕಥೆ ಇಷ್ಟವಾಯ್ತು. ಅವರು ಹೇಳಿರುವ ರೀತಿಯಲ್ಲೇ ಕಥೆ ಬೆಳ್ಳಿತೆರೆಯಲ್ಲಿ ಮೂಡಿಬಂದರೆ ಹೃದಯಸ್ಪರ್ಶಿಯಾಗಿರುತ್ತದೆ ಎಂದು ಮನೋಹರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಚಿತ್ರದ ಫಲಿತಾಂಶ ನೋಡಿಕೊಂಡು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಚಿತ್ರಗಳನ್ನು ಕೈಗೆತ್ತಿಕೊಳ್ಳುವ ಇರಾದೆ ಮನೋಹರ್‌ ಅವರಿಗಿದೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಚಿತ್ರ ನಿರ್ಮಾಣ ಮಾಡುವ ಯೋಚನೆಯೂ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada