twitter
    For Quick Alerts
    ALLOW NOTIFICATIONS  
    For Daily Alerts

    ಕಲಾಕ್ಷೇತ್ರದಲ್ಲಿ ‘ವಿಷ್ಣು’ ಸಹಸ್ರನಾಮ !

    By Staff
    |

    *ವಿಶಾಖ ಎನ್‌.

    ವೈಟ್‌ ಅಂಡ್‌ ವೈಟ್‌ನಲ್ಲಿದ್ದ ವಿಷ್ಣುವರ್ಧನ್‌ಗೆ ಜಲೀಲ ಕನ್ವರ್‌ಲಾಲ್‌ ಅಂಬಿಯಿಂದ ಸನ್ಮಾನ.

    ಜೀವಮಾನದ ಸಾಧನೆಗೆ ಈ ವರ್ಷ ಫಿಲ್ಮ್‌ಫೇರ್‌ ಪ್ರಶಸ್ತಿಗೆ ವಿಷ್ಣು ಭಾಜನರಾದ ಸಂತೋಷವನ್ನು ಜೋರಾಗಿ ಆಚರಿಸಲು ಕನ್ನಡ ಚಲನಚಿತ್ರ ಪ್ರಚಾರಕರ್ತರ ಸಂಘ ಕಂಡುಕೊಂಡ ಮಾರ್ಗ ಈ ಸನ್ಮಾನ. ಸನ್ಮಾನದ ನೆವದಲ್ಲಿ ಹಿಂಡು ತಾರೆಯರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಸಂಜೆ (ಜು. 9) ನೆರೆದಿದ್ದರು. ಪೊಲೀಸರು ಹಾಗೂ ಆಯೋಜಕರಿಗೆ ಒಲ್ಲದ ಅತಿಥಿಗಳಾದ ಅಭಿಮಾನಿಗಳು ಕೂಡ ಗಂಡಾಗುಂಡಿ ಮಾಡಿ ಜಮಾಯಿಸಿ, ‘ವಿಷ್ಣು’ ಸಹಸ್ರನಾಮ ಶುರುವಿಟ್ಟುಕೊಂಡ ಕಾರಣ ಸಮಾರಂಭ ಅಕ್ಷರಶಃ ಗದ್ದಲಮಯವಾಗಿತ್ತು. ಇಂಥಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಮಾಧಾನದಿಂದ ಕಾರ್ಯಕ್ರಮ ನಿರ್ವಹಿಸಿದ ಅಪರ್ಣಾಗೆ ಪ್ರಚಾರಕರ್ತರು ಥ್ಯಾಂಕ್ಸ್‌ ಹೇಳಲಿ.

    ‘ನನಗೆ ಅಭಿಮಾನಿಗಳು ಕೊಟ್ಟಿರುವ ಪ್ರಶಸ್ತಿಗಳು ಏಳೇಳು ಜನ್ಮಕ್ಕೆ ಆಗುವಷ್ಟಿದೆ. 30 ವರ್ಷಗಳ ಸಿನಿಮಾ ಜೀವನದಲ್ಲಿ ನಾನು ಏನು ಗಳಿಸಿದ್ದೇನೋ ಅದನ್ನೆಲ್ಲ ಹಂಚಿಕೊಂಡಿದ್ದೇನೆ. ಮೈಸೂರಿನಲ್ಲಿ 30 ಕೋಟಿ ರುಪಾಯಿ ವೆಚ್ಚದಲ್ಲಿ ವಿಕ್ರಂ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಉಪಹಾರ ದರ್ಶಿನಿಯಾಂದನ್ನು ಕಟ್ಟಲಾಗುತ್ತಿದೆ. ಈ ಯೋಜನೆಗಳಲ್ಲಿ ನನ್ನ ಪಾಲೂ ಇದೆ. ಅಗತ್ಯವಿರುವವರು ಆಸ್ಪತ್ರೆಯ ಸೇವೆ ಪಡೆಯಲಿ.

    ‘ಈ ಎಲ್ಲ ಪ್ರಶಸ್ತಿ ಪುರಸ್ಕಾರಗಳು ಹೊರೆಯಾಗಿದೆ. ನಾನು ಸಣ್ಣವನಾಗಿದ್ದೇನೆ. ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ ಬಂದಾಗಿನಿಂದ ಈವರೆಗೆ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿದ್ದೇನೆ. ಈವರೆಗೆ ನಾನು ಏನಾದರೂ ಸಾಧಿಸಿದ್ದರೆ ಅದಕ್ಕೆ ಅಭಿಮಾನಿಗಳ ಪ್ರೀತಿಯೇ ಕಾರಣ. ಅದಕ್ಕೆ ನಾನು ಯೋಗ್ಯನೋ ಅಲ್ಲವೋ ಗೊತ್ತಿಲ್ಲ. ಈ ರೀತಿಯ ಸನ್ಮಾನಗಳಿಗೆ ನಾನು ಅರ್ಹನೋ ಅಲ್ಲವೋ ಅಂತ ಪದೇಪದೇ ಯೋಚಿಸುತ್ತೇನೆ. ನನಗೆ ಸನ್ಮಾನ ಮಾಡುವುದು ಇವೆರೆಲ್ಲರಿಗೆ ಬೇಕಾಗಿದೆ. ವೈಯಕ್ತಿಕವಾಗಿ ನನಗೆ ಇವೆಲ್ಲ ಸಾಕು ಅನಿಸಿಬಿಟ್ಟಿದೆ. ಅಭಿಮಾನಿಗಳ ಹೊಗಳಿಕೆಗಿಂತ ಇನ್ಯಾವ ಪ್ರಶಸ್ತಿ ಬೇಕು ಹೇಳಿ. ಸಿನಿಮಾ ಮೂಲಕ ಭಾಷೆಯ ಬಗ್ಗೆ ಪ್ರೀತಿ ಹೆಚ್ಚಿಸುವುದು ನಮ್ಮೆಲ್ಲರ ಹೊಣೆಗಾರಿಕೆ....’

    ವಿಷ್ಣು ಮಾತು ಮುಗಿಸುವ ಸೂಚನೆ ಕೊಡುತ್ತಿದ್ದಂತೆ ಹಾಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಅಭಿಮಾನಿಗಳ ಹಲ್ಲಾಗುಲ್ಲಾ ನಡುವೆ ವಿಷ್ಣು ಹಾಡಲೇಬೇಕಾಯಿತು. ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲು ಇರುವೆ...’ ಹಾಡಿನ ಕೆಲವು ಸಾಲುಗಳು ಅಭಿಮಾನಿಗಳ ಗದ್ದಲದ ನಡುವೆ ಅಸ್ಪಷ್ಟವಾಗಿ ಕೇಳಿತು.

    ಅದಕ್ಕೂ ಮುಂಚೆ ವಿಷ್ಣುವರ್ಧನ ಅಂತ ನಾಮಕರಣ ಮಾಡಿ ಸಿನಿಮಾಗೆ ಪರಿಚಯಿಸಿದ ಪುಟ್ಟಣ್ಣ ಕಣಗಾಲ್‌ ನೆನಕೆ. ಅದನ್ನು ಹಂಚಿಕೊಳ್ಳಲು ಅವರ ಹೆಂಡತಿ ನಾಗಲಕ್ಷ್ಮಿ ಅಲ್ಲಿದ್ದರು. ವಿಷ್ಣು ಏಳಿಗೆಗೆ ಏಣಿ ಹಾಕಿದ ಇನ್ನೊಬ್ಬ ನಿರ್ಮಾಪಕ, ರವಿಚಂದ್ರನ್‌ ಅಪ್ಪ ವೀರಾಸ್ವಾಮಿ ಅವರನ್ನೂ ಮಿಸ್‌ ಮಾಡಿಕೊಳ್ಳಲಾಯಿತು. ಅವರ ಸ್ಥಾನ ತುಂಬಲು ಪಟ್ಟಮ್ಮಾಳ್‌ ವೀರಾಸ್ವಾಮಿ ಬಂದಿದ್ದರು. ಇವರಿಬ್ಬರ ಜೊತೆಗೆ ಜಯಂತಿ ಹಾಗೂ ಭಾರತಿ ಜ್ಯೋತಿ ಬೆಳಗುವ ಮೂಲಕ ವಿಷ್ಣು ಸನ್ಮಾನ ಸಮಾರಂಭಕ್ಕೆ ನಾಂದಿ ಹಾಡಿದರು.

    ಇದಕ್ಕೆ ವೇದಿಕೆ ಹಾಕಿಕೊಟ್ಟಿದ್ದು ಅರಳು ಹುರಿದಂತೆ ಮಾತಾಡುವ ಚಿತ್ರನಟ ರಮೇಶ್‌. ಬೊಬ್ಬೆ ಹೊಡೆಯುತ್ತಿದ್ದ ಪ್ರೇಕ್ಷಕರ ಸದ್ದಡಗಿಸಿ, ಲವಲವಿಕೆಯಿಂದ ಕಾರ್ಯಕ್ರಮಕ್ಕೆ ಪ್ರಸ್ತಾವನೆ ಹಾಕಿಕೊಟ್ಟ ರಮೇಶ್‌, ವಿಷ್ಣುವರ್ಧನ್‌ ಅವರನ್ನು ವಾಚಾಮಗೋಚರ ಹೊಗಳಿದರು. ಹೈದರಾಬಾದ್‌ನಲ್ಲಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಡಿ.ರಾಮನಾಯ್ಡು, ರಾಘವೇಂದ್ರ ರಾವ್‌ ಥರದ ಘಟಾನುಘಟಿಗಳೂ ಎದ್ದು ನಿಂತು ಗೌರವ ಸೂಚಿಸಿದ್ದನ್ನು ನೆನಪಿಸಿದರು. ‘ಸಿಂಹಾಸನ ಸಿದ್ಧವಿದೆ. ಸಿಂಹ ಬರೋದು ಬಾಕಿಯಿದೆ’ ಅಂತ ಕೇಕೆ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದರು. ವಿಷ್ಣು ಸಿಂಹಾಸನದ ಮೇಲೆ ಕೂತಾಗ ‘ಸಿಂಹಾಸನಕ್ಕೆ ಈಗ ಕಳೆ ಬಂತು’ ಎಂದು ಹೇಳಿ, ನಟರ ನಟ ಎಂದು ಬಣ್ಣಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

    ಸಂಸದ, ವಿಷ್ಣುವಿನ ಜೀವದ ಗೆಳೆಯ ಅಂಬರೀಶ್‌ ಕೆಂಪು ಶಾಲು ಹೊದಿಸಿ, ದೊಡ್ಡ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ವಿಷ್ಣು ಅವರಿಗೆ ಸನ್ಮಾನ ಮಾಡಿದರು. ಅದಕ್ಕೂ ಮುಂಚೆ 7 ಅರ್ಚಕರು ಮಂತ್ರಪಠಿಸಿ ವಿಷ್ಣು ಹಾಗೂ ಭಾರತಿ ದಂಪತಿಗಳನ್ನು ಆಶೀರ್ವದಿಸಿದರು.

    ಅಂಬಿ ವಿಷ್ಣುವನ್ನು ತಬ್ಬಿದ ಪರಿಯಲ್ಲಿ ಮೊದಲಿನ ಬಿಗುವಿರಲಿಲ್ಲ. ಸಾಮಾನ್ಯವಾಗಿ ವಿಷ್ಣು ಅಂದೊಡನೆ ಯದ್ವಾತದ್ವಾ ಭಾವುಕರಾಗುವ ಅವರು ತಣ್ಣಗೇ ಇದ್ದರು. ಇಲ್ಲಿನ ಗದ್ದಲ ಪ್ರಿಯ ಅಭಿಮಾನಿಗಳ ಅಭಿಮಾನವನ್ನು ಕೊಂಡಾಡಿದ ಅಂಬಿ, ಫಿಲಂಫೇರ್‌ ಪ್ರಶಸ್ತಿ ಸಮಾರಂಭಕ್ಕೆ ತಮ್ಮನ್ನು ಕರೆದುಕೊಂಡು ಹೋಗದ್ದಕ್ಕೆ ಸಣ್ಣ ಬೇಜಾರನ್ನು ವ್ಯಕ್ತಪಡಿಸಿದರು. ವಿಷ್ಣು ಇನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯೋದಷ್ಟೇ ಬಾಕಿ, ಅವರಿಗೆ ಪದ್ಮಭೂಷಣ ಸಿಗಬೇಕು ಅಂದರು.

    ಆಮೇಲೆ ಒಬ್ಬೊಬ್ಬರಾಗಿ ನಟ- ನಟಿ- ನಿರ್ಮಾಪಕರು ವಿಷ್ಣು ಅವರ ಅಭಿನಂದನೆಗೆ ಮುಂದಾದರು. ನಿರ್ಮಾಪಕರಾದ ವಿಜಯಕುಮಾರ್‌, ಕೊಬ್ರಿ ಮಂಜು, ಸೂರಪ್ಪ ಬಾಬು, ಸೂಪರ್‌ ಸ್ಟಾರ್‌ ಉಪೇಂದ್ರ, ನಟಿ ಪ್ರೇಮಾ, ಹಿರಿಯ ನಟಿ ಕಾಂಚನ, ಸುಂದರರಾಜ್‌, ಪ್ರಮೀಳಾ ಜೋಷಾಯ್‌, ದೊಡ್ಡಣ್ಣ, ಶಿವರಾಂ, ಅಭಿಜಿತ್‌, ಚರಣ್‌ರಾಜ್‌... ಪಟ್ಟಿ ಬೆಳೆಯುತ್ತಲೇ ಇತ್ತು. ಈ ಪೈಕಿ ಕೆಲವರಾಡಿದ ಮಾತಿನ ಆಯ್ದ ಸಾರ...

    ಉಪೇಂದ್ರ : ಮೇರು ಪರ್ವತ ಮುಂದೆ ನಿಂತಿದೆ. ನಾನೇನು ಹೇಳಲಿ. ನಿಜ ಹೇಳಬೇಕು ಅಂದರೆ ನಾನು ನೋಡಿದ ಮೊದಲ ಚಿತ್ರ ನಾಗರಹಾವು.

    ಪ್ರೇಮ : ಅವರಿಗೆ ಸಿಕ್ಕಿರುವ ಅಭಿಮಾನಿಗಳನ್ನು ನೋಡಿದರೆ ನಂಗೂ ಹಾಗೆ ಬೆಳೀಬೇಕು ಅನ್ನಿಸುತ್ತಿದೆ. ಅವರ ಜೊತೆ ನಟಿಸಿದ ‘ಯಜಮಾನ’ ಚಿತ್ರವನ್ನು ನಾನು ಮುದುಕಿ ಆಗೋವರೆಗೂ ನೋಡಬಹುದು. ಅಷ್ಟು ಚೆನ್ನಾಗಿದೆ. (ಹಾಡಿಗೆ ಯದ್ವಾತದ್ವಾ ಡಿಮ್ಯಾಂಡು ಬಂದಾಗ ಪ್ರೇಮ ‘ಬಾಳ ಬಂಗಾರ ನೀನು.. ’ ಹಾಡಿದರು. ಈಯಮ್ಮಂಗೆ ಈ ಹಾಡು ಬಿಟ್ಟು ಬೇರೆ ಹಾಡೋಕೆ ಬರಲ್ವೆನೋ ಅಂತ ಪಕ್ಕದ ಪ್ರೇಕ್ಷಕನೊಬ್ಬ ಮಾಡಿದ ಆರೋಪಕ್ಕೆ ಹುರುಳಿತ್ತು.)

    ಕಾಂಚನ : ಆ ವಯಸ್ಸಿಲ್ಲಿ ನಿಮಗಿಂತ ಜೋರಾಗಿ ಇವರು ಹಾಡಿ ಕುಣೀತಿದ್ರು. ವಿಷ್ಣು ಕಣ್ಣಲ್ಲೇ ಎಲ್ಲ ಮಾಡಿ ತೋರಿಸ್ತಾರೆ; ಫೈಟಿಂಗೂ ಕೂಡ. ಭಾರತಿ ಚೆನ್ನಾಗಿ ಹಾಡ್ತಾರೆ. ಇವರು, ನಾನು, ವಿಷ್ಣು ಸೇರಿ ಒಂದು ಹಾಡು ಹಾಡಿದ್ದೆವು. ಅವರಿಗೆ ದೇವರು ಆಯುರಾರೋಗ್ಯ ಕೊಡಲಿ.

    ಸುಂದರರಾಜ್‌ : ನಾವು ನ್ಯಾಷನಲ್‌ ಕಾಲೇಜಿನ ಗೆಳೆಯರು. ಇವನು ಕೈಲಾಸಂ ನಾಟಕದ ಪೋಲಿ ಕಿಟ್ಟಿ ಥರ ಇದ್ದ. ಈಗ ಬೆಳೆದಿರೋದನ್ನ ನೋಡಿದರೆ ಖುಷಿ ಆಗುತ್ತೆ. ಈಚೆಗೆ ಶೂಟಿಂಗಲ್ಲಿ ಒಂದು ಶಾಟ್‌- ನಾನು, ಅನು ಪ್ರಭಾಕರ್‌, ವಿಷ್ಣು ಅಭಿನಯಿಸಿದೆವು. ನಾನು ಭಾವುಕನಾಗಿ ಅಳುವ ದೃಶ್ಯ ಅದು. ಶಾಟ್‌ ಮುಗಿದಾಗ ವಿಷ್ಣು ಕೂಡ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಅವರ ಮಾತುಗಳಿಗೆ ಮೋಡಿ ಮಾಡುವ ತಾಕತ್ತಿದೆ.

    ಶಿವರಾಂ : ವಿಷ್ಣುವರ್ಧನ್‌ಗೆ ಪದ್ಮಶ್ರೀ, ಪದ್ಮಭೂಷಣಗಳ ಸುರಿಮಳೆಯಾಗಬೇಕು. ಅದಾಗದಿರುವುದು ದುರಂತ. ಇದು ಉತ್ಪ್ರೇಕ್ಷೆ ಅಥವಾ ಭಾವಾವೇಶದ ಮಾತಲ್ಲ.

    ಅನು ಪ್ರಭಾಕರ್‌, ಉಮೇಶ್‌, ಶಿವಧ್ವಜ್‌, ಅರವಿಂದ್‌, ಬ್ಯಾಂಕ್‌ ಜನಾರ್ದನ ಮೊದಲಾದವರು ಸಮಾರಂಭವನ್ನು ಕಣ್ತುಂಬಿಕೊಂಡರು.

    ಜಯನಗರದ ಜಯಸಿಂಹನಿಗೆ, ಧರ್ಮಸ್ಥಳದ ಧರ್ಮಾತ್ಮ, ಗಾಂಧಿನಗರದ ಗಾಂಧಿಗೆ, ನಮ್ಮನೆ ದೇವ್ರಿಗೆ, ತಿರುಪತಿ ತಿಮ್ಮಪ್ಪ ವಿಷ್ಣುವರ್ಧನ್‌ಗೆ, ಶಬರಿಮಲೆ ಅಯ್ಯಪ್ಪ ವಿಷ್ಣುವರ್ಧನ್‌ಗೆ... ಅಭಿಮಾನಿಗಳ ಭಾವಾವೇಶದ ಘೋಷಣೆಗಳು ಸಮಾರಂಭದುದ್ದಕ್ಕೂ ಪ್ರತಿಧ್ವನಿಸಿದವು. ಸಮಾರಂಭ ಹಸನಾಗುವುದಕ್ಕೆ ಅಡ್ಡಗಾಲುಗಳಾಗಿದ್ದೂ ಈ ಘೋಷಣೆಗಳೇ.

    Post Your Views

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 0:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X