»   » ಅಣ್ಣ ಈ ವರ್ಷವೇ ಬಣ್ಣ ಹಾಕುವರಣ್ಣ

ಅಣ್ಣ ಈ ವರ್ಷವೇ ಬಣ್ಣ ಹಾಕುವರಣ್ಣ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಅಣ್ಣಾವ್ರ ಭಕ್ತಕೋಟಿಯ ಕನಸು ನನಸಾಗಲಿದೆ. ಈ ವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ವರನಟ ಬಣ್ಣ ಹಚ್ಚಲಿದ್ದಾರೆ. ‘ಭಕ್ತ ಅಂಬರೀಶ’ನಾಗಿ ವರನಟ ರಾಜ್‌ಕುಮಾರ್‌ರನ್ನು ಇದಿರು ನೋಡುವ ಕಾಲ ಹತ್ತಿರಾಗಿದೆ. ಖುದ್ದು ಪಾರ್ವತಮ್ಮ ರಾಜ್‌ಕುಮಾರ್‌ ಈ ವಿಷಯವನ್ನು ಚಿತ್ರಲೋಕ ಡಾಟ್‌ ಕಾಂಗೆ ಹೇಳಿದ್ದಾರೆ.

ಒಂದು ವೇಳೆ ವೀರಪ್ಪನ್‌ ಅಣ್ಣಾವ್ರನ್ನು ಅಪಹರಿಸದಿದ್ದರೆ ಇಷ್ಟು ಹೊತ್ತಿಗೆ ‘ಭಕ್ತ ಅಂಬರೀಶ’ನನ್ನು ಅಭಿಮಾನಿಗಳು ಕಣ್ತುಂಬಿಕೊಂಡಾಗಿರುತ್ತಿತ್ತು. 2000ನೇ ಇಸವಿಯಲ್ಲೇ ಈ ಚಿತ್ರದ ಹಾಡಿನ ರೆಕಾರ್ಡಿಂಗ್‌ ಕೆಲಸ ಶುರುವಾಗಿತ್ತು. ಹೀಗಾಗಿ 8 ಹಾಡುಗಳು ಹಾಗೂ 2 ಕಂದ ಪದ್ಯಗಳು ಈಗಾಗಲೇ ಮಿಕ್ಸಿಂಗ್‌ಗೆ ಸಿದ್ಧವಾಗಿವೆ. ಶಸ್ತ್ರಚಿಕಿತ್ಸೆ ನಂತರ ತಮ್ಮ ದೀರ್ಘ ಕಾಲದ ಮಂಡಿನೋವಿನ ತೊಂದರೆಯಿಂದ ಅಣ್ಣಾವ್ರು ಸಂಪೂರ್ಣ ಮುಕ್ತರಾಗಿದ್ದು, ದಿನಂಪ್ರತಿ ಅರ್ಧ ತಾಸು ಪ್ರಾಣಾಯಾಮವನ್ನು ಅವರು ಸಲೀಸಾಗಿ ಮಾಡುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಅವರು ಕ್ಯಾಮರಾ ಮುಂದೆ ನಿಲ್ಲಲು ಸಂಪೂರ್ಣ ಸಿದ್ಧರಾಗಲಿದ್ದಾರೆ ಎಂದು ಹೇಳಿದಾಗ ಪಾರ್ವತಮ್ಮನವರ ಮೊಗದಲ್ಲಿ ಹಳೆಯ ಮಿಂಚಿನ ನಗೆ ಮರುಕಳಿಸಿತು.

‘ಭಕ್ತ ಅಂಬರೀಶ’ನಿಗಾಗಿ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿವೆ. ಬೆಂಗಳೂರು ಹಾಗೂ ಮೈಸೂರು ಅರಮನೆಗಳಲ್ಲಿ ಚಿತ್ರೀಕರಣಕ್ಕೆ ಈಗಾಗಲೇ ಅನುಮತಿ ಪಡೆದಾಗಿದೆ. ಕೇದಾರ ಕೂಡ ಶೂಟಿಂಗ್‌ ಜಾಗೆಗಳಲ್ಲಿ ಒಂದಾಗಿರುವುದರಿಂದ ಚಿತ್ರೀಕರಣ ಕೊಂಚ ವಿಳಂಬವಾಗಲಿದೆ. ಯಾಕೆಂದರೆ, ಮೇ ತಿಂಗಳ ನಂತರವೇ ಕೇದಾರ ಭಕ್ತರಿಗಾಗಿ ತೆರೆದುಕೊಳ್ಳುವುದು. ಜೋದ್‌ಪುರದಲ್ಲೂ ಒಂದಿಷ್ಟು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳುವ ಯೋಚನೆಯಿದೆ. ಚಿಕ್ಕಮಗಳೂರಿನ ಒಂದು ಲೊಕೇಶನ್‌ ಅಣ್ಣಾವ್ರಿಗೆ ತುಂಬಾ ಅಚ್ಚುಮೆಚ್ಚಾಗಿದೆಯಂತೆ.

‘ಭಕ್ತ ಅಂಬರೀಶ’ದಲ್ಲಿ ಅಪ್ಪಾಜಿ ದ್ವಿಪಾತ್ರ ಮಾಡಬೇಕಾಗಿದೆ. ದೀರ್ಘ ಕಾಲದ ನಂತರ ಅವರು ಮತ್ತೆ ಕ್ಯಾಮರಾ ಎದುರಿಸಲಿರುವುದರಿಂದ, ಈ ಚಿತ್ರಕ್ಕೂ ಮುಂಚೆ ಒಂದು ಸಾಮಾಜಿಕ ಅಥವಾ ಹಾಸ್ಯಮಯ ಚಿತ್ರದಲ್ಲಿ ನಟಿಸಿದರೆ ಒಗ್ಗಿಕೊಳ್ಳಲು ಸಲೀಸಾಗುತ್ತದೆ ಅನ್ನುವುದು ಶಿವರಾಜ್‌ಕುಮಾರ್‌ ಸಲಹೆ. ಆದರೆ, ಅಣ್ಣಾವ್ರ ಆತ್ಮವಿಶ್ವಾಸ ಕಿಂಚಿತ್ತೂ ಕುಂದಿಲ್ಲದಿರುವುದರಿಂದ ನೇರವಾಗಿ ‘ಅಂಬರೀಶ’ನಾಗಲು ಅವರು ಸರ್ವತಾ ಸಿದ್ಧ ಎನ್ನುವುದು ಪಾರ್ವತಮ್ಮನವರ ವಿಶ್ವಾಸ.

‘ಭಕ್ತ ಅಂಬರೀಶ’ನಿಗಾಗಿ ಹೊಲಿಸಿದ ಬಟ್ಟೆಗಳು ದರ್ಜಿಯ ಬಳಿ ಜೋಪಾನವಾಗಿವೆ. ಚಿತ್ರಕತೆಯ ಸ್ಕಿೃಪ್ಟೂ ಜತನವಾಗಿದೆ. ಹಂಸಲೇಖ ಹಾಕಿರುವ ಟ್ಯೂನುಗಳು ಹಳಸಿಲ್ಲ. ವಿಜಯಾ ರೆಡ್ಡಿ ನಿರ್ದೇಶಕನಾಗಿ ಇಟ್ಟುಕೊಂಡಿರುವ ಕಲ್ಪನೆಗಳು ಇವತ್ತಿಗೂ ಹಸುರಾಗಿವೆ. ಈ ಹಿಂದೆ ನಾಯಕಿಯರಾಗಿ ಭಾನುಪ್ರಿಯ ಹಾಗೂ ಜಯಸುಧಾ ಗೊತ್ತಾಗಿದ್ದರು. ಈಗ ಇವರ ಜಾಗಕ್ಕೆ ಹೊಸಬರನ್ನು ತರುವ ಉಮೇದಿ ಪಾರ್ವತಮ್ಮನವರದ್ದು. ಹೊಸದಾಗಿ ಯಾರು ಬರಬಹುದು ಎಂಬುದು ಇನ್ನೂ ಗುಟ್ಟು. ಉಳಿದಂತೆ ‘ಭಕ್ತ ಅಂಬರೀಶ’ನಲ್ಲಿ ಯಾವುದೇ ಬದಲಾವಣೆಯಿಲ್ಲ.

ಜೂನ್‌ ತಿಂಗಳಲ್ಲಿ ಮಿಯೋಟ್‌ ಆಸ್ಪತ್ರೆಯಲ್ಲಿ ಅಣ್ಣಾವ್ರು ತಮ್ಮ ಮಂಡಿ ಸರಿಯಾಗಿದೆಯೇ ಎಂದು ದೃಢಪಡಿಸಿಕೊಳ್ಳಲಿದ್ದಾರೆ. ಆ ನಂತರ ತಿರುಪತಿಯ ಬೆಟ್ಟ ಹತ್ತಿ ತಿಮ್ಮಪ್ಪನ ದರುಶನ ಪಡೆದು ಬರುವ ಬಯಕೆ. ಆಮೇಲೇನಿದ್ದರೂ ‘ಭಕ್ತ ಅಂಬರೀಶ’ನ ಧ್ಯಾನ.

ಎಲ್ಲವೂ ಸಾಂಗವಾಗಿ ನಡೆದರೆ ಇನ್ನು ಒಂದೂವರೆ ವರ್ಷದಲ್ಲಿ ‘ಭಕ್ತ ಅಂಬರೀಶ’ ತೆರೆಗೆ ಬರುತ್ತದೆ. ಅಣ್ಣಾವ್ರ ಅಭಿಮಾನಿಗಳ ಮುಗಿಲು ಮುಟ್ಟುವ ಕೇಕೆ ಹೊನಲಾಗುತ್ತದೆ. ವರನಟ ಬೇಗ ಕ್ಯಾಮರಾ ಮುಂದೆ ಬಂದು ನಿಲ್ಲಲಿ...ಅಲ್ಲವೇ ?

ವರನಟ ಮತ್ತೆ ಬಣ್ಣ ಹಚ್ಚುತ್ತಿರುವುದು ನಿಮಗೇನನ್ನಿಸುತ್ತೆ ?

ನಾಡೋಜನ ನಡೆಗಳು...
ನೆನಪು-ಕನಸುಗಳ ನಡುವೆ ನಾಡೋಜನ 75ನೇ ಹುಟ್ಟುಹಬ್ಬ
ರಾಜ್‌ ಎಂದರೆ ಏನು?- ಒಂದು ಅವಲೋಕನ
ಅಣ್ಣಾವ್ರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ
‘ಇನ್ನೂ ನಟಿಸುವಾಸೆ... ’

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada