»   » ಕಮಲ್‌ ಸಿಗರೇಟು ಬಿಟ್ಟಿದ್ದಾರೆ, ಸಿನಿಮಾದಲ್ಲಿ ಮಾತ್ರ!

ಕಮಲ್‌ ಸಿಗರೇಟು ಬಿಟ್ಟಿದ್ದಾರೆ, ಸಿನಿಮಾದಲ್ಲಿ ಮಾತ್ರ!

Subscribe to Filmibeat Kannada

*ಶಿವ

ಇನ್ನು ಮುಂದೆ ಸಿನಿಮಾದಲ್ಲಿ ಸಿಗರೇಟು ಹಚ್ಚೋದಿಲ್ಲ ಅಂತ ಕಮಲ ಹಾಸನ್‌ ಸಂಕಲ್ಪ ಮಾಡಿದ್ದಾರೆ. ಹಾಗಂತ ಕೆಮೆರಾ ಮುಂದಿಲ್ಲದಿದ್ದಾಗ ಅವರು ಸಿಗರೇಟು ಸೇದೋದಿಲ್ಲ ಎಂದೇನೂ ಅಂದುಕೊಳ್ಳುವ ಅಗತ್ಯವಿಲ್ಲ.

ಹೆಂಡತಿ ಸಾರಿಕಾಗೆ ಡೈವೊರ್ಸ್‌ ಕೊಟ್ಟು, ಈಗ ಆಕೆ ತಮಿಳು ಸಿನಿಮಾವೊಂದರ ಒಂದೇ ಒಂದು ಹಾಡಿಗೆ ಕುಣಿಯಲು ಒಪ್ಪಿಕೊಂಡಿರುವುದರಿಂದ ತುಸುವೂ ಇರುಸು ಮುರುಸು ತೋರದ ಕಮಲ್‌ ಹೊಸ ಕಳಕಳಿ ಮೆಚ್ಚತಕ್ಕದ್ದು. ಕ್ಯಾನ್ಸರ್‌ ರೋಗಿಗಳಿಗೆ ಪುಕ್ಕಟೆ ಚಿಕಿತ್ಸೆ ಕೊಡುವ ಅದ್ಯಾರ್‌ ಸಂಸ್ಥೆಗೆ ತಮ್ಮ ಸಿನಿಮಾ ಸಂಭಾವನೆಯಲ್ಲೂ ಒಂದು ಪಾಲು ಕೊಡುತ್ತಿರುವ ಕಮಲ್‌ಗೆ ತಮ್ಮ ಸಾಮಾಜಿಕ ಹೊಣೆಗಾರಿಕೆ ಏನೆಂಬುದು ಇತ್ತೀಚೆಗೆ ಚೆನ್ನಾಗಿ ಗೊತ್ತಾಗಿದೆ.

ಅವರು ಹೇಳುತ್ತಾರೆ- ‘ನನ್ನ ಒಂದು ಸಿನಿಮಾದ ಒಂದು ಪ್ರದರ್ಶನವನ್ನು 5 ಸಾವಿರ ಅಭಿಮಾನಿಗಳು ನೋಡುತ್ತಾರೆ. ಈ ಪೈಕಿ 1 ಸಾವಿರ ಮಂದಿ ನನ್ನನ್ನು ಅನುಕರಿಸಲು ಹೊರಡುತ್ತಾರೆ. ನಾನು ಹುಡುಗಿಯನ್ನು ಛೇಡಿಸುವ ರೀತಿಯನ್ನೇ ಅವರೂ ಜಾರಿಗೆ ತರುತ್ತಾರೆ. ಸಿಗರೇಟು ಬಾಯಿಗಿಟ್ಟರೆ, ಅವರೂ ಅದನ್ನೇ ಮಾಡುತ್ತಾರೆ. ಮುಗ್ಧ ಯುವಕರ ಬಾಯಿಗೆ ಸಿಗರೇಟು ಇಡುವಂತಹ ಪಾತ್ರಗಳನ್ನು ಮಾಡದಿದ್ದರೆ ನಾನೇನೂ ಕಳೆದುಕೊಳ್ಳೋದಿಲ್ಲ. ಅದಕ್ಕೇ ಇನ್ನು ಮುಂದೆ ನನ್ನ ಸಿನಿಮಾದಲ್ಲಿ ಸಿಗರೇಟು ಸೇದುವ ಕಮಲ್‌ ಇರೋದಿಲ್ಲ.’

ಕ್ಯಾನ್ಸರ್‌ಗೆ ತಮ್ಮ ಬಳಗದ ಕೆಲವು ಸ್ನೇಹಿತರು ಬಲಿಯಾಗಿದ್ದೇ ಕಮಲ್‌ ಈ ಕಳಕಳಿಗೆ ಕಾರಣವಂತೆ. ಹೀಗೆ ಬಲಿಯಾದವರ ಪೈಕಿ ಒಬ್ಬ ಗೆಳೆಯನ ವಯಸ್ಸು ಬರೀ ಇಪ್ಪತ್ತೊಂಬತ್ತಾಗಿತ್ತಂತೆ. ಅಂದಿನಿಂದ ಮಮ್ಮಲ ಮರುಗಿದ ಕಮಲ್‌ ಮನಸ್ಸು ಸಿನಿಮಾದಲ್ಲಿ ಸಿಗರೇಟು ಸೇದದಿರಲು ತೀರ್ಮಾನಿಸಿತಂತೆ.

ಸಿನಿಮಾದಲ್ಲಷ್ಟೇ ಅಲ್ಲದೆ ವಯಸ್ಸಿಗೆ ಬರುತ್ತಿರುವ ತಮ್ಮ ಹೆಣ್ಣು ಮಕ್ಕಳ ಮುಂದೆಯೂ ಸಿಗರೇಟು ಸೇದದಿರಲು ಅವರು ತೀರ್ಮಾನಿಸಿದ್ದಾರೆ. ಅಪ್ಪಂದಿರನ್ನು ನೋಡಿ ಸಿಗರೇಟು ಸೇದುವ ಹೆಣ್ಣು ಮಕ್ಕಳೂ ಈಚೆಗೆ ಹೆಚ್ಚಾಗುತ್ತಿದ್ದಾರೆ ಅನ್ನುವುದು ಕಮಲ್‌ ಅಬ್ಸರ್ವೇಷನ್ನು.

ಅದಿರಲಿ, ಸಾರಿಕಾಗೆ ಡೈವೊರ್ಸ್‌ ಕೊಟ್ಟಿದ್ದು, ಸಿಮ್ರಾನ್‌ ಜತೆ ಖುಲ್ಲಂಖುಲ್ಲಾಂ ಸುತ್ತಾಡಿದ್ದು... ಹೀಗೆ ಹೂವಿಂದ ಹೂವಿಗೆ ಹಾರುವ ದುಂಬಿಯಂಥಾ ಕಮಲ್‌ ಅವತಾರವನ್ನು ಯಾರಾದರೂ ಅಭಿಮಾನಿ ಅನುಕರಿಸಿದರೆ ? ದೇವರೇ ಗತಿ.

ಬಾಲಂಗೋಚಿ : ಸಿನಿಮಾದಲ್ಲೇನು, ನಿಜ ಜೀವನದಲ್ಲೂ ಕಮಲ್‌ ಮನಸ್ಸು ಮಾಡಿದರೆ ಸಿಗರೇಟನ್ನು ಬಿಡಬಹುದು! ಹೆಂಡತಿಯನ್ನೇ ಬಿಡುವವರಿಗೆ ಸಿಗರೇಟು ಯಾವ ಲೆಕ್ಕ ?

Post your views

ಕಮಲ ದಳಗಳು...
ಬೇಡ ಬೇಡ ಕಮಲ್‌ ಎಂಬ ಬೆಂಕಿಯ ಸಂಗ : ವಾಣಿ ಗಣಪತಿ ಎಚ್ಚರಿಕೆ
ಯಾವ ಹೂವು ಯಾರ ಮುಡಿಗೋ... ಸಿಮ್ರಾನ್‌ ಪ್ರೇಮ ಯಾರಿಗೋ..
ಭೂಗತಲೋಕ- ಬಾಲಿವುಡ್‌ಗೆ 15 ವರ್ಷಗಳ ನಂಟು- ಕಮಲ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada