»   » ಪಲ್ಲಕ್ಕಿ ಚಿತ್ರಕ್ಕೆ ಗುರು ಕಿರಣ್‌ ಸ್ವರಸಿಂಚನ

ಪಲ್ಲಕ್ಕಿ ಚಿತ್ರಕ್ಕೆ ಗುರು ಕಿರಣ್‌ ಸ್ವರಸಿಂಚನ

Subscribe to Filmibeat Kannada


ಗುರುಕಿರಣ್‌ ಸಂಗೀತ ತನ್ನ ಕಂಪನ್ನು ಪೂರ್ಣವಾಗಿ ಬೀರದಿದ್ದರೂ, ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ. ಈ ಚಿತ್ರಕ್ಕೆ ಕವಿರಾಜ್‌ ಒದಗಿಸಿರುವ ಸಾಹಿತ್ಯ ಒಮ್ಮೆಯಾದರೂ ಸಂಗೀತ ಪ್ರೇಮಿಗಳ ಕಾಡದೇ ಬಿಡದು.

  • ಚೇತನ್‌. ಬಿ. ಎಸ್‌, ಬೆಂಗಳೂರು
ಕನ್ನಡ ಚಿತ್ರಪ್ರೇಮಿಗಳ ಭರವಸೆಯ ನಟ ಪ್ರೇಮ್‌ ಕುಮಾರ್‌ ಹಾಗೂ ಪಂಜಾಬಿ ಬೆಡಗಿ ರಮನೀತೋ ಚೌಧರಿ ಅಭಿನಯದ ಪಲ್ಲಕಿ ಚಿತ್ರವನ್ನು ಎಲ್ಲರೂ ಕಾತುರದಿಂದ ಕಾದಿದ್ದಾರೆ. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಪಲ್ಲಕ್ಕಿಯ ಆಡಿಯೋ ಕ್ಯಾಸೆಟ್‌ ಬಿಡುಗಡೆ ಮಾಡಿ, ಪ್ರೇಮ್‌ ಕುಮಾರ್‌ಗೆ ಹಾಗೂ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಝೆಂಕಾರ್‌ ಮ್ಯೂಸಿಕ್‌ ಸಂಸ್ಥೆ ಹೊರತಂದಿರುವ ಪಲ್ಲಕ್ಕಿ ಚಿತ್ರದ ಹಾಡುಗಳನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ನಿರ್ದೇಶಿಸಿದ್ದಾರೆ. ಈ ಆಲ್ಬಂ ನಲ್ಲಿ 7 ಹಾಡುಗಳಿವೆ.

‘ಬಿಡು ಬಿಡು . . .’ ಎಂಬ ಸುಮಧುರ ಮೊದಲ ಹಾಡನ್ನು ಹೃದಯ ಶಿವ ರಚಿಸಿದ್ದು, ರಾಜೇಶ್‌ ಕೃಷ್ಣನ್‌ ಹಾಗೂ ಚಿತ್ರಾರವರ ದನಿಯಲ್ಲಿ ಇಂಪಾಗಿ ಮೂಡಿಬಂದಿದೆ.

ಚಿತ್ರಾ ಹಾಡಿರುವ ‘ಓ ಪ್ರಿಯ...’ ಎಂಬ ವಿರಹಗೀತೆ ನೆನಪಿನಲ್ಲಿ ಉಳಿಯಬಲ್ಲದು, ಇದಕ್ಕೆ ಕವಿರಾಜ್‌ ಅವರು ಸಾಹಿತ್ಯ ಒದಗಿಸಿದ್ದಾರೆ.

‘ಕಣ್ಣಲ್ಲೂ ನೀನೇ. .’ ಎಂದು ಗುರುಕಿರಣ್‌ ಹಾಡಿರುವ ಹಾಡು ಹಿಂದಿ ಪಾಪ್‌ ಗಾಯಕ ಹಿಮೇಶ್‌ ರೇಷಮಿಯಾನನ್ನು ನೆನಪಿಸುತ್ತದೆ. ವಿ ಮನೋಹರ್‌ ಯಾಕೋ ಸ್ವಾರಸ್ಯವಾದ ಸಾಹಿತ್ಯ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಹಾಡು ನಿಧಾನಗತಿಯಲ್ಲಿದ್ದರೂ ಬೀಟ್ಸ್‌ ಜತೆ ಸೇರಿ ಸಾಹಿತ್ಯಕ್ಕೆ ಹೊಂದಿಕೆ ಇಲ್ಲದಂತಾಗಿದೆ.

ಕನ್ನಡ ನಾಡಿನ ವಿವಿಧ ಸ್ಥಳಗಳ ಪರಿಚಯಿಸುವ ವೈಶಿಷ್ಟ್ಯದ ಹಾಡು ‘ಅಯ್ಯಾ ಕಣೋ . . . ‘ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಸ್ವರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಆದರೆ ಶಿವನಂಜೇಗೌಡರ ಸಾಹಿತ್ಯ ಇನ್ನೂ ಪಳಗಿಲ್ಲ ಎನಿಸುತ್ತದೆ.

‘ಓ ಪ್ರಿಯ...’ ಎಂಬ ವಿರಹಗೀತೆ ಮತ್ತೆ ಅಸ್ಲಂ ಅವರ ದನಿಯಲ್ಲಿ ಮೂಡಿಬಂದಿದೆ. ಅಸ್ಲಂ ಆವರ ಹಾಡಿನ ದಾಟಿ ಸೊಗಸಾಗಿದ್ದು, ಭರವಸೆ ತುಂಬುತ್ತಾರೆ. ಕವಿರಾಜ್‌ ಅವರು ಸಾಹಿತ್ಯ ಚೆನ್ನಾಗಿದೆ.

ಕವಿರಾಜ್‌ ಬರೆದಿರುವ ಮತ್ತೊಂದು ಗೀತೆ ‘ಇಂಥಾ ಶಾಪ. . .’ ಎಂಬ ಹಾಡನ್ನು ಚೇತನ್‌ ಹಾಡಿದ್ದಾರೆ. ಪ್ರೇಮಿಕೆಗೆ ತನ್ನ ಕಷ್ಟ ಹೇಳಿಕೊಳ್ಳುವ ಪ್ರೇಮಿಯ ಪರಿಯನ್ನು ಸರಿಯಾಗಿ ಕವಿರಾಜ್‌ ಮೂಡಿಸಿದ್ದಾರೆ.

‘ಗೋಲಿ ಮಾರೋ. . .’ ಹಾಡನ್ನು ಕಾರ್ತಿಕ್‌ ಹಾಡಿದ್ದು, ಕಾಳೆಯುವ ಜನರನ್ನು ಮೆಟ್ಟಿ ನಿಲ್ಲುವ ಬಗ್ಗೆ ಇದೆ. ಇದಕ್ಕೂ ಕವಿರಾಜ್‌ ಉತ್ತಮ ಸಾಹಿತ್ಯ ಒದಗಿಸಿದ್ದಾರೆ.

ಗುರುಕಿರಣ್‌ ಸಂಗೀತ ತನ್ನ ಕಂಪನ್ನು ಪೂರ್ಣವಾಗಿ ಬೀರದಿದ್ದರೂ, ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ. ಒಮ್ಮೆ ಕ್ಯಾಸೆಟ್‌ ಕೊಂಡು ಆಲಿಸಿರಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada