For Quick Alerts
  ALLOW NOTIFICATIONS  
  For Daily Alerts

  ‘ರಾಜ’ ಸನ್ಮಾನದ ಮಧ್ಯೆ ಧನ್ಯಮಿಲನ!

  By Staff
  |

  (ನಮ್ಮ ಪ್ರತಿನಿಧಿಯಿಂದ)

  ಬೆಂಗಳೂರು : ಬಣ್ಣದ ಬದುಕಿನಲ್ಲಿ ಡಾ.ರಾಜಕುಮಾರ್‌ ಐದು ದಶಕಗಳನ್ನು ಪೂರ್ಣಗೊಳಿಸಿದ ಸಂಭ್ರಮ, ನಿಜಕ್ಕೂ ಅಲ್ಲಿ ಕಳೆಗಟ್ಟಿತ್ತು. ಆ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗಲು ನಗರದ ನಾಲ್ಕು ಮೂಲೆಗಳಿಂದ ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಜಮಾಯಿಸಿದ್ದರು.

  ಅಭಿಮಾನಿಗಳ ಕರತಾಡನ, ಮುಗಿಲು ಮುಟ್ಟುವ ಜಯಘೋಷಗಳ ನಡುವೆ ರಾಜ್‌ಕುಮಾರ್‌ ಅವರನ್ನು ಮುಖ್ಯಮಂತ್ರಿ ಧರ್ಮಸಿಂಗ್‌, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪರವಾಗಿ ಸನ್ಮಾನಿಸಿದರು. ನಿಜಕ್ಕೂ ಅದು ‘ರಾಜ’ ಸನ್ಮಾನ! ಅಭಿಮಾನಿಗಳು ಹುಚ್ಚೆದ್ದು ಕುಣಿದರು, ಕಣ್ಣುಗಳು ಸಹಜವಾಗಿಯೇ ತೇವಗೊಂಡಿದ್ದವು. ಆಕಾಶದಲ್ಲಿ ಪಟಾಕಿಗಳ ಬಣ್ಣದ ಲೋಕ...ಬೆಲೂನುಗಳು ಹಾರಾಟ...

  ಈ ಐತಿಹಾಸಿಕ ಹೃದಯಸ್ಪರ್ಶಿ ಸಮಾರಂಭದಲ್ಲಿ ರಾಜ್‌ ಭಾವುಕರಾದರು. ಮಾತನಾಡಲು ತಡವಡಿಸಿದರು. ಅಭಿಮಾನಿಗಳ ಋಣ ತೀರಿಸುವ ಬಗೆ ಹರಿಯದೇ ಕಗ್ಗಾಬಿಗ್ಗಿಯಾದರು!

  ನನಗೆ ದಕ್ಕಿದ ಅನ್ನ, ಅಂತಸ್ತು, ಗೌರವ ಎಲ್ಲವೂ ಅಭಿಮಾನಿಗಳ ಕೃಪೆ. ಯಾವುದನ್ನೂ ನಾನು ಸಂಪಾದಿಸಿಲ್ಲ. ನಾನು ಸಂಪಾದಿಸಿದ್ದು ಅವರ ಪ್ರೀತಿ. ಅವರೇ ನನ್ನ ಅನ್ನದಾತರು. ಅಭಿಮಾನಿಗಳು ನನ್ನ ಪಾಲಿನ ದೇವರುಗಳು ಎಂದು ರಾಜ್‌ ಎದೆಯಾಳದಿಂದ ಹೇಳುತ್ತಿದ್ದರೆ, ಯಾವುದೋ ಸಮ್ಮೋಹನಕ್ಕೆ ಸಿಲುಕಿದಂತೆ ಸಭೆಯಲ್ಲಿದ್ದವರ ಮೈಯೆಲ್ಲಾ ಕಿವಿಗಳಾಗಿದ್ದವು.

  ಬರಗೂರರ ಅಭಿನಂದನೆ : ಸಮಯದ ಅಭಾವದಿಂದ ಬರಗೂರರ ಅಭಿನಂದನಾ ಭಾಷಣಕ್ಕೆ ಸಂಘಟಕರು ಎರಡು ನಿಮಿಷ ಕಾಲಾವಕಾಶ ನೀಡಿದ್ದು, ಟೀಕೆಗೆ ಗುರಿಯಾಯಿತು. ಬಂಗಾರದ ಮನುಷ್ಯನಾಗುವ ಮುನ್ನ ರಾಜ್‌ ಬೆವರಿನ ಮನುಷ್ಯರಾಗಿದ್ದರು. ಬೆವರಿನ ಮನುಷ್ಯ ಬಂಗಾರದ ಮನುಷ್ಯನಾದದ್ದು ನಿಜಕ್ಕೂ ಸಾಧನೆಯೇ ಸರಿ. ಕುವೆಂಪು ನಿಸರ್ಗದಲ್ಲಿ ದೇವರನ್ನು ಕಂಡರೆ, ರಾಜ್‌ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಇಂತಹ ಮನಸ್ಥಿತಿ ಸಾಮಾನ್ಯರಿಗೆ ದಕ್ಕದು ಎಂದು ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

  ಜಯಂತಿ ಮುತ್ತು : ನಟಿ ಜಯಂತಿ ರಾಜ್‌ಗೆ ತಮ್ಮ ಎಂದಿನ ಶೈಲಿಯಲ್ಲಿಯೇ ಮುತ್ತು ನೀಡಿ, ಇವರು ನಮ್ಮ ರಾಜ್‌, ನನ್ನ ರಾಜ್‌, ಈ ಮಾತಿನಿಂದ ಮೇಡಂ ಅವರಿಗೆ ಬೇಸರವಾಗುವುದಿಲ್ಲ ಎಂದು ತಮ್ಮ ಆತ್ಮೀಯತೆಯನ್ನು ಒತ್ತಿ ಹೇಳಿದರು.

  ಯೋಗ-ಯೋಗ್ಯತೆ : ರಾಜಣ್ಣ ಎಂದು ಸಂಬೋಧಿಸಿದ ನಟ ವಿಷ್ಣು, ರಾಜ್‌ ಬಗ್ಗೆ ಮಾತನಾಡಲು ನನಗೆ ಯೋಗ್ಯತೆಯಿಲ್ಲ...ಆದರೆ ಯೋಗ್ಯತೆ ಇದೆ. ಅವರ ಎತ್ತರ ತಲುಪಲು ಯಾರಿಗೂ ಸಾಧ್ಯವಿಲ್ಲ ಎಂದರು.

  ಸಾರ್ಥಕ ಸುವರ್ಣದ ಮಿಂಚುಗಳು :

  • ವೈದ್ಯ ಡಾ.ರಮಣರಾವ್‌, ಪತ್ನಿ ಪಾರ್ವತಮ್ಮ ಅವರೊಂದಿಗೆ ರಾತ್ರಿ 8.40ಕ್ಕೆ ವೇದಿಕೆ ಏರಿದ ರಾಜ್‌ಕುಮಾರ್‌ ಬಳಲಿದಂತೆ ಕಂಡು ಬಂದರು. ಮೊಣಕಾಲ ನೋವು ಪೀಡಿಸುತ್ತಿರುವಂತೆ, ನಡೆಯಲು ಮತ್ತು ಕುರ್ಚಿಯಿಂದ ಎದ್ದು ನಿಲ್ಲಲು ಅವರು ಸಾಕಷ್ಟು ಕಷ್ಟಪಡುತ್ತಿದ್ದರು. ತಮ್ಮ ನೋವುಗಳ ನಡುವೆಯೂ ರಾಜ್‌ ಮುಖದಲ್ಲಿ ಸಂತೃಪ್ತಿ ಎದ್ದು ಕಾಣುತ್ತಿತ್ತು.
  • ಕನ್ನಡ ಚಿತ್ರರಂಗದ ತಾರಾಮೇಳವನ್ನು ಕಂಡು ನಾಚಿದ ತಾರೆಗಳು ಗಗನದಲ್ಲಿ ನಾಪತ್ತೆಯಾಗಿದ್ದವು.
  • ರವಿಚಂದ್ರನ್‌, ದರ್ಶನ್‌, ಸುದೀಪ್‌, ಸುನಿಲ್‌, ಉಪೇಂದ್ರ, ಶಶಿಕುಮಾರ್‌, ರಕ್ಷಿತಾ, ಪ್ರೇಮಾ, ಜಯಮಾಲ, ರಮ್ಯ, ಪುನೀತ್‌ ಸೇರಿದಂತೆ ಕನ್ನಡ ಚಿತ್ರರಂಗವೆಲ್ಲ ಒಂದೇ ವೇದಿಕೆಯಲ್ಲಿತ್ತು.
  • ರವಿಚಂದ್ರನ್‌ ಅವರ ಕೈಗೆ ರಾಜ್‌ ಮುತ್ತಿನ ಕೊಡುಗೆ ನೀಡಿದರು.
  • ದೊಡ್ಡ ನಟನ ಬಾಯಲ್ಲಿ ನನ್ನ ಬಗೆಗೆ ಎರಡು ಒಳ್ಳೆಯ ಮಾತು ಕೇಳಿ ನನ್ನ ಜನ್ಮ ಸಾರ್ಥಕವಾಯಿತು. ಕನ್ನಡದ ಶಕ್ತಿಯಾಗಿ ರಾಜ್‌ ಬೆಳೆದಿದ್ದಾರೆ. ಅವರ ಯಶಸ್ಸಿನ ಹಿಂದಿರುವ ಪಾರ್ವತಮ್ಮ ಅವರಿಗೆ ಅಭಿನಂದನೆಗಳು ಎಂದವರು ಅಂಬರೀಷ್‌.
  • ರಾಜ್ಯ ಸರ್ಕಾರ ಮಾಡಿದ ಅಪರೂಪದ ಒಳ್ಳೆ ಕೆಲಸ ಈ ಕಾರ್ಯಕ್ರಮ ರೂಪಿಸಿದ್ದು ಎಂದ ನಟ ಮುಖ್ಯಮಂತ್ರಿ ಚಂದ್ರು ಅವರು, ರಾಜ್‌ ಕನ್ನಡ ಹೋರಾಟದ ಸಾರಥ್ಯವಹಿಸಬೇಕು. ಅವರ ಹಿಂದೆ ನಾವಿರುತ್ತೇವೆ ಎಂದರು.
  • ರಾಜ್‌ ಅನಾರೋಗ್ಯದಿಂದ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟ ಬೇಕು’ ಎಂಬ ಹಾಡಿಲ್ಲದೇ ಕಾರ್ಯಕ್ರಮ ಮುಕ್ತಾಯವಾಯಿತು.
  • ‘ಕನ್ನಡವೇ ಸತ್ಯ’ ಖ್ಯಾತಿಯ ಗಾಯಕ ಸಿ. ಅಶ್ವಥ್‌ ಅವರ ‘ಜಯ ಭಾರತ ಜನನಿಯ ತನುಜಾತೆ ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಾಡಗೀತೆಗೆ ಗೌರವ ಸಲ್ಲಿಸಲು ಎದ್ದು ನಿಂತ ಮುಂದಿನ ಸಾಲು, ಹಿಂದಿನವರ ಕಲ್ಲುಗಳಿಗೆ ಬಲಿಯಾಗಬೇಕಾಯಿತು.
  • ‘ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡನ್ನು ನಟ ಸುನಿಲ್‌ ಹಾಡಿದರು. ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಎನ್ನುವ ಹಾಡು ಹಾಡಿದ ನಟ ಜಗ್ಗೇಶ್‌, ವೇದಿಕೆಯಿಂದಲೇ ತುರುವೇಕೆರೆ ಮತದಾರರಿಂದ ಮತಯಾಚಿಸಿದರು.
  • ‘ಲೇಲೇ ಅಪ್ಪನ ಮಗಳೇ’ ಹಾಡಿಗೆ ರಾಧಿಕಾ ಮತ್ತು ಮಯೂರ್‌, ‘ನಾರಿಯ ಸೀರೆ ಕದ್ದ ’ ಹಾಡಿಗೆ ನಟ ಮುರಳಿ ಮತ್ತು ತಂಡ ಹೆಜ್ಜೆ ಹಾಕಿತು. ‘ಎಂದೆಂದು ನಿನ್ನನು ಮರೆತು ಬದುಕಿರಲಾರೆ ’ ಹಾಡಿಗೆ ಶಿವರಾಜ್‌ಕುಮಾರ್‌ ಧ್ವನಿನೀಡಿದರು.
  • ಮಂಜುಳಾ ಗುರುರಾಜ್‌, ನಂದಿತಾ ಸೇರಿದಂತೆ ಸೀಮಿತ ಗಾಯಕರ ಹಾಡುಗಳು ಕಾರ್ಯಕ್ರಮಕ್ಕೆ ಏಕತಾನತೆ ತಂದವು.
  • ಕಾರ್ಯಕ್ರಮದ ಮೊದಲ ಘಟ್ಟದಲ್ಲಿ ಮಿಮಿಕ್ರಿ ದಯಾನಂದ್‌ ನಿರೂಪಣೆ ಸೊಗಸಾಗಿತ್ತು. ನಂತರ ಎರಡನೇ ಘಟ್ಟದಲ್ಲಿ ನಿರೂಪಣೆ ಪೇಲವವಾಗಿತ್ತು.
  • ಜೂನಿಯರ್‌ ರಾಜ್‌ಕುಮಾರ್‌ ಅಶೋಕ್‌ ಬಸ್ತಿ, ಬಬ್ರುವಾಹನ ಮತ್ತು ಹಿರಣ್ಯಕಶಿಪುವಿನ ಸಂಭಾಷಣೆ ಹೇಳಿದಾಗ ಚಪ್ಪಾಳೆಗಳ ಸುರಿಮಳೆಯಾಯಿತು.
  • ಪಾಸ್‌ಗಳನ್ನು ಅರಮನೆ ಮೈದಾನದಲ್ಲಿ ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪಾಸ್‌ ಮತ್ತು ಆಹ್ವಾನ ಪತ್ರಿಕೆ ಇಲ್ಲದವರು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಬೇಕಾಯಿತು. ನಟ ಮುಖ್ಯಮಂತ್ರಿ ಚಂದ್ರು ಅವರ ಪತ್ನಿಯನ್ನು ತಡೆದ ಪೊಲೀಸ್‌ ಅಧಿಕಾರಿ ಗೆಟ್‌ಔಟ್‌ ಎಂದ ಘಟನೆಯೂ ನಡೆಯಿತು.
  • ವಾರ್ತಾ ಸಚಿವ ಬಿ. ಶಿವರಾಂ, ರಾಜ್‌ ಸಾಧನೆ ಬಿಂಬಿಸುವ ‘ಬಂಗಾರದ ಮನುಷ್ಯ’(ಲೇಖಕ -ಪ್ರಹ್ಲಾದ ರಾವ್‌) ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
  ಕೇಂದ್ರ ಸಚಿವ ಎಂ. ವಿ. ರಾಜಶೇಖರನ್‌, ಸಚಿವ ಮಲ್ಲಿಕಾರ್ಜುನ ಖರ್ಗೆ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ಶಾಸಕರಾದ ನೆ. ಲ. ನರೇಂದ್ರಬಾಬು, ದಿನೇಶ್‌ ಗುಂಡೂರಾವ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X