»   » ಎಚ್‌ಟುಒ ಈಗ ಸಂಪೂರ್ಣ ಕನ್ನಡ ಚಿತ್ರ

ಎಚ್‌ಟುಒ ಈಗ ಸಂಪೂರ್ಣ ಕನ್ನಡ ಚಿತ್ರ

Posted By: Super
Subscribe to Filmibeat Kannada

ರವಿಚಂದ್ರನ್‌ ಅಭಿನಯದ ಏಕಾಂಗಿ ಪರಿಷ್ಕೃತಗೊಂಡು ಪ್ರೇಕ್ಷಕರೆದುರಿಗಿದ್ದರೆ, ಉಪೇಂದ್ರ ಅಭಿನಯದ ಎಚ್‌ಟುಒ ಪರಿಷ್ಕೃತ ಆವೃತ್ತಿ ಕೂಡ ಪ್ರದರ್ಶನಕ್ಕೆ ಸಿದ್ಧವಾಗಿದೆ. ಅಲ್ಲಿಗೆ ಒಂದರ ಹಿಂದೆ ಒಂದು ತೆರೆಗೊಂಡ ಬಹು ನಿರೀಕ್ಷೆಯ ಭಾರೀ ಬಜೆಟ್‌ನ ಎರಡೂ ಚಿತ್ರಗಳು ಹೊಸ ರೂಪ ಹೊಂದಿದಂತಾಯಿತು.

ಎಚ್‌ಟುಒ ಸಿನಿಮಾ ನಿರ್ಮಾಪಕ ಧನರಾಜ್‌ ಅವರಿಗೀಗ ನಿರಾಳ. ಎಚ್‌ಟುಒ ಪರಿಷ್ಕೃತ ಆವೃತ್ತಿಯನ್ನು ವೀಕ್ಷಿಸಿರುವ ಕನ್ನಡ ಚಳವಳಿಕಾರ ವಾಟಾಳ್‌ ನಾಗರಾಜ್‌ ಹಾಗೂ ಕನ್ನಡ ಹಿತರಕ್ಷಣಾ ವೇದಿಕೆಯ ಜಾಣಗೆರೆ ವೆಂಕಟರಾಮಯ್ಯ ತೃಪ್ತಿ ವ್ಯಕ್ತಪಡಿಸಿದ್ದು , ಚಿತ್ರ ಪ್ರದರ್ಶನ ಕುರಿತು ವ್ಯಕ್ತಪಡಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದಿದ್ದಾರೆ.

ಎಚ್‌ಟುಒ ಚಿತ್ರದಲ್ಲಿನ ತಮಿಳು ಸಂಭಾಷಣೆಯನ್ನು ಧನರಾಜ್‌ ಈಗ ಕನ್ನಡೀಕರಿಸಿದ್ದಾರೆ. ಮೂರು ದಿನಗಳ ಕಾಲ ಅಹೋರಾತ್ರಿ ಕೆಲಸ ಮಾಡಿ ಚಿತ್ರದಲ್ಲಿದ್ದ ಶೇ.40 ರಷ್ಟು ತಮಿಳು ಸಂಭಾಷಣೆಯನ್ನು ಕನ್ನಡಕ್ಕೆ ಬದಲಿಸಲಾಗಿದೆ. ಮೊದಲ ಎರಡು ರೀಲ್‌ಗಳನ್ನು ಹೊರತು ಪಡಿಸಿದರೆ, ನಂತರದ 12 ರೀಲ್‌ಗಳಿಗೂ ಮತ್ತೆ ಡಬ್ಬಿಂಗ್‌ ಮಾಡಲಾಗಿದೆ. .

ಎಚ್‌ಟುಒ ಪರಿಷ್ಕೃತ ಆವೃತ್ತಿಯ ಕುರಿತು ತೃಪ್ತಿ ವ್ಯಕ್ತಪಡಿಸಿರುವ ಜಾಣಗೆರೆ ವೆಂಕಟರಾಮಯ್ಯ- ಚಿತ್ರದಲ್ಲಿನ ತಮಿಳು ಸಂಭಾಷಣೆಗಳು ಕನ್ನಡಿಗರನ್ನು ಕೆರಳಿಸಿದ್ದವು. ತಮಿಳು ಸಂಭಾಷಣೆಯನ್ನು ಕೈ ಬಿಟ್ಟಿದ್ದರಿಂದ ಪರಿಸ್ಥಿತಿ ಈಗ ತಿಳಿಯಾಗಿದೆ ಎಂದು ಹೇಳಿದ್ದಾರೆ.

ತಮಿಳು ಸಂಭಾಷಣೆ ಕೈ ಬಿಟ್ಟದ್ದೇಕೆ-

ಎಚ್‌ಟುಒ ಚಿತ್ರದಲ್ಲಿನ ತಮಿಳು ಸಂಭಾಷಣೆಯನ್ನು ಕೈ ಬಿಡಲಿಕ್ಕೆ ಕನ್ನಡ ಚಳವಳಿಕಾರರ ಪ್ರತಿಭಟನೆ ಮಾತ್ರ ಕಾರಣವಲ್ಲ ಎಂದು ಸ್ಯಾಂಡಲ್‌ವುಡ್‌ ಮೂಲವೊಂದು ಹೇಳುತ್ತಿದೆ. ತಮಿಳು ಸಂಭಾಷಣೆ ಅರ್ಥವಾಗದ ಕಾರಣ ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಎಚ್‌ಟುಒ ಚಿತ್ರ ತೋಪಾಗುವ ಹಾದಿಯಲ್ಲಿದ್ದು, ಈ ಕಾರಣದಿಂದಾಗಿ ಧನರಾಜ್‌ ಚಿತ್ರವನ್ನು ಸಂಪೂರ್ಣ ಕನ್ನಡಮಯಗೊಳಿಸುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ.

English summary
H2O is a pure kannada language film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada