»   » ಬೆಂಗಳೂರಲ್ಲಿ ಜನರಲ್‌ ಮುಷರ್ರಫ್‌!?

ಬೆಂಗಳೂರಲ್ಲಿ ಜನರಲ್‌ ಮುಷರ್ರಫ್‌!?

Posted By: Staff
Subscribe to Filmibeat Kannada

ಯಾಕೆ ಬರಬಾರದು ! ಇದು ಚುನಾವಣಾ ಸಮಯವಲ್ಲವಾ ; ಒಂದೆಡೆ ರಾಜಕಾರಣಿಗಳ ಹಿಂಡು, ಇನ್ನೊಂದೆಡೆ ಸಿನಿಮಾ ನಟನಟಿಯರ ದಂಡು ಸಿಕ್ಕಸಿಕ್ಕಲ್ಲೆಲ್ಲ ಎಡತಾಕುತ್ತಿರುವಾಗ ಮುಷರ್ರಫ್‌ ಬೆಂಗಳೂರಿಗೆ ಬಂದರೆ ಏನಾಶ್ಚರ್ಯ ! ವಾಜಪೇಯಿ ಜೊತೆ ಸ್ನೇಹಹಸ್ತ ಚಾಚಿರುವ ಮುಷರ್ರಫ್‌ ಚುನಾವಣಾ ಪ್ರಚಾರಕ್ಕಾಗಿ ಬಂದರಾ ?

ಸ್ವಲ್ಪ ನಿಧಾನ. ಕಲ್ಪನೆ ಚೆನ್ನಾಗಿದೆ. ಆದರೆ ಮುಷರ್ರಫ್‌ ಬಂದಿರುವುದು ರಾಜಕೀಯ ಪ್ರಚಾರಕ್ಕಲ್ಲ , ಸಿನಿಮಾದ ನಟನೆಗೆ. ಅಸಲಿಗೆ ಈತ ಮುಷರ್ರಫ್‌ ಅಲ್ಲವೇ ಅಲ್ಲ . ನಕಲಿ ಮುಷರ್ರಫ್‌ ! ಪಾಕಿಸ್ತಾನದ ಅಧ್ಯಕ್ಷ ಮುಷರಫ್‌ರನ್ನು ಹೋಲುವ ಈತನ ಹೆಸರು ಕ್ಯಾಪ್ಟನ್‌ ದೀಪಕ್‌ ಪಿ. ದಿವಾಕರ್‌. ಸದ್ಯಕ್ಕೆ ಶಿವರಾಜ್‌ಕುಮಾರ್‌ ನಾಯಕರಾಗಿ ಅಭಿನಯಿಸುತ್ತಿರುವ 'ಸಾರ್ವಭೌಮ" ಚಿತ್ರದಲ್ಲಿ ದೀಪಕ್‌ ನಟಿಸುತ್ತಿದ್ದಾರೆ.

ಇದು ದೀಪಕ್‌ ಅವರ ಮೊದಲ ಕನ್ನಡ ಚಿತ್ರ. 'ಅಗ್ನಿ ಪಂಖ್‌" ಹಿಂದಿ ಚಿತ್ರದಲ್ಲೂ ಅವರು ಮುಷರಫ್‌ ಪಾತ್ರವನ್ನೇ ಮಾಡಿದ್ದರು. ಆದರೆ ಅವರಿರುವ ದೃಶ್ಯಗಳಲ್ಲಿ 80% ಸೆನ್ಸಾರ್‌ ಮಂಡಳಿಯ ಕತ್ತರಿಯ ಅಲುಗಿಗೆ ಸಿಕ್ಕಿತ್ತು. ಹಾಲಿವುಡ್‌ ಚಿತ್ರ 'The Soil'ನಲ್ಲಿ ನಟಿಸಲು ಕೂಡ ಈ ಮುಷರ್ರಫ್‌ ರೂಪಿ ಒಪ್ಪಿಕೊಂಡಿದ್ದಾರೆ ಎನ್ನುವುದು ನಿಮಗೆ ಗೊತ್ತಿರಲಿ. ಆ ಚಿತ್ರದಲ್ಲೂ ಇವರದು ಮುಷರಫ್‌ ಪಾತ್ರವೇ ಆಗಿದೆ.

'ಸಾರ್ವಭೌಮ" ಚಿತ್ರದ ನಿರ್ದೇಶಕರಾದ ಮಹೇಶ್‌ ಸುಖಧರೆ ಪಾಕಿಸ್ತಾನದ ಜೈಲಿನಲ್ಲಿ 21 ವರ್ಷ ಇದ್ದು ಬಂದ ಸಾಗರದ ನಾರಾಯಣ್‌ ಎಂಬುವರನ್ನು ಕರೆ ತಂದು ಅಬ್ಬಾಯಿ ನಾಯ್ಡು ಸ್ಟುಡಿಯೋವನ್ನೇ ಪಾಕಿಸ್ತಾನದ ಜೈಲಾಗಿ ಪರಿವರ್ತಿಸಿದ್ದಾರೆ. ಬಿಜೆಪಿಯ ಪರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕ್ಯಾಪ್ಟನ್‌ ದೀಪಕ್‌ ಅವರು ಬಿಡುವು ಮಾಡಿಕೊಂಡು ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಹಂಸಲೇಖ ಅವರ ಸಂಗೀತ, ಪಂಚಿಂಗ್‌ ಸಂಭಾಷಣೆಗಳಿಗೆ ಹೆಸರಾಗಿರುವ ಬಿ.ಎ. ಮಧು ಅವರ ಸಂಭಾಷಣೆ 'ಸಾರ್ವಭೌಮ" ಚಿತ್ರಕ್ಕಿದೆ. ತಾರಾಗಣದಲ್ಲಿ ಮಯೂರಿ, ಶಿಲ್ಪಾ ಶಿವಾನಂದ್‌, ಉಮೇಶ್‌, ರಮೇಶ್‌, ರಂಗಾಯಣ ರಘು, ಸುಮಿತ್ರಾ ಇದ್ದಾರೆ.

ಮತ್ತೊಂದು ವಿಷಯ. ಕ್ಯಾಪ್ಟನ್‌ ದೀಪಕ್‌ಗೆ ಸಿನಿಮಾದಲ್ಲಷ್ಟೇ ಅಲ್ಲ , ರಾಜಕೀಯದಲ್ಲೂ ಬೇಡಿಕೆಯುಂಟು. ಪ್ರಸ್ತುತ ಅವರು ಕಮಲಧಾರಿ! ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ.

English summary
Duplicate Musharraf in Sarvabowma
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada