»   » ಸದ್ಯಕ್ಕೆ ಬಾಬಾ ಸಿನಿಮಾ ಭರಾಟೆಯಲ್ಲಿ

ಸದ್ಯಕ್ಕೆ ಬಾಬಾ ಸಿನಿಮಾ ಭರಾಟೆಯಲ್ಲಿ

Posted By: *ಅಮೆಜಾನ್‌
Subscribe to Filmibeat Kannada

ಮೊನ್ನೆ ಮಂಡ್ಯದಲ್ಲಿ ಅಂಬಿ ಹುಟ್ಟುಹಬ್ಬದ ದಿನ ಪಟಪಟನೆ ಹಸನಾದ ಕನ್ನಡದಲ್ಲಿ ಮಾತಾಡುತ್ತಿದ್ದ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೂ ತಮ್ಮ ರಾಜಕೀಯ ಪ್ರವೇಶ 2002ನೇ ಇಸವಿಯಲ್ಲೇ ಆಗಲಿದೆ ಎಂಬುದು ಗೊತ್ತಿದ್ದಿರಲಿಕ್ಕಿಲ್ಲ ! ಆದರೆ ಒಬ್ಬ ಭವಿಷ್ಯಕಾರ ತುಂಬು ವಿಶ್ವಾಸದಿಂದ ರಜನಿ ರಾಜಕೀಯ ಭವಿಷ್ಯ ಹೇಳುತ್ತಿರುವುದಂತೂ ನಿಜ.

'ನ್ಯೂಸ್‌ ಟುಡೇ" ಎಂಬ ಸಂಜೆ ಪತ್ರಿಕೆಯಲ್ಲಿ ರಜನಿ ಉರುಫ್‌ 'ಬಾಬಾ" ಭವಿತವ್ಯ ಇಂಚಿಂಚೂ ಪ್ರಕಟವಾಗಿದೆ. ಕಲಿಯೂರು ನಾರಾಯಣನ್‌ ಎಂಬ ಭವಿಷ್ಯಕಾರ ರಜನಿ ಹಣೆ ಬರಹವನ್ನು ಓದಿಬಿಟ್ಟಿದ್ದಾರೆ. ಆತ ಹೇಳುವ ಪ್ರಕಾರ, ಇದೇ ವರ್ಷ ಜುಲೈ- ನವೆಂಬರ್‌ ಅವಧಿಯಲ್ಲಿ ರಜನಿಕಾಂತ್‌ ರಾಜಕೀಯ ಪ್ರವೇಶವಾಗುತ್ತದೆ. ಅದು ತುಂಬಾ ಜೋರಾಗಿರದೆ, ತಣ್ಣಗಿರುತ್ತದೆ.

ರಾಜಕಾರಣಿಯಾಗಿ ರಜನಿ ಕ್ಲಿಕ್ಕಾಗುವರೇ?
'ಖಂಡಿತ ಕ್ಲಿಕ್ಕಾಗುತ್ತಾರೆ", ಕವಡೆ ಎಸೆಯುತ್ತಲೇ ಹೇಳುತ್ತಾರೆ ನಾರಾಯಣನ್‌. ಆದರೆ ಬಗಲಿಗೇ ಹೀಗೆನ್ನುವ ಮೂಲಕ ರಜನಿ ಅಭಿಮಾನಿಗಳಿಗೆ ನಿರಾಶೆ ಹುಟ್ಟಿಸುತ್ತಾರೆ- ಮುಖ್ಯಮಂತ್ರಿ ಅಥವಾ ಯಾವುದೇ ಮಂತ್ರಿ ಹುದ್ದರಿ ರಜನಿಗೆ ಗಿಟ್ಟುವುದಿಲ್ಲ. 2004ನೇ ಇಸವಿಗೆ ರಜನಿಯ 'ಸ್ವಭುಕ್ತಿ" ಅರ್ಥಾತ್‌ ಶನಿ ಮಹಾದೆಶೆ ನೀಗುತ್ತದೆ. ಆ ನಂತರ ರಜನಿ ಮುಟ್ಟಿದ್ದೆಲ್ಲ ಚಿನ್ನ ! 2004ರಲ್ಲೇ ರಜನಿ ಹೊಸದೊಂದು ರಾಜಕೀಯ ಪಕ್ಷ ಕಟ್ಟುತ್ತಾರೆ. ಆದರೂ ಆ ಪಕ್ಷ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆಯಲ್ಲೇ ಹೆಜ್ಜೆ ಹಾಕುತ್ತದೆ.

ರಾಜಕೀಯ ಇರಲಿ, ರಜನಿ ಇನ್ನೂ ಏಣಿ ಹತ್ತುವುದು ಬಾಕಿ ಇದೆಯಾ?
ಬಾಕಿ ಇದೆ. ರಜನಿ ಎಂಜಿಆರ್‌ ಮಟ್ಟಕ್ಕೇರಬೇಕಿದೆ. ಖಂಡಿತ ಏರುತ್ತಾರೆ. ಸೂರ್ಯ ಮತ್ತು ಮಂಗಳನ ಕೃಪೆ ಬಲವಾಗಿರುವುದರಿಂದ ಇನ್ನು ಹದಿನೆಂಟು ವರ್ಷ ಮಾತಾಡೋ ಹಾಗೇ ಇಲ್ಲ, ರಜನಿ ಹಾದಿಯಲ್ಲಿ ಬರೀ ಹೂವೇ. ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ಆದಂತೆಯೇ ರಾಜಕೀಯದಲ್ಲೂ ಟ್ವಿಂಕಲ್‌ ಸ್ಟಾರ್‌ ಆಗುತ್ತಾರೆ ಅಂತಾರೆ ನಾರಾಯಣನ್‌.

ಈ ಬಗ್ಗೆ ರಜನಿಕಾಂತ್‌ ಅವರನ್ನು ಕೆಣಕಿದರೆ, ಕನ್ನಡದಲ್ಲೇ ನಗುತ್ತಾರೆ. ಉತ್ತರ ಮಾತ್ರ ಇಲ್ಲ. ಈ ನಗು ರಾಜಕೀಯ ಪ್ರವೇಶದ ಗ್ರೀನ್‌ ಸಿಗ್ನಲ್ಲೋ, ನಾರಾಯಣನ್‌ ಹೇಳುತ್ತಿರುವುದು ಸುಳ್ಳೆಂಬ ಅಭಿವ್ಯಕ್ತಿಯೋ ಗೊತ್ತಾಗುತ್ತಿಲ್ಲ.

English summary
Watch out for Babas party in 2004: Kaliyur Narayanan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada